ಬೆಂಗಳೂರು: “ಹರ್ ಘರ್ ತಿರಂಗಾ’ ಅಭಿಯಾನ ಹಿನ್ನೆಲೆಯಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ರಾಷ್ಟ್ರಧ್ವಜವನ್ನು ಸಾರ್ವಜನಿಕರಿಗೆ 22 ರೂ.ಗೆ ಮಾರಾಟ ಮಾಡಲು ದರ ನಿಗದಿ ಮಾಡಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಮನೆ, ಕಟ್ಟಡದಲ್ಲೂ ರಾಷ್ಟ್ರಧ್ವಜ ಹಾರಾಡಬೇಕೆಂಬ ಕಾರಣಕ್ಕಾಗಿ “ಹರ್ ಘರ್ ತಿರಂಗಾ’ ಅಭಿಯಾನ ನಡೆಸುತ್ತಿದೆ.
ರಾಜ್ಯದಲ್ಲೂ ಅಭಿಯಾನ ಯಶಸ್ವಿಗೊಳಿಸುವ ಸಲುವಾಗಿ 50 ಲಕ್ಷ ಧ್ವಜಗಳನ್ನು ಹಂಚಲಾಗುತ್ತಿದೆ. ಅದರಲ್ಲಿ ಕೇಂದ್ರ ಸರ್ಕಾರದಿಂದ ಈಗಾಗಲೇ 25 ಲಕ್ಷ ಧ್ವಜಗಳು ರಾಜ್ಯಕ್ಕೆ ಕಳುಹಿಸಲಾಗಿದೆ.
ಈ ರಾಷ್ಟ್ರಧ್ವಜಗಳನ್ನು ಬಿಬಿಎಂಪಿ ಸೇರಿ ಜಿಲ್ಲಾಮಟ್ಟದಲ್ಲಿ ಸಾರ್ವಜನಿಕರಿಗೆ ಹಂಚಲಾಗುತ್ತಿದೆ. ಹೀಗೆ ಧ್ವಜ ಪಡೆಯುವ ಸಾರ್ವಜನಿಕರು ಅದಕ್ಕೆ ಬದಲಾಗಿ 22 ರೂ. ಹಣ ನೀಡಬೇಕಿದೆ.
ಸಾರ್ವಜನಿಕರಿಂದ ಪಡೆದ ಹಣವನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಅಧೀನದಲ್ಲಿನ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬೇಕಿದೆ. ಅಭಿಯಾನ ಅಂತ್ಯವಾದ ನಂತರ ಹರ್ ಘರ್ ತಿರಂಗಾ ಹೆಸರಿನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿದೆ.