Advertisement

ರಾಜ್ಯದ ಇಬ್ಬರ ಸಹಿತ 22 ಮಂದಿಗೆ ಶೌರ್ಯ ಪ್ರಶಸ್ತಿ

09:36 AM Jan 23, 2020 | mahesh |

ಹೊಸದಿಲ್ಲಿ: ತಮ್ಮನ ಜೀವ ಉಳಿಸಿದ ಅಕ್ಕ ಆರತಿ, ಆ್ಯಂಬುಲೆನ್ಸ್‌ಗೆ ದಾರಿ ತೋರಿದ ಬಾಲಕ ವೆಂಕಟೇಶ್‌ಗೆ ಪ್ರಸಕ್ತ ಸಾಲಿನ ಶೌರ್ಯ ಪ್ರಶಸ್ತಿಯ ಗೌರವ ಸಂದಿದೆ. ಕರ್ನಾಟಕದ ಈ ಇಬ್ಬರು ಮಕ್ಕಳು ಸೇರಿದಂತೆ ದೇಶದ 12 ರಾಜ್ಯಗಳ ಒಟ್ಟು 22 ಸಾಹಸಿ ಎಳೆಯರು ಈ ಬಾರಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜತೆಗೆ ಕೇರಳದ ಒಬ್ಬ ಬಾಲಕನಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಗಣರಾಜ್ಯೋತ್ಸವ ದಿನ ಈ ಮಕ್ಕಳಿಗೆ ಪ್ರಧಾನಿ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisement

ವೆಂಕಟೇಶನ ಪರಾಕ್ರಮ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಂಕನೂರು ಗ್ರಾಮದ ವೆಂಕಟೇಶ್‌ (11) ಪ್ರವಾಹಕ್ಕೆ ಎದೆಯೊಡ್ಡಿ ನಿಂತ ಬಾಲಕ. 2019ರ ಆಗಸ್ಟ್‌ನಲ್ಲಿ ರಾಜ್ಯಾದ್ಯಂತ ಧೋ ಎಂದು ಮಳೆ ಸುರಿಯುತ್ತಿದ್ದ ಕಾಲ. ಇಂಥ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಹಿರೇರಾಯಕುಂಪಿ ಗ್ರಾಮದಲ್ಲಿ ಆ್ಯಂಬುಲೆನ್ಸ್‌ ಒಂದು ಜಲಾವೃತ ಸೇತುವೆಯ ಬಳಿ ಸಿಲುಕಿತ್ತು. ವೆಂಕಟೇಶ್‌ ಸೇತುವೆ ಮೇಲಿದ್ದ ಪ್ರವಾಹಕ್ಕೆ ಅಂಜದೆ ತಾನು ಮುಂದಕ್ಕೆ ಓಡಿ ಆ್ಯಂಬುಲೆನ್ಸ್‌ಗೆ ದಾರಿ ತೋರಿ ಐವರನ್ನು ರಕ್ಷಿಸಿದ್ದ.

ಕೀರ್ತಿ ತಂದ ಆರತಿ
ಹೊನ್ನಾವರ ತಾಲೂಕಿನ ನವಿಲುಗೋಣ ಗ್ರಾಮದ ಬಾಲಕಿ ಆರತಿ ಕಿರಣ್‌ ಶೇಟ್‌ (9) ತನ್ನ ಜೀವವನ್ನು ಪಣಕ್ಕಿಟ್ಟು ಎರಡು ವರ್ಷದ ತಮ್ಮನ ಜೀವ ಉಳಿಸಿದಾಕೆ. ಅದೊಂದು ಮಧ್ಯಾಹ್ನ ದಾರಿಯಲ್ಲಿ ಹೋಗುತ್ತಿದ್ದ ಗೂಳಿ ದಿಢೀರನೆ ಮನೆ ಮುಂದೆ ಆಟವಾಡುತ್ತಿದ್ದ ಇವರಿಬ್ಬರ ಮೇಲೆ ನುಗ್ಗಿ ಬಂದಿತ್ತು. ಕೂಡಲೇ ತಮ್ಮನನ್ನು ಎತ್ತಿಕೊಂಡಿದ್ದ ಆಕೆ, ಗೂಳಿ ತಿವಿಯುತ್ತಿದ್ದರೂ ಅದರಿಂದ ತಪ್ಪಿಸಿಕೊಂಡು ಓಡಿ ಪಾರಾಗಿದ್ದಳು. ಆಕೆಯ ಸಮಯಪ್ರಜ್ಞೆಯಿಂದಾಗಿ ತಮ್ಮನ ಜೀವ ಉಳಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next