ಉಪ್ಪಳ: ದಿಕ್ಕು ತಪ್ಪಿದ ಭಾರತದ ಸರಕು ಹಡಗೊಂದು ಇಂಡೋನೇಷ್ಯಾಕ್ಕೆ ಸಾಗಿದ್ದು, ಅದನ್ನು ಅಲ್ಲಿನ ಸರಕಾರ ವಶದಲ್ಲಿ ಇರಿಸಿಕೊಂಡಿದೆ. ಇದರಿಂದಾಗಿ ಕಾಸರಗೋಡು ಜಿಲ್ಲೆಯ ಉಪ್ಪಳ ಪಾರೆಕಟ್ಟೆ ಪಿ.ಕೆ. ಮೂಸಾ ಕುಂಞಿ ಮತ್ತು ಕುಂಬಳೆ ಆರಿಕ್ಕಾಡಿಯ ಕಲಂದರ್ ಸಹಿತ 22 ಮಂದಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಐದು ತಿಂಗಳ ಹಿಂದೆ ಈ ಘಟನೆ ಸಂಭವಿಸಿದ್ದರೂ ಹಡಗಿನ ಸಂತ್ರಸ್ತ ಸಿಬಂದಿಯೋರ್ವರು ಮನೆ ಮಂದಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ಬಳಿಕವಷ್ಟೇ ವಿಷಯ ಬಹಿರಂಗವಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ರಾಸಾಯನಿಕ ವಸ್ತುಗಳನ್ನು ಹೇರಿದ ಎಸ್.ಜಿ. ಪೆಗ್‌ಸೆಸ್‌ನ್ ಹೆಸರಿನ ಸರಕು ಹಡಗು ಮುಂಬಯಿಯಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿತ್ತು. ಸಂಚಾರ ಮಧ್ಯೆ ಹಡಗಿನ ಎಂಜಿನ್ ಕೈಕೊಟ್ಟ ಪರಿಣಾಮ ಅದು ದಿಕ್ಕು ತಪ್ಪಿ ಇಂಡೋನೇಷ್ಯಾ ಸಮುದ್ರ ಕಿನಾರೆಯತ್ತ ಸಾಗಿತ್ತು. ಅದನ್ನು ಕಂಡ ಇಂಡೋನೇಷ್ಯಾದ ನೌಕಾಪಡೆ ಹಡಗನ್ನು ವಶಪಡಿಸಿಕೊಂಡಿದೆ.
ಆಹಾರ, ಔಷಧ ಕೊರತೆ
ಹಡಗಿನಲ್ಲಿದ್ದ ಆಹಾರ, ನೀರು ಮತ್ತು ಔಷಧಗಳು ಖಾಲಿಯಾಗಿವೆ ಎಂದು ಅದರಲ್ಲಿ ಸಿಲುಕಿಕೊಂಡಿರುವ ಮೂಸಾ ಕುಂಞಿ ಅವರು ದೂರವಾಣಿ ಮೂಲಕ ತಿಳಿಸಿರುವುದಾಗಿ ಅವರ ಸಹೋದರ ಪಿ.ಕೆ. ಅಬ್ದುಲ್ಲ ತಿಳಿಸಿದ್ದಾರೆ. ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿ ಹಡಗಿನಲ್ಲಿರುವವರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೂ ಮನವಿ ಮಾಡಿದ್ದಾರೆ.