ಚಿತ್ರದುರ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನವಿಕಾಸ ಯೋಜನೆಗೆ ರಾಜ್ಯದ 22 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ತಿಳಿಸಿದರು. ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದರು.
2018-19ನೇ ಸಾಲಿನಲ್ಲಿ ಕೇಂದ್ರ ಸರ್ಕಾರ “ಪ್ರಧಾನಮಂತ್ರಿ ಜನವಿಕಾಸ ಯೋಜನೆ’ ರೂಪಿಸಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಹಾಗೂ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಈ ಯೋಜನೆ ಉದ್ದೇಶ.
ಯೋಜನೆಗೆ ದೇಶಾದ್ಯಂತ 308 ಜಿಲ್ಲೆ ಆಯ್ಕೆ ಮಾಡಲಾಗಿದ್ದು, ಕರ್ನಾಟಕದಲ್ಲಿ ಉತ್ತರಕನ್ನಡ, ದಕ್ಷಿಣಕನ್ನಡ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ರಾಮನಗರ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೀದರ್, ತುಮಕೂರು, ಹಾಸನ, ಕೋಲಾರ ಸೇರಿದಂತೆ ಒಟ್ಟು 22 ಜಿಲ್ಲೆಗಳ 28 ನಗರ ಪ್ರದೇಶ ಹಾಗೂ 6 ಬ್ಲಾಕ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ವಸತಿ ಶಾಲೆ, ಐಟಿಐ, ಪಾಲಿಟೆಕ್ನಿಕ್ ಕಾಲೇಜು, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ, ವಸತಿನಿಲಯ, ವೃತ್ತಿ ನಿರತ ಮಹಿಳೆಯರ ವಸತಿನಿಲಯ, ಸಮುದಾಯ ಭವನ, ವೈದ್ಯಕೀಯ ಸೌಲಭ್ಯ ಸೇರಿದಂತೆ 10 ಕೋಟಿ ರೂ. ವರೆಗಿನ ಯೋಜನೆಗೆ ಅನುಮೋದನೆ ನೀಡಲಾಗುವುದು. ನಗರಸಭೆ ವತಿಯಿಂದ ಯೋಜನೆ ಸಮಗ್ರ ವರದಿ ತಯಾರಿಸಿ, ಜಿಲ್ಲಾಧಿಕಾರಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
10 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಯೋಜನೆ ಇದ್ದಲ್ಲಿ ಕೇಂದ್ರ ಸರ್ಕಾರದ ಮಂತ್ರಾಲಯದಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಮಾರುಕಟ್ಟೆ ನಿರ್ಮಾಣ ಯೋಜನೆಗಳಿಗೆ ಶೇ.100 ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಅಲ್ಲ, ಎಲ್ಲರಿಗೂ ಈ ಯೋಜನೆ ಲಾಭ ದೊರೆಯಲಿದೆ ಎಂದರು.
ಪ್ರಧಾನಮಂತ್ರಿ ಜನ ವಿಕಾಸ ಯೋಜನೆಯಡಿ ಶೇ.60 ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಉಳಿದ ಶೇ.40 ಅನುದಾನ ಸ್ಥಳೀಯ ಸಂಸ್ಥೆ, ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭರಿಸಲು ಅವಕಾಶ ಕಲ್ಪಿಸಲಾಗಿದೆ.
-ಜಾರ್ಜ್ ಕುರಿಯನ್, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ