ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಇಂದು ಮತ್ತಷ್ಟು ಹೆಚ್ಚಳವಾಗಿದೆ. ಇಂದು ರಾಜ್ಯದಲ್ಲಿ ಮತ್ತೆ 210 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7944 ಕ್ಕೆ ಏರಿಕೆಯಾಗಿದೆ.
ಇಂದು ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕಿತರು ಪತ್ತೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ತಲಾ 48 ಜನರಿಗೆ ಸೋಂಕು ದೃಢವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಜನರಿಗೆ ಮತ್ತು ರಾಮನಗರ ಜಿಲ್ಲೆಯಲ್ಲಿ 21 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು 17 ಮಂದಿ ಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ನಗರದಲ್ಲಿ ಇಂದು ಎಂಟು ಮಂದಿ ಸೋಂಕಿತರು ಮೃತರಾಗಿದ್ದಾರೆ. ಯಾದಗಿರಿಯಲ್ಲಿ ಎಂಟು ಮಂದಿಗೆ ಸೋಂಕು ತಾಗಿದ್ದು, ಮಂಡ್ಯದಲ್ಲಿ ಏಳು, ಬೀದರ್ ನಲ್ಲಿ ಆರು ಮತ್ತು ಗದಗ ಜಿಲ್ಲೆಯಲ್ಲಿ ಐದು ಮಂದಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಉಳಿದಂತೆ ರಾಯಚೂರು, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನಾಲ್ಕು ಮಂದಿಗೆ ಸೋಂಕು ದೃಢವಾಗಿದೆ. ದಾವಣಗೆರೆ ಮತ್ತು ಚಿಕ್ಕಮಗಳೂರಿನಲ್ಲಿ ಮೂವರಿಗೆ ಸೋಂಕು ದೃಢವಾಗಿದೆ. ವಿಜಯಪುರ, ಉತ್ತರ ಕನ್ನಡ ಮತ್ತು ಮೈಸೂರಿನಲ್ಲಿ ಇಬ್ಬರಿಗೆ, ಬಾಗಲಕೋಟೆ, ಶಿವಮೊಗ್ಗ, ಮತ್ತು ಕೊಪ್ಪಳದಲ್ಲಿ ತಲಾ ಓರ್ವರಿಗೆ ಸೋಂಕು ದೃಢವಾಗಿದೆ.
ರಾಜ್ಯದಲ್ಲಿಂದು 12 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಅದರಲ್ಲಿ ಎಂಟು ಮಂದಿ ಬೆಂಗಳೂರು ನಗರದವರಾಗಿದ್ದಾರೆ. ಕೊಪ್ಪಳ, ಬೀದರ್, ವಿಜಯಪುರ ಮತ್ತು ಕಲಬುರಗಿಯಲ್ಲಿ ತಲಾ ಓರ್ವರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7944ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 179 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 4983ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 114 ಮಂದಿ ಸೋಂಕಿನಿಂದ ಮರಣ ಹೊಂದಿದ್ದಾರೆ. ಇದುವರೆಗೆ ನಾಲ್ಕು ಮಂದಿ ಸೋಂಕಿತರು ಕೋವಿಡ್ ಅಲ್ಲದ ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.