ಬೆಂಗಳೂರು: ದಸರಾ ಹಿನ್ನೆಲೆಯಲ್ಲಿ “ನಂದಿನಿ’ ಸಿಹಿ ತಿಂಡಿಗಳಿಗೆ ಭರ್ಜರಿ ಡಿಮ್ಯಾಂಡ್ ಬಂದಿದ್ದು, ರಾಜ್ಯಾದ್ಯಂತ ಕೆಎಂಎಫ್ 210 ಮೆಟ್ರಿಕ್ ಟನ್ ಪೂರೈಸುತ್ತಿದೆ. ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 160 ಮೆಟ್ರಿಕ್ ಟನ್‌ನಷ್ಟು ಪೂರೈಕೆಯಾಗಿದೆ. ಸರ್ಕಾರಿ ಇಲಾಖೆ, ಖಾಸಗಿ ಕಂಪನಿಗಳು, ಸಂಘ-ಸಂಸ್ಥೆಗಳು ಭಾರೀ ಪ್ರಮಾಣದಲ್ಲಿ ಕೆಎಂಎಫ್ನಿಂದ ನಂದಿನಿ ಸಿಹಿ ತಿಂಡಿ ಖರೀದಿಸಿವೆ.
ಕೆಎಂಎಫ್ನ ನಂದಿನಿ ಸಿಹಿ ತಿಂಡಿಗಳು ಪ್ರತಿದಿನ 6 ಮೆಟ್ರಿಕ್ ಟನ್‌ನಷ್ಟು ಮಾರಾಟವಾಗುತ್ತಿದೆ. ದಸರಾ ಹಿನ್ನಲೆಯಲ್ಲಿ ಪ್ರತಿದಿನ 20 ಮೆಟ್ರಿಕ್ ಟನ್‌ಗೂ ಅಧಿಕ ಮಾರಾಟವಾಗುತ್ತಿದೆ. ಕಳೆದ ವರ್ಷ ದಸರಾದಲ್ಲಿ ರಾಜ್ಯಾದ್ಯಂತ 140 ಮೆಟ್ರಿಕ್ ಟನ್ ಮಾರಾಟವಾಗಿತ್ತು. ಈ ಬಾರಿ 210 ಮೆಟ್ರಿಕ್ ಟನ್‌ಗೆ ಬೇಡಿಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ ಪೇಢೆ, ಮೈಸೂರು ಪಾಕ್, ಬಾದಾಮ್ ಬರ್ಫಿ, ಕೇಸರ್ ಪೇಢೆ, ದೂದ್ ಪೇಢೆ, ಲಾಡು, ನಂದಿನಿ ಕುಕ್ಕಿಸ್, ಚಾಕೋಲೆಟ್ ಬರ್ಫಿ ಸೇರಿ 41 ವಿವಿಧ ಸಿಹಿ ತಿನಿಸುಗಳನ್ನು ಕೆಎಂಎಫ್ ತಯಾರಿಸುತ್ತಿದೆ.
ವಿದೇಶಕ್ಕೆ ರಫ್ತು: ಕೆಎಂಎಫ್ನ ಹಾಲು, ತುಪ್ಪ ಸೇರಿದಂತೆ ಇನ್ನಿತರ ಉತ್ಪನ್ನಗಳು ಅಂತಾರಾಜ್ಯ ಸೇರಿ ವಿದೇಶಗಳಿಗೆ ರಫ್ತಾಗುತ್ತಿದೆ. ಮುಂದಿನ ದಸರಾ ವೇಳೆಗೆ ಸಿಹಿ ತಿಂಡಿಗಳನ್ನು ರಫ್ತು ಮಾಡಲು ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಂಎಫ್ನ ಉತ್ಪನ್ನಗಳು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿವೆ. ಪ್ರಸಕ್ತ ವರ್ಷದ ದಸರಾ ಹಬ್ಬಕ್ಕೆ ಭಾರೀ ಬೇಡಿಕೆ ಬಂದಿದೆ. ರಾಜ್ಯಾದ್ಯಂತ 210 ಮೆಟ್ರಿಕ್ ಟನ್ ಸಿಹಿ ತಿಂಡಿಗಳು ಪೂರೈಸಲಾಗುವುದು. ಕಳೆದ ಬಾರಿಗಿಂತ ಶೇ.30ಕ್ಕೂ ಅಧಿಕ ಹೆಚ್ಚಳವಾಗಿದೆ.
-ಎಂ.ಟಿ. ಕುಲಕರ್ಣಿ, ಕೆಎಂಎಫ್ (ಮಾರುಕಟ್ಟೆ)