Advertisement

ಜನಸೇವೆಗೆ 21 ಸಾವಿರ ಜನ ನೋಂದಣಿ

02:32 PM Apr 06, 2020 | Suhan S |

ಗದಗ: ವಿವಿಧ ಇಲಾಖೆಗಳು ಜಂಟಿಯಾಗಿ ಆರಂಭಿಸಿರುವ ಕೋವಿಡ್ 19 ವಾರಿಯರ್ ಅಭಿಯಾನಕ್ಕೆ ರಾಜ್ಯಾದ್ಯಂತ ವ್ಯಾಪಕ ಸ್ಪಂದನೆ ದೊರೆತಿದ್ದು, 21,093 ಜನರು ಹೆಸರು ನೋಂದಾಯಿಸಿದ್ದಾರೆ.

Advertisement

ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ, ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ತರಬೇತಿ ಸಂಸ್ಥೆ ಸಹಯೋಗದಲ್ಲಿ ಕೋವಿಡ್ 19ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ನೀವೂ ಕೋವಿಡ್ 19 ಯೋಧರಾಗಿ ಎಂದು ಕಾರ್ಮಿಕ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಯೂ ಆಗಿರುವ ಹಿರಿಯ ಐಎಎಸ್‌ ಅಧಿಕಾರಿ, ಕ್ಯಾಪ್ಟನ್‌ ಮಣಿವಣ್ಣನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾ.19ರಂದು ಕರೆ ನೀಡಿದ್ದರು.ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಮಾ.20 ರಿಂದ ಆನ್‌ಲೈನ್‌ ರೆಜಿಸ್ಟೇಷನ್‌ನಲ್ಲಿ ಆರಂಭಗೊಂಡಿದ್ದು, ಮೊದಲ ಮೂರು ದಿನಗಳಲ್ಲೇ 1,221 ಜನರು ನೋಂದಾಯಿಸಿದ್ದರು. ಈ ಸುದ್ದಿ ರಾಜ್ಯಾದ್ಯಂತ ಹರಡಿದ್ದು, ಕೇವಲ 15 ದಿನಗಳಲ್ಲಿ 21,093 ಜನರು ಸ್ವಯಂ ಸೇವಕರಾಗಿ ಹೆಸರು ನೋಂದಾಯಿಸಿದ್ದಾರೆ. ಗದಗ 180, ಹಾವೇರಿ 125, ಧಾರವಾಡ 450, ಬಾಲಕೋಟೆ 200 ಹಾಗೂ 4 ಸಾವಿರಕ್ಕಿಂತ ಹೆಚ್ಚು ಬೆಂಗಳೂರಿಗರಿದ್ದು, ದೊಡ್ಡ ಪಡೆಯನ್ನೇ ಸೃಷ್ಟಿಸಿದೆ.

ಆನ್‌ಲೈನ್‌ ಮೂಲಕ ನೋಂದಾಯಿತ ಸ್ವಯಂ ಸೇವಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅಗತ್ಯಕ್ಕನುಗುಣವಾಗಿ ಗುರುತಿನ ಚೀಟಿ ವಿತರಿಸಲಾಗುತ್ತದೆ. ಜನ ಸೇವೆಗಾಗಿ ಸಂಚರಿಸುವಾಗ ಈ ಗುರುತಿನ ಚೀಟಿ ಬಳಸಬಹುದಾಗಿದೆ. ಜತೆಗೆ ಸುರಕ್ಷತೆಗಾಗಿ ಸ್ಯಾನಿಟೈಜರ್‌ ಹಾಗೂ ಮಾಸ್ಕ್ ವಿತರಿಸಲಾಗುತ್ತಿದೆ.

ಕೋವಿಡ್ 19 ಯೋಧರ ಕೆಲಸವೇನು? : ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ಅನೇಕ ಕಡೆ ರಾಜ್ಯ ಹಾಗೂ ಅಂತಾರಾಜ್ಯ ಕಾರ್ಮಿಕರು ಅಲ್ಲಲ್ಲೇ ಸಿಲುಕಿದ್ದಾರೆ. ಅಂಥವರಿಗೆ ಸರಕಾರದಿಂದ ಊಟ, ಆಹಾರ ಧಾನ್ಯ ತಲುಪಿಸುವುದು, ಅನಾರೋಗ್ಯದಿಂದ ಬಳಲುವವರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧೋಪಚಾರ ಒದಗಿಸುವುದು ಹಾಗೂ ಕೋವಿಡ್ 19 ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ಪರಿಶೀಲಿಸಿ, ನೈಜ ಮಾಹಿತಿ ಜನರಿಗೆ ತಲುಪಿಸುವುದು ಇವರ ಬಹುಮುಖ್ಯ ಕೆಲಸವಾಗಿದೆ.

Advertisement

ಈಗಾಗಲೇ ಸಾಫ್ಟವೇರ್‌ ಇಂಜಿನಿಯರ್, ವೈದ್ಯರು, ಉದ್ಯಮಿಗಳು, ಸರಕಾರಿ ನೌಕರರು ಕೂಡಾ ಸ್ವಯಂ ಸೇವಕರಾಗಿ ನೋಂದಾಯಿಸಿದ್ದಾರೆ. ಅಗತ್ಯ ಸಂದರ್ಭದಲ್ಲಿ ಅವರಿಂದ ಸೇವೆ ಪಡೆಯಲು ಜಿಲ್ಲಾ ಹಾಗೂ ತಾಲೂಕುವಾರು ವಾಟ್ಸ್‌ಆ್ಯಪ್‌ ಗ್ರುಪ್‌ ರಚಿಸಲಾಗಿದೆ. ಸುದ್ದಿ ವಾಹಿನಿ ಅಥವಾ ಸ್ವಯಂ ಸೇವಕರಿಂದ ಬರುವ ಮಾಹಿತಿ ಆಧರಿಸಿ ಆಯಾ ಪ್ರದೇಶದ ವಾಟ್ಸ್‌ಆ್ಯಪ್‌ ಗ್ರುಪ್‌ಗ್ಳಿಗೆ ಸಂದೇಶ ರವಾನಿಸಲಾಗುತ್ತದೆ. ಆ ಪೈಕಿ ಸೇವೆಗೆ ಮುಂಬರುವ ಸದಸ್ಯರಿಗೆ ಸಂತ್ರಸ್ತರ ಮಾಹಿತಿ ಹಾಗೂ ಸಂಪರ್ಕ ಸಂಖ್ಯೆ ನೀಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿ ಮತ್ತು ವೈದ್ಯಕೀಯ ಹಾಗೂ ತಜ್ಞರ ತಂಡಗಳು ಪರಿಶೀಲಿಸಿ, ಜನರಿಗೆ ನೈಜ ಮಾಹಿತಿ

ನೀಡುತ್ತಿದ್ದಾರೆ. ಜನರಲ್ಲಿ ಅನಾರೋಗ್ಯ ಕಂಡು ಬಂದಲ್ಲಿ  ಫೋನ್‌ ಮೂಲಕ ಔಷಧಗಳನ್ನು ಸೂಚಿಸಲಾಗುತ್ತದೆ. ಅದಕ್ಕಾಗಿ ಸುಮಾರು 30ಕ್ಕಿಂತ ಅಧಿಕ ಎಂಬಿಬಿಎಸ್‌ ಹಾಗೂ ತಜ್ಞ ವೈದ್ಯರು ಶ್ರಮಿಸುತ್ತಿದ್ದಾರೆ.

ಜನ ಮೆಚ್ಚುಗೆ ಪಡೆದ ಯೋಧರು: ಲಾಕ್‌ ಡೌನ್‌ ಆರಂಭ ಬಳಿಕ ಎಲ್ಲೆಡೆ ವಾಹನ ಸಂಚಾರ ಸ್ತಬ್ಧಗೊಂಡಿದ್ದರಿಂದ ಎರಡು ದಿನಗಳಿಂದ ತುಮಕೂರಿನಲ್ಲಿ ಹಿರಿಯ ನಾಗರಿಕರಿಗೆ ಔಷಧಲಭ್ಯವಾಗದೇ ಪರದಾಡುತ್ತಿದ್ದರು. ಈ ಬಗ್ಗೆ ಅಧಿಕಾರಿಗಳ ಮೂಲಕ ಮಾಹಿತಿ ಪಡೆದ ಬೆಂಗಳೂರು ಮೂಲದ ರಷ್ಮಿ ಎಂಬ ಸ್ವಯಂ ಸೇವಕಿ ತಮ್ಮ ವಾಹನ ವಾಹನ ಚಲಾಯಿಸಿಕೊಂಡು ತಿಪಟೂರಿನಲ್ಲಿದ್ದ ಹಿರಿಯ ನಾಗರಿಕರಿಗೆ ಔಷಧ  ತಲುಪಿಸಿದ್ದಾರೆ. ಅದರಂತೆ ಧಾರವಾಡ ಜಿಲ್ಲೆಯ ಕೊಟಬಾಗಿ ಹಳ್ಳಿಯಲ್ಲಿ ಗರ್ಭಿಣಿಯೊಬ್ಬರಿಗೆ ಸ್ಥಳೀಯವಾಗಿ ಔಷಧ ದೊರೆಯದೇ ಸಮಸ್ಯೆಯಾಗಿತ್ತು. ಅದನ್ನೂ ಬೆಂಗಳೂರಿನಿಂದ ಹುಬ್ಬಳ್ಳಿಗೆ, ಅಲ್ಲಿಂದ ಡಾ|ರಾಹುಲ್‌ ಎಂಬುವರು ಮಹಿಳೆಗೆ ಔಷ ಧ ತಲುಪಿಸಿದ್ದಾರೆ. ಅದರಂತೆ ಬಸ್‌ ಸೌಕರ್ಯವಿಲ್ಲದೇ ಬೆಂಗಳೂರು ಸೇರಿದಂತೆ ನಾನಾ ಭಾಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ವಿವಿಧೆಡೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ನಿರಾಶ್ರಿತರು, ತುರ್ತು ಕರ್ತವ್ಯ ನಿರತ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗಾಗಿ ಅಡುಗೆ ತಯಾರಿಸುವುದು, ಅನ್ನ-ನೀರು ತಲುಪಿಸುವುದು ಸೇರಿದಂತೆ ಸ್ವಯಂ ಸೇವಕರು ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ ಎಂದು ಅಧಿಕಾರಿಗಳ ಮೆಚ್ಚುಗೆ ಮಾತು.

ಇಂತಹ ತುರ್ತು ಪರಿಸ್ಥಿತಿಯಲ್ಲಿ ಎಷ್ಟೇ ನೌಕರರು, ಸಿಬ್ಬಂದಿ ಇದ್ದರೂ, ಜನ ಸೇವೆಗೆ ಸಾಕಾಗಲ್ಲ. ಹೀಗಾಗಿ ಸರಕಾರ ಕೋರಿಕೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ. ಮನೆ ಹಾಗೂ ಫೀಲ್ಡ್‌ನಲ್ಲೂ ಕೆಲಸ ಮಾಡಲು ಅವಕಾಶವಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧೆಡೆ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಲೂ ಆನ್‌ನೈನ್‌ ನೋಂದಣಿ ಚಾಲ್ತಿಯಲ್ಲಿದ್ದು, ನೀವು ಕೂಡಾ ಕೋವಿಡ್ 19 ವಾರಿಯರ್ ಆಗಿ ದೇಶ ಸೇವೆ ಮಾಡಬಹುದು. -ಪಲ್ಲವಿ ಹೊನ್ನಾಪುರ, ರಾಜ್ಯ ಸಂಯೋಜನಾಧಿಕಾರಿ, ಕೊರೊನಾ ವಾರಿಯರ್ಸ್

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next