ಶಹಾಪುರ: ಮೂರು ಲಾರಿಯಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಆಧಾರದ ಮೇರೆಗೆ ಪೊಲೀಸರ ಸಮೇತ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1966 ಚೀಲ ಅಕ್ರಮ ಪಡಿತರ ಅಕ್ಕಿ ಹಾಗೂ ಮೂವರು ಚಾಲಕರನ್ನು ವಶಕ್ಕೆ ಪಡೆದ ಘಟನೆ ಶುಕ್ರವಾರ ಶಖಾಪುರ ಕ್ರಾಸ್ ಹತ್ತಿರ ನಡೆದಿದೆ.
ಒಟ್ಟು 1966 ಚೀಲಗಳುಳ್ಳ 983 ಕ್ವಿಂಟಲ್ ತೂಕದ 21,62,600 ರೂ. ಮೌಲ್ಯದ್ದಾಗಿದ್ದು, ಮೂರು ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಆಹಾರ ನೀರಿಕ್ಷಕರು ತಿಳಿಸಿದ್ದಾರೆ.
ಆಂಧ್ರ ಗಡಿ ಭಾಗವಾದ ಗುರುಮಠಕಲ್ ನಿಂದ ಮಹಾರಾಷ್ಟ್ರಕ್ಕೆ ಪಡಿತರ ಅಕ್ರಮ ಅಕ್ಕಿ ಚೀಲಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಕುರಿತು ಭೀಮರಾಯನಗುಡಿ ಪಿಎಸ್‌ಐ ಸಂತೋಷ ರಾಠೊಡ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪಡಿತರ ಅಕ್ಕಿ ಚೀಲಗಳನ್ನು ಅಕ್ರಮವಾಗಿ ಸಾಗಾಣಿಕೆ ನಡೆಸುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ಜೊತೆಗೂಡಿ ತಾಲೂಕಿನ ಶಖಾಪುರ ಕ್ರಾಸ್ ಹತ್ತಿರ ದಾಳಿ ಮಾಡಲಾಗಿದೆ. ಆಗ ಚಾಲಕರ ಸಮೇತ 3 ಲಾರಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಲಿದ್ದಾರೆ. ಅಂದಾಜು 21 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ಇದಾಗಿದ್ದು, 1966 ಚೀಲಗಳಿವೆ. ಗುರುಮಠಕಲ್‌ನಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದವು ಎಂಬ ಮಾಹಿತಿ ಇದೆ. ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ.
-ಬಿ.ಆರ್. ವೆಂಕಣ್ಣ, ಆಹಾರ ಇಲಾಖೆ ನಿರೀಕ್ಷಕರು, ಶಹಾಪುರ