ಕಾರವಾರ: ಜಿಲ್ಲೆಯಲ್ಲಿ 2020ರ ಸಾಲಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 122 ಶಂಕಿತ ಪ್ರಕರಣಗಳ ಪೈಕಿ, 21 ಖಚಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳು ಜಿಲ್ಲೆಯ ಮೂರು ತಾಲೂಕುಗಳಾದ ಕಾರವಾರ, ಹೊನ್ನಾವರ ಹಾಗೂ ಮುಂಡಗೋಡನಲ್ಲಿ ಪತ್ತೆಯಾಗಿದ್ದವು ಎಂದು ಡಿಎಚ್‌ಒ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಮಳೆಗಾಲವು ಪ್ರಾರಂಭವಾಗಿದ್ದು, ಈ ರೋಗದ ವಾಹಕ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಹಾಗಾಗಿ ಸ್ಥಳೀಯ ಪಂಚಾಯತ್ ಹಾಗೂ ನಗರಸಭೆ ಸಹಕಾರದಿಂದ ವಿವಿಧೆಡೆ ಫಾಗಿಂಗ್‌ನ್ನು ನಡೆಸಲಾಗಿದೆ. ಡೆಂಘೀ ನಿಯಂತ್ರಣಕ್ಕೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಕಾರವಾರ ತಾಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬೈತ್‌ಖೋಲ್‌ನಲ್ಲಿ ಹೊರರಾಜ್ಯದ ಮೀನುಗಾರರಲ್ಲಿ ಡೆಂಘೀ ರೋಗ ಕಂಡುಬಂದಿತ್ತು. ಹೊರ ರಾಜ್ಯದ ಕಾರ್ಮಿಕರು ಲಾಕ್‌ಡೌನ್ ನಿಮಿತ್ತ ತಮ್ಮ ಸ್ವಂತ ಊರಿಗೆ ತೆರಳಲು ಆಗದೆಯಿದ್ದ ಕಾರಣ ಬೋಟ್‌ಗಳಲ್ಲಿ ವಾಸವಾಗಿದ್ದರು.
ಬೋಟ್‌ಗಳಲ್ಲಿನ ಟ್ಯಾಂಕ್‌ಗಳಲ್ಲಿ ನೀರು ಶೇಖರಣೆಯಿದ್ದು, ಅದರಲ್ಲಿ ಲಾರ್ವಾ ಉತ್ಪತ್ತಿಯಾಗಿರುವುದು ಬೆಳಕಿಗೆ ಬಂದಿತ್ತು. ಇದರಿಂದಾಗಿ ಇಲ್ಲಿನ ಸುಮಾರು 120 ಬೋಟ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಪೈಕಿ ಕೆಲವರಲ್ಲಿ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಹೊನ್ನಾವರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲ್ಕೋಡುವಿನ ಕಾನಕ್ಕಿ ಹಾಗೂ ಕೆಳಗಿನಕೇರಿ ಗ್ರಾಮಗಳಲ್ಲಿ ಡೆಂಘೀ ಪ್ರಕರಣಗಳು ವರದಿಯಾಗಿವೆ.
ಈ ಪ್ರದೇಶದಲ್ಲಿ ಅಡಿಕೆ ತೋಟವಿದ್ದು, ಅಡಿಕೆ ಹಾಳೆಗಳು ಬಿದ್ದಿದ್ದು, ಅವುಗಳಲ್ಲಿ ನೀರು ನಿಂತು ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಕಾರಣವಾಗಿರುವುದರಿಂದ ಡೆಂಘೀ ರೋಗವು ಕಾಣಿಸಿಕೊಂಡಿತ್ತು. ಮುಂಡಗೋಡಿನ ಅರಿಶೀನಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚೌಡಳ್ಳಿ ಗ್ರಾಮದಲ್ಲಿ ಡೆಂಘೀ ಪ್ರಕರಣಗಳು ವರದಿಯಾಗಿತ್ತು. ಈ ಪ್ರದೇಶದಲ್ಲಿ ಸಾರ್ವಜನಿಕರು ಅಸಮರ್ಪಕವಾಗಿ ನೀರಿನ ಶೇಖರಣೆ ಮಾಡುತ್ತಿದ್ದುದರಿಂದ ಈಡೀಸ್ ಲಾರ್ವಾ ಉತ್ಪತ್ತಿಗೆ ಕಾರಣವಾಗಿದ್ದು, ಡೆಂಘೀ ರೋಗ ಕಾಣಿಸಿಕೊಂಡಿತ್ತು. ಈ ಸಂಬಂಧ ಡೆಂಘೀ ವರದಿಯಾದ ಪ್ರದೇಶಗಳಲ್ಲಿ ಇಲಾಖೆಯು ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸಿದೆ. ನಿರಂತರವಾಗಿ ಈ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ , ಲಾರ್ವಾ ಸಮೀಕ್ಷೆ ಹಾಗೂ ಆರೋಗ್ಯ ಶಿಕ್ಷಣ ನಡೆಸಲಾಗಿದೆ ಎಂದು ಡಿಎಚ್‌ಒ ಅಶೋಕ್ ಕುಮಾರ್ ವಿವರಿಸಿದರು.