Advertisement

ಪಡಿತರಕ್ಕೆ 20 ರೂ., ಅರ್ಹರಿಗೆ ಸಿಗದ ಸೌಲಭ್ಯ!

05:06 PM Apr 13, 2020 | mahesh |

ಮಂಡ್ಯ: ಪಡಿತರದಾರರಿಂದ 20 ರೂ. ಪಡೆದು ಆಹಾರ ಪದಾರ್ಥ ವಿತರಣೆ, ಅರ್ಹರಿಗೆ ತಲುಪದ ಸರ್ಕಾರಿ ಸೌಲಭ್ಯ, ತರಕಾರಿ, ದಿನಸಿ, ಹಣ್ಣುಗಳ ಮಾರಾಟಕ್ಕಿಲ್ಲ ತಡೆ, ಎಲ್ಲರಿಗೂ ಪಡಿತರ ವಿತರಣೆಗೆ ಇನ್ನೂ ಸಿಗದ ಚಾಲನೆ. ಕೊರೊನಾ ತಡೆಯಲು ಮಾಡಿರುವ ಲಾಕ್‌ಡೌನ್‌ ವೇಳೆ ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್‌ ವೇಳೆ ಕಂಡು ಬಂದ ಚಿತ್ರಣ…

Advertisement

ಉಚಿತ ಪಡಿತರ ನೀಡಬೇಕೆಂಬ ಸರ್ಕಾರದ ಆದೇಶ ಉಲ್ಲಂಘಿಸಿ ನ್ಯಾಯಬೆಲೆ ಅಂಗಡಿಗಳಲ್ಲಿ 20 ರೂ. ಪಡೆದು ಪಡಿತರ ವಿತರಿಸಲಾಗುತ್ತಿದೆ. ಇದನ್ನು ಆಹಾರ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಇದರ ವಿರುದ್ಧ ಸಚಿವರು, ಶಾಸಕರು ಸಿಡಿದೆದ್ದ ಬಳಿಕ ಮುಜುಗರಗೊಂಡ ಆಹಾರ ಇಲಾಖೆ ಉಪ ನಿರ್ದೇಶಕರು ನಾಮಕಾವಸ್ಥೆಗೆಂಬಂತೆ 3 ಅಂಗಡಿ ಅಮಾನತುಗೊಳಿಸಿದ್ದಾರೆ. ಆದರೆ, ಈಗಾಗಲೇ ಶೇ.90ರಷ್ಟು ಪಡಿತರ ವಿತರಿಸಿದ್ದು, ಬಹುತೇಕ ನ್ಯಾಯಬೆಲೆ
ಅಂಗಡಿ ಮಾಲೀಕರು 20 ರೂ. ಪಡೆದು ವಿತರಿಸಿದ್ದಾರೆ.  ಬಡವರು, ನಿರ್ಗತಿಕರು, ನಿರಾಶ್ರಿತರಿಗಾಗಿ ಜಿಲ್ಲಾಡಳಿತ ಪುಣ್ಯಕೋಟಿ ಯೋಜನೆಯಡಿ ನಿತ್ಯ 18 ಸಾವಿರ ಲೀಟರ್‌ ಹಾಲು ತರಿಸಿ ಹಂಚುತ್ತಿದೆ. ಆದರೆ, ಇದು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಇದರ ಮೇಲುಸ್ತುವಾರಿ ಹೊತ್ತವರು ಸಮರ್ಪಕವಾಗಿ
ನಿರ್ವಹಣೆ ಮಾಡುತ್ತಿಲ್ಲ. ಹಾಲು ಅರ್ಹರನ್ನು ತಲುಪುತ್ತಲೇ ಇಲ್ಲ. ಅದೆಲ್ಲವೂ ಬೇಕರಿ, ಹೋಟೆಲ್‌ಗಳಿಗೆ ಮಾರಾಟವಾಗುತ್ತಿದೆ ಎಂಬ ಆರೋಪಗಳೂ ಸಾರ್ವಜನಿಕರಿಂದ ಕೇಳಿಬಂದಿವೆ.

ಹಾಪ್‌ಕಾಮ್ಸ್‌ನಲ್ಲಿ ಮಾರಾಟ: ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಣ್ಣು-ತರಕಾರಿ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಮಾರಲಾಗುತ್ತಿದೆ. ಕಂಟೈನ್ಮೆಂಟ್‌ ಏರಿಯಾ ಆಗಿರುವ ಸ್ವರ್ಣಸಂದ್ರಕ್ಕೆ ತಳ್ಳುವ ಗಾಡಿಗಳಲ್ಲಿ ಹಣ್ಣು-ತರಕಾರಿಕಳುಹಿಸುವ ವ್ಯವಸ್ಥೆ ಮಾಡಿದೆ. ಉಳಿದಂತೆ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಾರುಕಟ್ಟೆಯಲ್ಲಿ ಸಗಟು ಮಾರಾಟಗಾರರಿಗಷ್ಟೇ ಹಣ್ಣು, ತರಕಾರಿ, ಹೂವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿರ್ಗತಿಕರು, ನಿರಾಶ್ರಿತರು, ಹೊರಜಿಲ್ಲೆಯ ಕೂಲಿ ಕಾರ್ಮಿಕರಲ್ಲಿ ಹಲವರಿಗೆ ಹಲವು ಹಾಸ್ಟೆಲ್‌ಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಉಳಿದಿರುವ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲುತ್ತಿರುವುದು ಕಂಡು ಬಂದಿದೆ.

ಕೊರೊನಾ ಎದುರಿಸಲು ಆರೋಗ್ಯ ಇಲಾಖೆ ಸಿದ್ಧತೆ
ಜಿಲ್ಲೆಯಲ್ಲಿ 13 ಫ್ಲವರ್‌ ಕ್ಲಿನಿಕ್‌ಗಳಿವೆ. 900 ಹಾಸಿಗೆಯುಳ್ಳ 6 ಕ್ವಾರಂಟೈನ್‌, 450 ಹಾಸಿಗೆ ಸಾಮರ್ಥ್ಯದ 3 ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. 1570 ಹಾಸಿಗೆಗಳ 10 ಐಸೋಲೇಷನ್‌, 500 ಹಾಸಿಗೆ ಸಾಮರ್ಥ್ಯದ 2 ಐಸೋಲೇಷನ್‌ಗಳನ್ನು ಸಿದ್ಧಪಡಿಸಲಾಗಿದೆ. 328 ಹಾಸಿಗೆಯುಳ್ಳ ಜಿಲ್ಲಾಸ್ಪತ್ರೆ ಕೋವಿಡ್‌ ಆಸ್ಪತ್ರೆ ಎಂದೂ, 51 ಹಾಸಿಗೆಯುಳ್ಳ 6 ಐಸಿಯು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಂಚೇಗೌಡ ಹೇಳಿದರು. ಫ್ಲವರ್‌  ಕ್ಲಿನಿಕ್‌ಗಳಲ್ಲಿ 39 ವೈದ್ಯರು, 78 ನರ್ಸ್‌, 39 ಸಹಾಯಕರು, ಕ್ವಾರಂಟೈನ್‌ಗಳಲ್ಲಿ 18 ವೈದ್ಯರು, 36 ನರ್ಸ್‌, 18 ಹೆಲ್ಪರ್, ಐಸೋಲೇಷನ್‌ಗಳಲ್ಲಿ 30 ತಜ್ಞ ವೈದ್ಯರು, 60 ವೈದ್ಯರು, 120 ನರ್ಸ್‌, 90 ಹೆಲ್ಪರ್‌, ಕೋವಿಡ್‌ ಆಸ್ಪತ್ರೆಯಲ್ಲಿ 6 ತಜ್ಞರು, 12 ವೈದ್ಯರು, 30 ನರ್ಸ್‌, ಐಸಿಯುನಲ್ಲಿ 20 ತಜ್ಞರು, 40 ವೈದ್ಯರು, 140 ನರ್ಸ್‌ ನೇಮಿಸಿ ಎಲ್ಲರಿಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.

● ಮಂಡ್ಯ ಮಂಜುನಾಥ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next