ಹೊಸದಿಲ್ಲಿ: ‘ದೇಶದ ವಿಶ್ವವಿದ್ಯಾನಿಲಯಗಳು ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿರುವ ಶೈಕ್ಷಣಿಕ ವಾತಾವರಣವನ್ನು ಅಲ್ಲಿರುವ ಎಡಪಂಥೀಯರ ಗುಂಪುಗಳು ಹಾಳುಗೆಡವುತ್ತಿವೆ. ಇದರಿಂದಾಗಿ, ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ (ಜೆಎನ್‌ಯು), ಜಾಮಿಯಾ ವಿವಿ, ಅಲಿಗಢ ಮುಸ್ಲಿಂ ವಿವಿ (ಎಎಂಯು) ಮತ್ತು ಜಾಧವ್‌ಪುರ ವಿವಿಗಳಂಥ ಘನವೆತ್ತ ವಿವಿಗಳು, ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಹಿಂಸಾಚಾರಕ್ಕೆ ಸಾಕ್ಷಿಯಾಗಬೇಕಾಯಿತು’….
ಹೀಗೆಂದು, ದೇಶದ ನಾನಾ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕುಲಪತಿಗಳು, ರಿಜಿಸ್ಟ್ರಾರ್‌ಗಳು, ಹಿರಿಯ ಪ್ರಾಧ್ಯಾಪಕರು ಸೇರಿದಂತೆ 208 ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಎಡ ಪಂಥೀಯರು ಸೃಷ್ಟಿಸುತ್ತಿರುವ ಅರಾಜಕತೆಯ ವಿವರಣೆ’ ಎಂಬ ಶೀರ್ಷಿಕೆಯಿದೆ ಹಾಗೂ ಈ ಪತ್ರಕ್ಕೆ ಹರಿಸಿಂಗ್ ಗೌರ್ ವಿವಿಯ ಕುಲಪತಿ ಆರ್.ಪಿ. ತಿವಾರಿ, ದಕ್ಷಿಣ ಬಿಹಾರದ ಕೇಂದ್ರೀಯ ವಿವಿ ಕುಲಪತಿ ಎಚ್‌ಸಿಎಸ್ ರಾಥೋಡ್, ಸರ್ದಾರ್ ಪಟೇಲ್ ವಿವಿಯ ಕುಲಪತಿ ಶ್ರೀರೀಶ್ ಕುಲಕರ್ಣಿ ಮುಂತಾದವರು ಸಹಿ ಹಾಕಿದ್ದಾರೆ.
ಸೆನ್ಸಾರ್‌ಶಿಪ್ ಇದೆ!: ಎಡಪಂಥೀಯರು ಸಾರ್ವತ್ರಿಕವಾಗಿ ಒಂದು ರೀತಿಯ ನಿಯಂತ್ರಣ ಸಾಧಿಸಿರುವುದರಿಂದ ಹಿಂಸಾಚಾರಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ವಿವರಿಸಿ ಹೇಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕುಲಪತಿಗಳು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಕುಲಪತಿಯೇ ‘ಮಾಸ್ಟರ್ ಮೈಂಡ್’!: ಜ. 5ರಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ (ಜೆಎನ್‌ಯು) ನಡೆದ ಹಿಂಸಾಚಾರ, ರಕ್ತಪಾತದ ರೂವಾರಿ ಆ ವಿವಿಯ ಕುಲಪತಿ ಎಂ. ಜಗದೇಶ್ ಕುಮಾರ್ ಅವರೇ ಆಗಿದ್ದಾರೆಂದು ಹಿಂಸಾಚಾರ ಪ್ರಕರಣದ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ನೇಮಿಸಿದ್ದ ಸತ್ಯಾನ್ವೇಷಣ ಸಮಿತಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜತೆಗೆ, ಕುಲಪತಿಯವರನ್ನು ಅಮಾನತು ಮಾಡಿ, ಕ್ರಿಮಿನಲ್ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.