Advertisement

ದ.ಕ., ಉಡುಪಿಯಲ್ಲಿ 207 ಡೆಂಗ್ಯೂ ಪ್ರಕರಣ; ಕೊಲ್ಲೂರು,ನೆರಿಯ ಪರಿಸರದಲ್ಲಿ ಅತ್ಯಧಿಕ

11:30 PM May 18, 2022 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 207 ಸಕ್ರಿಯ ಡೆಂಗ್ಯೂ ಪ್ರಕರಣಗಳಿದ್ದು ಎರಡೂವರೆ ಸಾವಿರಕ್ಕೂ ಅಧಿಕ ಶಂಕಿತ ಜ್ವರ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲಾ ಆರೋಗ್ಯ ಇಲಾಖೆ ಪ್ರತೀ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇಗೆ ಮುಂದಾಗಿದೆ.

Advertisement

ಮೇ 15ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 152 ಖಚಿತ ಪ್ರಕರಣಗಳಿದ್ದು 2,000ಕ್ಕೂ ಮಿಕ್ಕಿ ಶಂಕಿತ ಪ್ರಕರಣಗಳಿವೆ. ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯೊಂದರಲ್ಲೇ 113 ಪ್ರಕರಣಗಳಿವೆ. ದ.ಕ.ದಲ್ಲಿ 55 ಖಚಿತ ಪ್ರಕರಣಗಳು ವರದಿಯಾಗಿದ್ದು 1,770 ಶಂಕಿತ ಪ್ರಕರಣಗಳಿವೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮವೊಂದರಲ್ಲೇ 48 ಶಂಕಿತ (ಎನ್‌.ಎಸ್‌.1) ಪ್ರಕರಣಗಳಿವೆ. 10 ಪ್ರಕರಣ ದೃಢಪಟ್ಟಿವೆ. ಕಳೆದ ವರ್ಷ ನೆರಿಯದಲ್ಲಿ ಕೋವಿಡ್‌ನೊಂದಿಗೆ ಡೆಂಗ್ಯೂ ಆತಂಕಕಾರಿಯಾಗಿ ಪರಿಣಮಿಸಿತ್ತು. ಕಾಸರಗೋಡಿನ ಮಗುವೊಂದು ಮಂಗಳೂರಿನಲ್ಲಿ ಮೃತಪಟ್ಟಿರುವುದನ್ನು ಹೊರತುಪಡಿಸಿದರೆ ಬೇರೆಲ್ಲೂ ಡೆಂಗ್ಯೂವಿನಿಂದ ಜೀವಹಾನಿ ಪ್ರಕರಣ ದಾಖಲಾಗಿಲ್ಲ.

ಈಗಾಗಲೇ ದ.ಕ. ಜಿಲ್ಲೆಯಲ್ಲಿ 1,378 ಆಶಾ ಕಾರ್ಯಕರ್ತೆಯರು, 297 ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇಯಲ್ಲಿ ತೊಡಗಿದ್ದಾರೆ. ಸೊಳ್ಳೆ ಉತ್ಪತ್ತಿಯ ಮೂಲವನ್ನು ಹುಡುಕಿ ಸ್ವತ್ಛಗೊಳಿಸುವುದು ಸಹಿತ ಡೆಂಗ್ಯೂ ರೋಗಲಕ್ಷಣಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಹಳ್ಳಿಯಲ್ಲಿ ಕೆಲಸ ಕಾರ್ಯಗಳಿಗೆ ತೆರಳುವವರು ಕಹಿಬೇವಿನ ಎಣ್ಣೆ, ಮಜ್ಜಿಗೆ ಹುಲ್ಲಿನ ಎಣ್ಣೆ, ಕೊಬ್ಬರಿ ಎಣ್ಣೆಗೆ ಕಹಿಬೇವಿನ ಎಣ್ಣೆ ಬೆರೆಸಿ ಹಚ್ಚಿಕೊಳ್ಳುವ ಮೂಲಕ ಸೊಳ್ಳೆ ಕಡಿತದಿಂದ ಪಾರಾಗಬಹುದು.

ಸೊಳ್ಳೆ ಉತ್ಪತ್ತಿ ತಾಣಗಳು
ಒಂದು ಚಮಚದಷ್ಟ ಶುದ್ಧ ನೀರು ಕೂಡ ವಾರಗಳ ಕಾಲ ಕಲಕದೆ ಇದ್ದಲ್ಲಿ ಸೊಳ್ಳೆಗಳ ಉತ್ಪತ್ತಿಯ ತಾಣವಾಗಬಹುದು. ಪೇಟೆಗಳಲ್ಲಿ ತಾರಸಿ ತೋಟ ಸಹಿತ ಹೂವಿನ ಕುಂಡಗಳಲ್ಲಿ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾದರೆ, ಉಡುಪಿಯ ಕೊಲ್ಲೂರು ಆಸುಪಾಸು ಹಾಗೂ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ವ್ಯಾಪ್ತಿಯಲ್ಲಿ ಅಡಿಕೆ, ರಬ್ಬರ್‌ ತೋಟಗಳ ಹಾಳೆ, ರಬ್ಬರ್‌ ಸಂಗ್ರಹ ಗೆರಟೆಯಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಬಾವಿ ನೀರಲ್ಲೂ …!
ಹಿಂದೆ ಬಾವಿಯಿಂದ ನೀರನ್ನು ಸೇದುತ್ತಿದ್ದರು. ಪ್ರಸಕ್ತ ಮೋಟರ್‌ ಬಳಸಿ ನೀರೆತ್ತುವುದರಿಂದ ನೀರು ಕಲಕದ ಕಾರಣ ಅಲ್ಲೂ ಸೊಳ್ಳೆ ಉತ್ಪತ್ತಿ ಆಗುವ ಸಾಧ್ಯತೆ ಇದೆ. ಸೊಳ್ಳೆಯ ಮೊಟ್ಟೆಗಳನ್ನು ನಾಶಮಾಡುವ ಗಪ್ಪಿ ಮೀನುಗಳನ್ನು ಬಾವಿಗೆ ಬಿಟ್ಟಲ್ಲಿ ಪ್ರಯೋಜನವಾಗಲಿದೆ.

ಖಚಿತ ಪ್ರಕರಣ: ಎಲ್ಲಿ – ಎಷ್ಟು?
-ಮಂಗಳೂರು ಗ್ರಾಮಾಂತರ-11,
– ಮಂಗಳೂರು ಪಟ್ಟಣ-23
-ಬಂಟ್ವಾಳ- 4
-ಪುತ್ತೂರು-2
-ಸುಳ್ಯ-5
-ಬೆಳ್ತಂಗಡಿ-10
-ಮುದೂರು – 105
-ಕೊಲ್ಲೂರು – 2
-ಜಡ್ಕಲ್‌ – 6
-ಉಡುಪಿಯ ಇತರೆಡೆ – 39

ಉಡುಪಿ, ದ.ಕ. ಜಿಲ್ಲೆಗಳಲ್ಲಿ ಡೆಂಗ್ಯೂ ಬಾಧೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸೊಳ್ಳೆ ಉತ್ಪತ್ತಿ ಮೂಲಗಳನ್ನೇ ನಾಶ ಮಾಡುವ ಸಲುವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕು ತಡೆ ಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ.
– ಡಾ| ನಾಗಭೂಷಣ್‌ /
ಡಾ| ಕಿಶೋರ್‌,
ಉಡುಪಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿಗಳು

ಜಡ್ಕಲ್‌, ಮುದೂರು:
10 ದಿನ ಶಾಲೆ ಬಂದ್‌
ಕೊಲ್ಲೂರು: ಜಡ್ಕಲ್‌, ಮುದೂರು ಪರಿಸರದಲ್ಲಿ ಡೆಂಗ್ಯೂ ಬಾಧೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮೇ 19ರಿಂದ ಮುಂದಿನ 10 ದಿನಗಳ ಕಾಲ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಜಿಲ್ಲಾಧಿ ಕಾರಿ ಕೂರ್ಮಾ ರಾವ್‌ ಜತೆಗೆ ಡೆಂಗ್ಯೂವಿನ ಸಾಧಕ-ಬಾಧಕಗಳನ್ನು ಚರ್ಚಿಸಿದ ಬಳಿಕ ಜಿಲ್ಲಾ ಧಿಕಾರಿಗಳು 10 ದಿನಗಳ ರಜೆ ಘೋಷಿಸಿರುತ್ತಾರೆ ಎಂದು ಬೈಂದೂರು ಬಿಇಒ ಜಿ.ಎಂ. ಮುಂದಿನಮನಿ ತಿಳಿಸಿದ್ದಾರೆ.

ಸ್ವಚ್ಛತೆ ಕಾಪಾಡಲು ಮನವಿ
ಶಾಲಾ ಪರಿಸರ ಸಹಿತ ಪ್ರತೀ ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. 30 ಮೀ. ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ಸುಕುಮಾರ ಶೆಟ್ಟಿ ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next