ಚನ್ನರಾಯಪಟ್ಟಣ: ಸರ್ಕಾರದ ನಿಯಮ ಗಾಳಿಗೆ ತೂರಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾ ಗುತ್ತಿದ್ದಂತೆ ತಾಲೂಕಿನ ನೂರಾರು ಮಂದಿ ಬಿಪಿಎಲ್ ದಾರರು ಆಹಾರ ಇಲಾಖೆಗೆ ತಮ್ಮ ಪಡಿತರ ಚೀಟಿ ವಾಪಸ್ ನೀಡಿದ್ದಾರೆ.
ಪ್ರಾಮಾಣಿಕತೆ ತೋರಿದ್ದಾರೆ: ತಾಲೂಕು 72,713 ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ 4,858 ಮಂದಿ ಎಪಿಎಲ್ ಕಾರ್ಡ್‌ದಾರರಿದ್ದಾರೆ. 2,182 ಮಂದಿ ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು ಪ್ರತಿ ತಿಂಗಳು ರಾಜ್ಯ-ಕೇಂದ್ರ ಸರ್ಕಾರ ನೀಡುವ ಉಚಿತ ಪಡಿತರ ಆಹಾರ ಪದಾರ್ಥವನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆಯುತ್ತಿದ್ದಾರೆ. ಇವರಲ್ಲಿ ಅನೇಕರು ಈಗಾಗಲೇ ತಾಲೂಕು ಆಡಳಿತಕ್ಕೆ ಪಡಿತರ ಚೀಟಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇನ್ನೂ ಸಾಕಷ್ಟು ಮಂದಿ ಬಳಿ ಅನಧಿಕೃತವಾಗಿ ಬಿಪಿಎಲ್ ಚೀಟಿ ಇದೆ ಎಂಬುದನ್ನು ಅರಿತಿರುವ ಆಹಾರ ಇಲಾಖೆ ಸಿಬ್ಬಂದಿ ಅದನ್ನು ಪತ್ತೆ ಹಚ್ಚಲು ಮುಂದಾಗಿದೆ.
ಸ್ವಯಂ ಪ್ರೇರಣೆಯಿಂದ ವಾಪಸ್: ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರು, 4 ಚಕ್ರದ ವಾಹನ ಹೊಂದಿರುವವರು, ಸ್ಥಿತಿವಂತರು ಒಂದು ವೇಳೆ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ಸ್ವಯಂ ಪ್ರೇರಣೆಯಿಂದ ಆಹಾರ ಇಲಾಖೆಗೆ ವಾಪಸ್ ನೀಡುವಂತೆ ಆದೇಶ ನೀಡಿ ಈಗಾಗಲೇ 2-3 ಬಾರಿ ಅಂತಿಮ ಗಡುವು ನೀಡಿತ್ತು. ಆಗಸ್ಟ್‌ನಿಂದ ವಾಪಸ್ ಪಡೆಯುವ ಕಾರ್ಯ ಪ್ರಾರಂಭವಾಗಿತ್ತು. ನವೆಂಬರ್ ಅಂತ್ಯದ ಒಳಗೆ ತಾಲೂಕಿನ 205 ಮಂದಿ ತಮ್ಮ ಪಡಿತರ ಚೀಟಿ ಹಿಂದಕ್ಕೆ ನೀಡಿದ್ದಾರೆ. ಇದಲ್ಲದೆ 136 ಮಂದಿ ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ಪರಿವರ್ತನೆ ಮಾಡಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಸಾವಿರಾರು ಮಂದಿ ಡಿಲಿಡ್: ತಾಲೂಕಿನಲ್ಲಿರುವ ಆಹಾರ ಮತ್ತು ನಾಗರಿಕ ಸೇವೆಗಳ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಲೋಕಸಭೆ ಚುನಾವಣೆ ವೇಳೆ ಘೋಷಣೆ ಆದಾಗ ಕಚೇರಿಯಲ್ಲಿ ಕೆಲಸ ಇಲ್ಲದ ಸಮಯದಲ್ಲಿ 2 ತಿಂಗಳು ಕಾಲ ತಾಲೂಕಿನ ಹಲವು ನ್ಯಾಯಬೆಲೆ ಅಂಗಡಿಗೆ ತೆರಳಿ ಅನಗತ್ಯವಾಗಿ ಪಡಿತರ ಚೀಟಿಯಲ್ಲಿ ಇದ್ದ ಸದಸ್ಯರನ್ನು ಡಿಲಿಟ್ ಮಾಡಿಸಿದ್ದಾರೆ. ತಾಲೂಕಿನಲ್ಲಿ ಸುಮಾರು 1,283 ಮಂದಿ ಪಡಿತರ ಚೀಟಿಯಿಂದ ಕೈ ಬಿಡ ಲಾಗಿದ್ದು ಅವರಲ್ಲಿ ಹೆಚ್ಚಿನ ಮಂದಿ ವಿವಾಹಿತರು ಹಾಗೂ ಮೃತಪಟ್ಟವರು ಇದ್ದರು ಎಂದು ಮಾಹಿತಿ ನೀಡಿದರು.
ಕಠಿಣ ಕ್ರಮ: ಸರ್ಕಾರಕ್ಕೆ ಸ್ವಯಂ ಪ್ರೇರಣೆಯಿಂದ ಬಿಪಿಎಲ್ ಕಾರ್ಡ್ ಹಿಂದಿರುಗಿಸದೇ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಸರ್ಕಾರಿ ನೌಕರ ಬಿಪಿಎಲ್ ಚೀಟಿ ಹೊಂದಿದ್ದು ಒಂದು ವೇಳೆ ಸಿಕ್ಕಿ ಬಿದ್ದರೆ ಇಲಾಖೆ ವಿಚಾರಣೆ ಮಾಡುವುದಲ್ಲದೆ ಮುಂಬಡ್ತಿ ಮೇಲೆ ಪರಿಣಾಮ ಬೀರಲಿದೆ. ಇನ್ನು ಅನುಕೂಲಸ್ಥರು, 4 ಚಕ್ರದ ವಾಹನ ಹೊಂದಿರುವವರು ಇದ್ದರೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ರೀತಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಎಲ್ಲಿಲ್ಲಿ ಎಷ್ಟು ಪಡಿತರ ಚೀಟಿ ಇವೆ?: ತಾಲೂಕಿನಲ್ಲಿ 102 ನ್ಯಾಯಬೆಲೆ ಅಂಗಡಿಗಳಿದ್ದು ದಂಡಿಗನಹಳ್ಳಿ ಹೋಬಳಿಯಲ್ಲಿ 18, ಶ್ರವಣಬೆಳಗೊಳ 17, ಹಿರೀ ಸಾವೆ ಹೋಬಳಿ 18, ಬಾಗೂರು ಹೋಬಳಿ 14, ಕಸಬಾ ಹೋಬಳಿ 10, ನುಗ್ಗೇಹಳ್ಳಿ ಹೋಬಳಿ 14 ಹಾಗೂ ಪುರಸಭೆ ವ್ಯಾಪ್ತಿಯಲ್ಲಿ 11 ನ್ಯಾಯಬೆಲೆ ಅಂಗಡಿಗಳಿವೆ. 80 ಸಾವಿರ ಕುಟುಂಬಗಳಿಗೆ ಪ್ರತಿ ತಿಂಗಳು ಪಡಿತರ ಆಹಾರ ವಿತರಣೆ ಮಾಡಲಾಗುತ್ತಿದೆ.
ಅನರ್ಹರ ಬಿಪಿಎಲ್ ಕಾರ್ಡ್ ಹಿಂಪಡೆಯಲು ಅಂತಿಮ ದಿನಾಂಕವನ್ನು ಸರ್ಕಾರ ಅಧಿಕೃತವಾಗಿ ಇಲಾಖೆಗೆ ನೀಡಿಲ್ಲ. ಇದು ಹೀಗೆಮುಂದುವರಿದರೆ ತಾಲೂಕಿನಲ್ಲಿ ನೂರಾರು ಮಂದಿಯ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಇದೆ.
–ಎಚ್.ಎಸ್.ಶಂಕರ್, ಆಹಾರ ನಾಗರಿಕ ಸೇವೆಗಳ ಇಲಾಖೆ ಅಧಿಕಾರಿ