ರಾಮನಗರ: ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್ 204 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಕನಕಪುರ ತಾಲೂಕಿನ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ್ದು, ಯತ್ನಾಳ್‌ಗೆ ಸಮನ್ಸ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆಯನ್ನು ಸೆ.18ಕ್ಕೆ ನಿಗದಿಪಡಿಸಿದೆ. ಮಾನನಷ್ಟ ಮೊಕದ್ದಮೆ ಅರ್ಜಿಯ ಜತೆಗೆ ಚೆಕ್ ಮೂಲಕ 1,40,08,020 ರೂ.ಗಳ ನ್ಯಾಯಾಲಯ ಶುಲ್ಕವನ್ನು ಡಿಕೆಶಿ ಪಾವತಿಸಿದ್ದಾರೆ.
ಜೂನ್ 23ರಂದು ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, “ತಮ್ಮ ವಿರುದ್ಧ ಇರುವ ಐಟಿ, ಇಡಿ ಕೇಸುಗಳನ್ನು ವಜಾಗೊಳಿಸಿ ಎಂದು ಡಿಕೆಶಿಯವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪ್ರಕರಣಗಳಿಂದ ತಮ್ಮನ್ನು ಮುಕ್ತಗೊಳಿಸಿ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಆಗೋದಕ್ಕೆ ತಾವು ವಿರೋಧ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವಿಷಯ ನನಗೆ ಚೆನ್ನಾಗಿ ಗೊತ್ತು’ ಎಂದಿದ್ದರು.
ಯತ್ನಾಳ್ ಹೇಳಿಕೆ ಸಂಪೂರ್ಣ ಸುಳ್ಳಾಗಿದ್ದು, ಆ ಸುದ್ದಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರಿಂದಾಗಿ ತಮ್ಮ ಪ್ರಾಮಾಣಿಕತೆ, ಪ್ರತಿಷ್ಠೆ ಹಾಗೂ ವರ್ಚಸ್ಸಿಗೆ ಧಕ್ಕೆಯಾಗಿದೆ. ತಮ್ಮ ಘನತೆ, ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಅವರು ಈ ಹೇಳಿಕೆ ನೀಡಿದ್ದಾರೆಂದು ಡಿ.ಕೆ.ಶಿವಕುಮಾರ್ ಅರ್ಜಿಯಲ್ಲಿ ದೂರಿದ್ದಾರೆ.
ಹೀಗಾಗಿ, ತಮಗಾಗಿರುವ ಮಾನಹಾನಿಗೆ ಪರಿಹಾರವಾಗಿ ಯತ್ನಾಳ್‌ಗೆ 204 ಕೋಟಿ ರೂ. ಪರಿಹಾರ ಕಟ್ಟಿಕೊಡಲು ನಿರ್ದೇಶನ ನೀಡಬೇಕು. ಅಲ್ಲದೆ, ಇನ್ನು ಮುಂದೆ ತಮ್ಮ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕೆಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಜಲ ಸಂಪನ್ಮೂಲ ಸಚಿವನಾಗಿದ್ದ ನಾನು ಜೂನ್ 12ರಿಂದ 19ರ ನಡುವೆ ದೆಹಲಿಗೆ ಪ್ರವಾಸ ಮಾಡಿ, ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಿದ್ದೆ. ಜಲ ಸಂಪನ್ಮೂಲ ಸಚಿವನಾಗಿ ಅದು ನನ್ನ ಕರ್ತವ್ಯ ಕೂಡ ಹೌದು. ಆದರೆ, ಈ ಭೇಟಿ ಬೆನ್ನಲ್ಲೇ ಅಂದರೆ, ಜೂನ್ 23ರಂದು ಯತ್ನಾಳ್ ಅವರು ಈ ರೀತಿ ನನ್ನ ವಿರುದ್ಧ ಅಪಾರ್ಥದ ಹೇಳಿಕೆಗಳನ್ನು ನೀಡಿ, ನನ್ನ ಕರ್ತವ್ಯ ನಿಷ್ಠೆ, ಗೌರವ ಹಾಗೂ ಘನತೆಗೆ ಭಂಗ ತಂದಿದ್ದಾರೆ.
-ಡಿ.ಕೆ.ಶಿವಕುಮಾರ್ ಮಾಜಿ ಸಚಿವ