ಅಹ್ಮದಾಬಾದ್: ಭಾರತದಲ್ಲೊಂದು ಒಲಿಂಪಿಕ್ಸ್ ಆಯೋಜಿಸಬೇಕೆಂಬ ಕನಸು ಇಂದು ನಿನ್ನೆಯದಲ್ಲ. ಇದೀಗ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷ ನರೇಂದ್ರ ಬಾತ್ರಾ ಈ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊರಟಿದ್ದಾರೆ.
2036ರ ಒಲಿಂಪಿಕ್ಸ್ ಕೂಟವನ್ನು ಅಹ್ಮದಾಬಾದ್‌ನಲ್ಲಿ ನಡೆಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಂದಿಗೆ (ಐಒಸಿ) ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
2036ರ ಒಲಿಂಪಿಕ್ಸ್‌ಗೆ ಬಿಡ್ ಸಲ್ಲಿಸಲು ಚಿಂತಿಸಿದ್ದೇವೆ ಎಂದು ಬಾತ್ರಾ ಹೇಳಿದ್ದಾರೆ. ಭಾರತದಲ್ಲಿ ಇದೇ ವರ್ಷ ಅಹ್ಮದಾಬಾದ್‌ನ ಮೊಟೆರಾ ಕ್ರಿಕೆಟ್ ಮೈದಾನವನ್ನು ಮರು ವಿನ್ಯಾಸಗೊಳಿಸಲಾಗಿದೆ. ಒಂದು ಲಕ್ಷ ಪ್ರೇಕ್ಷಕರು ಕೂರಲು ಸಾಧ್ಯವಾಗುವಂತೆ ಸಿದ್ಧಗೊಳಿಸಲಾಗಿದೆ.
ಹಾಗೆಯೇ ಬಹುಮಾದರಿ ಕ್ರೀಡೆಗಳು, ಒಳಾಂಗಣ ಕ್ರೀಡೆಗಳೆಲ್ಲವನ್ನೂ ಇಲ್ಲಿ ನಡೆಸಬಹುದು. ಆದ್ದರಿಂದ ನರೇಂದ್ರ ಮೋದಿ ಮೈದಾನವೆಂದು ನಾಮಾಂಕಿತಗೊಂಡಿರುವ ಈ ಮೈದಾನ ಒಲಿಂಪಿಕ್ಸ್ ಆಯೋಜನೆಗೆ ಸೂಕ್ತ ಎನ್ನುವುದು ಬಾತ್ರಾ ಅಭಿಪ್ರಾಯ.
ಇದನ್ನೂ ಓದಿ:ಜಮೀರ್ ಅಹಮದ್‌ಗೆ ಉತ್ತರಪ್ರದೇಶ ಚುನಾವಣೆ ಪ್ರಚಾರದ ಉಸ್ತುವಾರಿ?
“ಈಗ ನನ್ನೊಂದಿಗೆ ಕೇಳಿದರೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸೂಕ್ತವೆಂದು ಹೇಳಬಲ್ಲೆ. ಆದರೆ 2036ಕ್ಕೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ನಾನಂತೂ ಅಹ್ಮದಾಬಾದ್ ಮೈದಾನದ ಹೆಸರನ್ನು ಒಲಿಂಪಿಕ್ಸ್ ಆಯೋಜನೆಗೆ ಸೂಚಿಸುತ್ತೇನೆ’ ಎಂದು ಬಾತ್ರಾ ಹೇಳಿದ್ದಾರೆ.