Advertisement

ಬೆಂಗಳೂರಿನಲ್ಲಿ 21 ಸಂಘ ಸಂಸ್ಥೆಗಳಿಗೆ 203 ಎಕರೆ ಭೂಮಿ

12:09 PM Mar 20, 2018 | |

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಸಮುದಾಯದ ಸಂಘ ಸಂಸ್ಥೆಗಳಿಗೆ ಭೂಮಿ ನೀಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಚುರುಕುಗೊಳಿಸಿದ್ದು, ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕಿನಲ್ಲಿ 203 ಎಕರೆ ಸರ್ಕಾರಿ ಭೂಮಿಯನ್ನು 21 ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

Advertisement

ಸೋಮವಾರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಬೆಂಗಳೂರು ನಗರ ಜಿಲ್ಲೆ ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿಯ ಆದೂರು ಗ್ರಾಮದಲ್ಲಿ 203 ಎಕರೆ ಜಮೀನನ್ನು 21 ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ ಎಂದರು.

ಮೈಸೂರು ಪ್ರದೇಶ ಬಲಿಜ ಸಂಘ, ತೊಗಟವೀರ ಕ್ಷತ್ರಿಯ ಮಹಾಸಂಘ, ರಾಜು ಕ್ಷತ್ರಿಯ ಸಂಘ, ಹಂದಿಜೋಗಿ ಸಂಘ, ಪಿಳ್ಳಿಕಾರರ ಸಂಘ, ಮಲಬಾರ್‌ ಮುಸ್ಲಿಂ ಅಸೋಸಿಯೇಷನ್‌, ಚೌಡೇಶ್ವರಿ ಚಾರಿಟೆಬಲ್‌ ಟ್ರಸ್ಟ್‌ ಸೇರಿದಂತೆ ವಿವಿಧ 21 ಸಂಘ ಸಂಸ್ಥೆಗಳಿಗೆ ಈ ಭೂಮಿ ನೀಡಲಾಗುತ್ತಿದೆ. ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಈ ಭೂಮಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಣಿಕಂಠನ್‌ ಪತ್ನಿಗೆ ಉದ್ಯೋಗ: ಇತ್ತೀಚೆಗೆ ಆನೆದಾಳಿಗೆ ತುತ್ತಾಗಿ ಸಾವಿಗೀಡಾದ ಹಿರಿಯ ಐಎಫ್‌ಎಸ್‌ ಅಧಿಕಾರಿ ಎಸ್‌.ಮಣಿಕಂಠನ್‌ ಅವರ ಪತ್ನಿ ಸಂಗೀತಾ ಅವರಿಗೆ ಉಪ ವಿಭಾಗಾಧಿಕಾರಿ ಹುದ್ದೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಅಲ್ಲದೆ, ಉನ್ನತ ವ್ಯಾಸಂಗದಲ್ಲಿ ತೊಡಗಿರುವ ಅವರ ಮಕ್ಕಳ ಶಿಕ್ಷಣ ಮುಂದುವರಿಸಲು ಕಾರ್ಪಸ್‌ ಫಂಡ್‌ನಿಂದ 50 ಲಕ್ಷ ರೂ. ನೆರವು ನೀಡಲು ಕೂಡ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ನಾಗರಹೊಳೆ ಹುಲಿ ಮೀಸಲು ಅರಣ್ಯದ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಣಿಕಂಠನ್‌ ಕಳೆದ ಮಾರ್ಚ್‌ 3ರಂದು ಆನೆ ದಾಳಿಗೆ ತುತ್ತಾಗಿ ಸಾವಿಗೀಡಾಗಿದ್ದರು.

Advertisement

ಸಂಪುಟದ ಇತರೆ ತೀರ್ಮಾನಗಳು
– ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಜಕ್ಕೂರಿನಲ್ಲಿ 62.4 ಕೋಟಿ ವೆಚ್ಚದಲ್ಲಿ ಪಂಚಾಯತ್‌ ರಾಜ್‌ ಭವನ ನಿರ್ಮಾಣಕ್ಕೆ 24.59 ಕೋಟಿ ರೂ. ಬಿಡುಗಡೆ.

– ಬಿಡದಿ ಪಟ್ಟಣದಲ್ಲಿ 92 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಯೋಜನೆ ರೂಪಿಸುವ ಪ್ರಸ್ತಾವನೆಗೆ ಅನುಮೋದನೆ.

– ಮಂಚನಬೆಲೆ ಜಲಾಶಯದಿಂದ ಬಿಡದಿ ಪಟ್ಟಣ ಹಾಗು 9 ಹಳ್ಳಿಗಳಿಗೆ ಕುಡಿಯುವ ನೀರೊದಗಿಸುವ 7 ಕೋಟಿ ರೂ .ಯೋಜನೆಗೆ ಸಂಪುಟ ಅನುಮತಿ ನೀಡಿದೆ.

– ಬಿಡದಿಯಲ್ಲಿ ಒಳಚರಂಡಿ ಯೋಜನೆಯನ್ನು 98.20 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅನುಮೋದನೆ.

– ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಜೆ.ಕೆ.ಸಿಮೆಂಟ್‌ ಕಂಪನಿಗೆ 485 ಎಕರೆ ಜಮೀನು ಖರೀದಿಸಲು ಹಾಗೂ ರಿನಿವ್‌ ಸ್ಟಾರ್‌ ಊರ್ಜಾ ಕಂಪನಿಗೆ ಹಗರಿಬೊಮ್ಮನಹಳ್ಳಿಯಲ್ಲಿ 245 ಎಕರೆ ಜಮೀನು ಖರೀದಿಸಲು ಸಮ್ಮತಿ.

– ಹುಬ್ಬಳ್ಳಿ-ಧಾರವಾಡದ ಬಿಆರ್‌ಟಿಎಸ್‌ ಯೋಜನೆಯನ್ನು ಈಗಾಗಲೇ 929 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಿದ್ದು, ಯೋಜನೆ ಪೂರ್ಣಗೊಳ್ಳಲು ಹೆಚ್ಚುವರಿಯಾಗಿ 123 ಕೋಟಿ ರೂ. ಒದಗಿಸಲು ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next