ಹೊಸದಿಲ್ಲಿ: ಜುಲೈ 18 ರಂದು ಮೈತ್ರಿಕೂಟದ 25 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ 39 ರಾಷ್ಟ್ರೀಯ ಎನ್‌ಡಿಎ ಮಿತ್ರ ಪಕ್ಷಗಳು ಒಗ್ಗೂಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 31 ರಿಂದ ಆಗಸ್ಟ್ 10 ರವರೆಗೆ ದೆಹಲಿಯಲ್ಲಿ 430 ಎನ್‌ಡಿಎ ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ವೇಳೆ ಈ ಸಭೆ ಮಹತ್ವ ಪಡೆದುಕೊಂಡಿದೆ.
ಬಿಜೆಪಿ 430 ಸಂಸದರನ್ನು 11 ಕ್ಲಸ್ಟರ್‌ಗಳಾಗಿ ವಿಂಗಡಿಸಿದೆ. ಜುಲೈ 31ರಂದು ಮೊದಲ ದಿನ ಪ್ರಧಾನಿ ಮೋದಿ ಅವರು ಎರಡು ಕ್ಲಸ್ಟರ್‌ಗಳಿಂದ 83 ಸಂಸದರ ಎರಡು ಸಭೆಗಳನ್ನು ನಡೆಸಲಿದ್ದಾರೆ. ಉತ್ತರ ಪ್ರದೇಶದ ಪಶ್ಚಿಮ ಯುಪಿ, ಬ್ರಜ್, ಕಾನ್ಪುರ, ಬುಂದೇಲ್‌ಖಂಡ್, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾ ಸಂಸದರ ಸಭೆ ನಡೆಯಲಿದೆ. ಮೊದಲ ಸಭೆ ಸಂಜೆ 6.30ಕ್ಕೆ, ಇನ್ನೊಂದು ಸಭೆ ಸಂಜೆ 7.30ಕ್ಕೆ ನಡೆಯಲಿದೆ.
ಮೊದಲ ಸಭೆಯಲ್ಲಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ಮೋದಿಯವರೊಂದಿಗೆ ಉಪಸ್ಥಿತರಿದ್ದರೆ, ಎರಡನೆಯ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ಉಪಸ್ಥಿತರಿರಲಿದ್ದಾರೆ. ಈ ಸಭೆಗಳನ್ನು ಕೇಂದ್ರ ಸಚಿವರಾದ ಸಂಜೀವ್ ಬಲ್ಯಾನ್, ಬಿಎಲ್ ವರ್ಮಾ, ಧರ್ಮೇಂದ್ರ ಪ್ರಧಾನ್ ಮತ್ತು ಶಾಂತನು ಠಾಕೂರ್ ಅವರು ಭಾಗಿಯಾಗಲಿದ್ದಾರೆ.
ಮೂರನೇ ಮತ್ತು ನಾಲ್ಕನೇ ಕ್ಲಸ್ಟರ್ ಸಭೆಗಳು ಆಗಸ್ಟ್ 2 ರಂದು ನಡೆಯಲಿದ್ದು, ಯುಪಿಯ ಕಾಶಿ, ಗೋರಖ್‌ಪುರ ಮತ್ತು ಅವಧ್, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪದ 96 ಸಂಸದರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ಅನುಪ್ರಿಯಾ ಪಟೇಲ್, ಮಹೇಂದ್ರ ನಾಥ್ ಪಾಂಡೆ, ಪ್ರಹ್ಲಾದ ಜೋಶಿ ಮತ್ತು ವಿ. ಮುರಳೀಧರನ್ ಅವರು ಭಾಗಿಯಾಗಲಿದ್ದಾರೆ.
ಆಗಸ್ಟ್ 3 ರಂದು, ಬಿಹಾರ, ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ಹರಿಯಾಣ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ 63 ಸಂಸದರ ಐದನೇ ಮತ್ತು ಆರನೇ ಕ್ಲಸ್ಟರ್ ಸಭೆಗಳಲ್ಲಿ ಕೇಂದ್ರ ಸಚಿವರಾದ ನಿತ್ಯಾನಂದ ರಾಯ್ , ಅನುರಾಗ್ ಠಾಕೂರ್ ಮತ್ತು ಅಜಯ್ ಭಟ್ ಅವರು ಭಾಗಿಯಾಗಲಿದ್ದಾರೆ.
ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗೋವಾದ 76 ಸಂಸದರ ಎರಡು ಗುಂಪುಗಳು ಆಗಸ್ಟ್ 8 ರಂದು ಪ್ರಧಾನಿಯನ್ನು ಭೇಟಿಯಾಗಲಿವೆ. ಅಲ್ಲದೆ, ಗುಜರಾತ್, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕ್ಲಸ್ಟರ್ ಜೊತೆಗೆ ಈ ವರ್ಷದ ಅಂತ್ಯದ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ 81 ಸಂಸದರು ಆಗಸ್ಟ್ 9 ರಂದು ಭೇಟಿಯಾಗಲಿದ್ದಾರೆ. ಈಶಾನ್ಯ ಕ್ಲಸ್ಟರ್‌ನ ಉಳಿದ 31 ಸಂಸದರ ಸಭೆಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ.
ಎನ್‌ಡಿಎಯ ಸಂಸದರು ಪ್ರದೇಶವಾರು ಪ್ರಧಾನಿಯನ್ನು ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ನಿರ್ಣಾಯಕ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಪೂರ್ವದಲ್ಲಿ ಚರ್ಚೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳ ಜತೆಗೂಡಿ ಶೇ 50ರಷ್ಟು ಮತ ಗಳಿಸಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ದುರ್ಬಲ ಎಂದು ಗುರುತಿಸಲಾಗಿರುವ 160 ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಈ ಕಸರತ್ತು ಮಾಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಹೊರ ಹಾಕಿದ್ದಾರೆ.