Advertisement

2023 Politics; ಬಿಜೆಪಿಯದ್ದೇ ಮೇಲುಗೈ : ಇಂಡಿಯಾ ಮೈತ್ರಿಕೂಟ ಹೋರಾಟಕ್ಕೆ ಸಿದ್ಧತೆ

06:18 PM Dec 30, 2023 | Team Udayavani |

2023ರಲ್ಲಿ ರಾಜಕೀಯ ರಂಗದಲ್ಲಿ ಒಟ್ಟು 8 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ  ನಡೆದಿದ್ದು, ಒಟ್ಟಾರೆಯಾಗಿ ಬಿಜೆಪಿಯೇ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಭರ್ಜರಿ ಗೆಲುವು, ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಸಂಘಟನೆಯಾದದ್ದು ಕಾಂಗ್ರೆಸ್ ಪಾಲಿಗೆ ಹೊಸ ಉತ್ಸಾಹ ತಂದುಕೊಟ್ಟಿತಾದರೂ ಲೋಕ ಸಮರಕ್ಕೆ ಸೆಮಿಫೈನಲ್ ಎಂದು ಪರಿಗಣಿಸಲಾದ ಪಂಚರಾಜ್ಯಗಳ ಫಲಲಿತಾಂಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಕಾಂಗ್ರೆಸ್ ಪಾಳಯಕ್ಕೆ ದೊಡ್ಡ ಹೊಡೆತ ನೀಡಿತು. ಕೈ ಪಾಳಯಕ್ಕೆ ತೆಲಂಗಾಣದ ಗೆಲುವು ಸಂಭ್ರಮಿಸುವುದಕ್ಕಿಂತ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿತು.

Advertisement

ತ್ರಿಪುರಾ 

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆ ಚುನಾವಣೆ ಫೆಬ್ರವರಿ 16 ರಂದು ನಡೆಯಿತು. ಫಲಿತಾಂಶಗಳನ್ನು ಮಾರ್ಚ್ 2 ರಂದು ಪ್ರಕಟವಾಯಿತು. ಬಿಜೆಪಿ ಪ್ರತಿಸ್ಪರ್ಧಿಗಳಾದ ಸೆಕ್ಯುಲರ್ ಡೆಮಾಕ್ರಟಿಕ್ ಫೋರ್ಸ್ ಮತ್ತು ತಿಪ್ರಾ ಮೋಥಾ ಪಾರ್ಟಿಯನ್ನು ಸೋಲಿಸಿ ಸರಳ ಬಹುಮತವನ್ನು ಗಳಿಸಿತು. ವಿಶೇಷವೆಂಬಂತೆ ತಿಪ್ರಾ ಮೋಥಾ ಪಕ್ಷ ತನ್ನ ಚೊಚ್ಚಲ ಹೋರಾಟದಲ್ಲಿ 13 ಸ್ಥಾನಗಳನ್ನು ಗೆದ್ದು ಅತಿದೊಡ್ಡ ವಿರೋಧ ಪಕ್ಷವಾಯಿತು. ಬಿಜೆಪಿ ನಾಯಕ ಮಾಣಿಕ್ ಸಹಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಮೇಘಾಲಯ
ಈಶಾನ್ಯದ ಮತ್ತೊಂದು ರಾಜ್ಯ ಮೇಘಾಲಯದ 60 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 27 ರಂದು ಚುನಾವಣೆ ನಡೆಸಯಿತು. ಮಾರ್ಚ್ 2 ರಂದು ಪ್ರಕಟವಾಯಿತು. ನ್ಯಾಷನಲ್ ಪೀಪಲ್ಸ್ ಪಾರ್ಟಿಯ ನೇತೃತ್ವದ ಒಕ್ಕೂಟ ಬಹುಮತ ಗಳಿಸಿ ಸರಕಾರ ರಚಿಸಿತು. ಕಾನ್ರಾಡ್ ಸಂಗ್ಮಾ ಮುಖ್ಯಮಂತ್ರಿಯಾದರು.

ನಾಗಾಲ್ಯಾಂಡ್
60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯ ಚುನಾವಣೆ ಫೆಬ್ರವರಿ 27 ರಂದು ನಡೆಯಿಯಿತು. ಮಾರ್ಚ್ 2 ರಂದು ಪ್ರಕಟವಾದ ಫಲಲಿತಾಂಶದಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ಮತ್ತು ಬಿಜೆಪಿ ಮೈತ್ರಿಕೂಟವು ಬಹುಮತ ಪಡೆದು ಸರಕಾರ ರಚಿಸಿತು, ನೇಫಿಯು ರಿಯೊ ಮುಖ್ಯಮಂತ್ರಿಯಾದರು.ಎನ್‌ಪಿಎಫ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚಿಸಲು ಬಿಜೆಪಿ ತನ್ನ ಸ್ಥಳೀಯ ಮಿತ್ರ ಪಕ್ಷ ನಾಗಾ ಪೀಪಲ್ಸ್ ಫ್ರಂಟ್‌ನೊಂದಿಗೆ ಸಂಬಂಧ ಕಡಿದುಕೊಂಡಿತು.

Advertisement

ಕರ್ನಾಟಕ
ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಪಾಲಿಗೆ ಭರವಸೆಯಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಒಡಕಿನ ಲಾಭವನ್ನು ಬಳಸಿಕೊಂಡ ಕೈ ಪಾಳಯ ನಿರೀಕ್ಷೆ ಮೀರಿದ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಏರಿತು. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸೋಲಿನ ಸುಳಿಗೆ ಸಿಲುಕಿ ಕಂಗಾಲಾದ ಬಿಜೆಪಿ ವಿಪಕ್ಷ ನಾಯಕನ ನೇಮಕ ಮಾಡಲು ಹಲವು ಕಾಲ ಕಳೆಯಿತು. ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಹೊಸ ಚೈತನ್ಯಪಡೆದು ಬಿಜೆಪಿ ವಿರುದ್ಧ ಹೋರಾಟ ಸಂಘಟಿಸಲು ಉತ್ಸಾಹ ಪಡೆದುಕೊಂಡಿತು. ಇಂಡಿಯಾ ಮೈತ್ರಿ ಕೂಟ ರಚನೆ ಮಾಡಿ ವಿಪಕ್ಷಗಳ ನಾಯಕರಿಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಘಟಿತ ಹೋರಾಟ ನಡೆಸಲು ಒಂದಾಗುವ ಯೋಚನೆಯನ್ನು ಈ ಫಲಿತಾಂಶ ನೀಡಿತು.

ಪಂಚ ರಾಜ್ಯಗಳ ಫಲಿತಾಂಶ

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ನಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆ 2024 ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಯಿತು. ಹಲವು ಸಾವಾಲುಗಳ ನಡುವೆಯೂ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ದೊಡ್ಡ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಜಯದೊಂದಿಗೆ ಹೊಸ ಉತ್ಸಾಹ ತುಂಬಿಕೊಂಡಿತು. ಕಾಂಗ್ರೆಸ್ ಪಾಲಿಗೆ ತೆಲಂಗಾಣದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದ ಸಂತೋಷವಷ್ಟೇ ಉಳಿಯಿತು. 40 ಸದಸ್ಯ ಬಲದ ಮಿಜೋರಾಂ ನಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ ಪಕ್ಷ 27 ಸ್ಥಾನಗಳನ್ನು ಗೆದ್ದು ಲಾಲ್ದುಹೋಮ ಸಿಎಂ ಆಗಿ ಆಯ್ಕೆಯಾದರು.

ಬದಲಾವಣೆ ತಂದ ಬಿಜೆಪಿ ಮಧ್ಯಪ್ರದೇಶದಲ್ಲಿ ಡಾ. ಮೋಹನ್ ಯಾದವ್ , ರಾಜಸ್ಥಾನದಲ್ಲಿ ಭಜನ್ ಲಾಲ್ ಶರ್ಮ, ಛತ್ತೀಸ್‌ಗಢದಲ್ಲಿ ವಿಷ್ಣುದೇವ್ ಸಾಯಿ ಅವರನ್ನು ಅಚ್ಚರಿ ಎಂಬಂತೆ ಸಿಎಂಗಳನ್ನಾಗಿ ಮಾಡಿತು. ಕಾಂಗ್ರೆಸ್ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರಿಗೆ ಸಿಎಂ ಹುದ್ದೆ ನೀಡಿತು.

Indian National Developmental Inclusive Alliance(ಇಂಡಿಯಾ ಮೈತ್ರಿಕೂಟ)
ಲೋಕಸಭಾ ಚುನಾವಣೆ ಎದುರಿಸಲು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟವನ್ನು ಕಾಂಗ್ರೆಸ್ ನೇತೃತ್ವದಲ್ಲಿ ರಚಿಸಲಾಯಿತು. 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 28 ಪಕ್ಷಗಳ ನಾಯಕರು ವಿಪಕ್ಷ ಮೈತ್ರಿಕೂಟ ಘೋಷಿಸಿದರು.ಮೊದಲ ಸಭೆ ಬಿಹಾರದ ಪಾಟ್ನಾದಲ್ಲಿ ನಡೆಯಿತು. ಬೆಂಗಳೂರಿನಲ್ಲಿ ನಡೆದ ಎರಡನೇ ಮಹತ್ವದ ಸಭೆಯಲ್ಲಿ ”ಇಂಡಿಯಾ” ಹೆಸರನ್ನು ಪ್ರಸ್ತಾಪಿಸಿ ಸಭೆಯಲ್ಲಿ ಭಾಗಿಯಾಗಿದ್ದ 28 ಪಕ್ಷಗಳ ನಾಯಕರು ಸರ್ವಾನುಮತದಿಂದ ಅಂಗೀಕರಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next