ಡಾ| ಎಂ.ಎನ್. ಆರ್ ಅವಿರೋಧ ಆಯ್ಕೆ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ರಂಗದ ಧುರೀಣ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಸೆ. 19ರಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಅಧ್ಯಕ್ಷರಾಗಿ ಎರಡನೇ ಬಾರಿ ಅವಿ ರೋಧವಾಗಿ ಆಯ್ಕೆಯಾಗಿದರು.
ಎಸ್‌ಡಿಪಿಐ, ಪಿಎಫ್ಐ ಕಚೇರಿಗಳಿಗೆ ಎನ್‌ಐಎ ದಾಳಿ
ದಕ್ಷಿಣ ಕನ್ನಡ ಜಿಲ್ಲೆಯ 11 ಕಡೆಗಳಲ್ಲಿ ಎನ್‌ಐಎ ಮತ್ತು ಸ್ಥಳೀಯ ಪೊಲೀಸರು ಎಸ್‌ಡಿಪಿಐ, ಪಿಎಫ್ಐ ಕಚೇರಿ ಹಾಗೂ ಅವುಗಳ ಮುಖಂಡರ ಮನೆಗಳಿಗೆ ಸೆ. 22ರಂದು ದಾಳಿ ನಡೆಸಿ ಲ್ಯಾಪ್‌ಟಾಪ್, ದಾಖಲೆಗಳ ಸಹಿತ ಐವರನ್ನು ವಶಕ್ಕೆ ತೆಗೆದುಕೊಂಡಿದ್ದರು. 2020ರಲ್ಲಿ ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿತ್ತು.
Related Articles
ಮೂರು ನೌಕೆಗಳು ಬೆಂಕಿಗಾಹುತಿ
ಸರಕು ಸಾಗಾಟದ 3 ನೌಕೆಗಳು (ಮಂಜಿ) ಬೆಂಕಿ ಗಾಹುತಿಯಾದ ಘಟನೆ ಅ. 29ರ ಸಂಜೆ ಕಸಬಾ ಬೆಂಗರೆ ಯಲ್ಲಿ ನಡೆದಿತ್ತು. ಲಕ್ಷದ್ವೀಪಕ್ಕೆ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ಈ ನೌಕೆಗಳನ್ನು ದುರಸ್ತಿ ಕಾರಣಕ್ಕೆ ಎರಡು ವರ್ಷಗಳಿಂದ ನೀರಿನಿಂದ ಮೇಲಕ್ಕೆತ್ತಿ ಇಡಲಾಗಿತ್ತು. ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬಂದಿ ತಡರಾತ್ರಿವರೆಗೂ ಶ್ರಮಿಸಿದ್ದರು.
ಕಂಕನಾಡಿನಲ್ಲಿ ಕುಕ್ಕರ್ ಸ್ಫೋಟ
ಮಂಗಳೂರಿನ ನಾಗುರಿಯಲ್ಲಿ ನ. 19ರ ಸಂಜೆ ಚಲಿಸುತ್ತಿದ್ದ ಆಟೋ ರಿಕ್ಷಾದೊಳಗೆ ಸ್ಫೋಟ ಉಂಟಾಗಿ ಪ್ರಯಾಣಿಕ ಮತ್ತು ಚಾಲಕ ಗಂಭೀರ ಗಾಯಗೊಂಡರು. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್ ಪತ್ತೆಯಾ ಗಿತ್ತು. ಸ್ಫೋಟದಿಂದ ಗಂಭೀ ರವಾಗಿ ಗಾಯಗೊಂಡ ಶಂಕಿತ ಭಯೋತ್ಪಾದಕ ಶಿವಮೊಗ್ಗ ತೀರ್ಥಹಳ್ಳಿ ನಿವಾಸಿ ಮಹಮ್ಮದ್ ಶಾರೀಕ್ (25) ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಗಳೊಂದಿಗೆ ನಂಟು ಹೊಂದಿರುವುದು ಮತ್ತು ಮಂಗಳೂರಿನ ಪ್ರಮುಖ ದೇಗುಲಗಳೇ ಈತನ ಗುರಿಯಾಗಿದ್ದವು ಎಂಬುದು ತನಿಖೆಯ ವೇಳೆ ಬಯಲಾಗಿತ್ತು. ಈ ಸ್ಫೋಟದ ಹೊಣೆಯನ್ನು ಉಗ್ರ ಸಂಘಟನೆಯೊಂದು ವಹಿಸಿಕೊಂಡಿತ್ತು.
ಫ್ಯಾನ್ಸಿ ಸ್ಟೋರ್ ಮಾಲಕನ ಹತ್ಯೆ
ಸುರತ್ಕಲ್ ಸಮೀಪದ ಕೃಷ್ಣಾಪುರದ ಐದನೇ ಬ್ಲಾಕ್‌ನಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಫ್ಯಾನ್ಸಿ ಸ್ಟೋರ್ ಮಾಲಕ ಜಲೀಲ್ (42) ಅವರನ್ನು ಡಿ. 24ರಂದು ರಾತ್ರಿ ಚೂರಿಯಿಂದ ಇರಿದು ಕೊಲೆಗೈದಿದ್ದರು. ಎರಡು ದಿನಗಳ ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆ ಲೋಕಾರ್ಪಣೆ
ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರಥಮ ಸ್ವಾತಂತ್ರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನ. 19ರಂದು ಲೋಕಾರ್ಪಣೆ ಮಾಡಿದರು.
ಸಮುದ್ರದಲ್ಲೂ ಮೊಳಗಿತು ಕೋಟಿ ಕಂಠ ಗಾಯನ
ಕರ್ನಾಟಕ ರಾಜ್ಯೋತ್ಸವದ ಅಂಗ ವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ಹಮ್ಮಿ ಕ ೊಂಡಿದ್ದ ಕೋಟಿ ಕಂಠ ಗಾಯನವು ಮಂಗಳೂರು ನಗರ ದಲ್ಲಿ ಅರ್ಥಪೂರ್ಣವಾಗಿ ಜರಗಿತು. ಅರಬಿ ಸಮುದ್ರದಲ್ಲಿ 50ರಷ್ಟು ಬೋಟ್‌ಗಳ ಒಂದೂವರೆ ತಾಸಿನ ಕಡಲ ಯಾನದಲ್ಲಿ ಕೋಟಿ ಕಂಠ ಗಾಯನ ಮೂಡಿ ಬಂದಿತ್ತು. ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ ಬೋಟ್‌ಗಳು ತೋಟಬೆಂಗ್ರೆ ಅಳಿವೆ ಬಾಗಿಲು ವರೆಗೆ 8 ಕಿ.ಮೀ. ಸಾಗುವ ಮೂಲಕ ಕನ್ನಡದ 6 ಹಾಡುಗಳನ್ನು ಹಾಡಲಾಯಿತು. ಎಲ್ಲ ಬೋಟ್‌ಗಳು ಶೃಂಗಾರ ಗೊಂಡು ಕನ್ನಡದ ಜತೆಗೆ ತುಳು ಬಾವುಟವೂ ರಾರಾಜಿಸಿದ್ದು ವಿಶೇಷವೆನಿಸಿತು.
ಎನ್‌ಐಟಿಕೆ ಟೋಲ್‌ಗೇಟ್ ಕೊನೆಗೂ ರದ್ದು
ಬಹಳಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಮುಕ್ಕ ಎನ್‌ಐಟಿಕೆ ಬಳಿಯ ಟೋಲ್‌ಗೇಟ್ ಅನ್ನು ರದ್ದುಗೊಳಿಸಿ ನ. 15ರಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿತು. ಅದರಂತೆ ಎನ್‌ಎಚ್ 66ರ ನಂತೂರು -ಸುರತ್ಕಲ್ ಭಾಗ ಮತ್ತು ನಂತೂರು ಎನ್‌ಎಚ್ 75ರ ಜಂಕ್ಷನ್-ಪಡೀಲ್ ಭಾಗದ ಒಟ್ಟು 18.36 ಕಿ.ಮೀ. ದೂರದ ಸುಂಕವನ್ನು ಹೆಜಮಾಡಿಯಲ್ಲಿರುವ ನವಯುಗ ಉಡುಪಿ ಟೋಲ್‌ವೇ ಪ್ರೈ.ಲಿ.ನವರು ಸಂಗ್ರಹ ಮಾಡಬೇಕಿದೆ.
ಅಪಾಯದಲ್ಲಿ ಸಿಲುಕಿದ ಹಡಗು
ಯುಎಇಯಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಗಬಾನ್ ದೇಶದ ಹಡಗು ಸೆ. 16ರಂದು ರತ್ನಗಿರಿ ಕರಾವಳಿಯ ಪಶ್ಚಿಮಕ್ಕೆ ಸುಮಾರು 41 ಮೈಲು ದೂರದಲ್ಲಿ ಅಪಾಯದಲ್ಲಿ ಸಿಲುಕಿತ್ತು. ಅದರಲ್ಲಿದ್ದ 19 ಮಂದಿಯನ್ನು ಭಾರತೀಯ ಕೋಸ್ಟ್‌ಗಾರ್ಡ್ ರಕ್ಷಿಸಿತು.
ಕುಂಬಳೆ ಸುಂದರ ರಾವ್ ನಿಧನ
ಯಕ್ಷ ರಂಗದ ಅಪ್ರತಿಮ ಕಲಾವಿದ, ಮಾಜಿ ಶಾಸಕ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ್ ರಾವ್ (88) ವಯೋಸಹಜ ಅನಾರೋಗ್ಯದಿಂದ ನ. 30ರಂದು ನಿಧನ ಹೊಂದಿದರು.
ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ -2022 ಡಿ.21ರಿಂದ ಡಿ. 27ರ ವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅದ್ದೂರಿಯಾಗಿ ನಡೆಯಿತು. ದೇಶ-ವಿದೇಶಗಳ ಸ್ಕೌಟ್ಸ್, ಗೈಡ್ಸ್, ರೇಂಜರ್ ಮತ್ತು ರೋವರ್ನ ಸಹಸ್ರಾರು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.