ದುಬೈ: ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಆಡಿರುವ ವನಿತಾ ಆಟಗಾರರು ಮುಂದೆ 50 ಓವರ್ ಗಳ ವಿಶ್ವಕಪ್ ಗೆ ಸಿದ್ದವಾಗಲಿದ್ದಾರೆ. 2021ರ ನ ವನಿತಾ ವಿಶ್ವಕಪ್ ನ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಕಿವೀಸ್ ಆತಿಥ್ಯ ವಹಿಸಲಿದೆ.
ಮುಂದಿನ ವರ್ಷದ ಫೆಬ್ರವರಿ ಆರರಿಂದ 50 ಓವರ್ ಗಳ ವನಿತಾ ವಿಶ್ವಕಪ್ ಗೆ ಚಾಲನೆ ಸಿಗಲಿದೆ. ಅರ್ಹತಾ ತಂಡದ ವಿರುದ್ಧ ನ್ಯೂಜಿಲ್ಯಾಂಡ್ ಮೊದಲ ಪಂದ್ಯದಲ್ಲಿ ಆಡಲಿದೆ.
ಆಕ್ಲಂಡ್, ಹ್ಯಾಮಿಲ್ಟನ್, ಟೌರಾಂಗ, ವೆಲ್ಲಿಂಗ್ಟನ್, ಕ್ರೈಸ್ಟ್ ಚರ್ಚ್ ಮತ್ತು ಡುನೆಡಿನ್ ಹೀಗೆ ಒಟ್ಟು ಆರು ಮೈದಾನಗಳಲ್ಲಿ ವಿಶ್ವಕಪ್ ಕೂಟ ನಡೆಯಲಿದೆ. ಮಾರ್ಚ್ 7ರಂದು ಫೈನಲ್ ಪಂದ್ಯ ನಡೆಯಲಿದ್ದು, ಕ್ರೈಸ್ಟ್ ಚರ್ಚ್ ಅದರ ಆತಿಥ್ಯ ವಹಿಸಲಿದೆ.
ಮಾರ್ಚ್ 3 ಮತ್ತು 4ರಂದು ಸೆಮಿ ಫೈನಲ್ ಪಂದ್ಯಗಳು ನಡೆಯಲಿದ್ದು, ಹೆಚ್ಚುವರಿ ದಿನಗಳನ್ನು ಮೀಸಲಿಡಲಾಗಿದೆ. ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿದ್ದು, ಲೀಗ್ ಹಂತದಲ್ಲಿ ಪ್ರತೀ ತಂಡದ ಎದುರು ಆಡುವ ಅವಕಾಶ ಪಡೆಯಲಿದೆ.
ಇದುವರೆಗೆ ಕೂಟಕ್ಕೆ ಕೇವಲ ನಾಲ್ಕು ತಂಡಗಳು ಮಾತ್ರ ನೇರ ಅರ್ಹತೆ ಪಡೆದಿದ್ದು, ಭಾರತ ಅರ್ಹತೆ ಪಡೆದಿಲ್ಲ. ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್ ಗೆ ನೇರ ಅರ್ಹತೆ ಪಡೆದಿವೆ. ವನಿತಾ ಅರ್ಹತಾ ಪಂದ್ಯಾವಳಿಯ ನಂತರ ಉಳಿದ ತಂಡಗಳು ಆಯ್ಕೆಯಾಗಲಿವೆ.