ಹೊಸದಿಲ್ಲಿ: ಕಳೆದ 121 ವರ್ಷಗಳಲ್ಲೇ 2021ರಲ್ಲಿ 5ನೇ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ; ಕಳೆದ ವರ್ಷ ದಾಖಲಾಗಿರುವ ಸರಾಸರಿ ಉಷ್ಣಾಂಶ 0.44 ಡಿಗ್ರಿ ಸೆಲ್ಸಿಯಸ್. ಗಮನಿಸ ಬೇಕಾದ ಸಂಗತಿಯೆಂದರೆ 2000ನೇ ವರ್ಷದ ಅನಂತರವೇ ಐದೂ ಗರಿಷ್ಠ ಸರಾಸರಿ ಉಷ್ಣಾಂಶ ದಾಖಲಾಗಿರುವುದು.
2010ರಲ್ಲಿ 0.539, 2009 ಮತ್ತು 2017ರಲ್ಲಿ ತಲಾ 0.541, 2016ರಲ್ಲಿ 0.710 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 2016ರಲ್ಲಿ ದಾಖಲಾಗಿರುವುದು ಕಳೆದ 121 ವರ್ಷಗಳಲ್ಲಿನ ಗರಿಷ್ಠ ಸರಾಸರಿ ವಾಯು ತಾಪಮಾನ. ಚಳಿಗಾಲ, ಮುಂಗಾರೋತ್ತರ ಅವಧಿಯಲ್ಲೂ ವಾತಾವರಣದಲ್ಲಿ ಬಿಸಿ ಜಾಸ್ತಿಯೇ ಇದ್ದದ್ದು ಈ ಪರಿಸ್ಥಿತಿಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಹವಾಮಾನ ವೈಪರೀತ್ಯಕ್ಕೆ 1,750 ಸಾವು: ಪ್ರತಿಕೂಲ ಹವಾಮಾನದಿಂದಾಗಿ 2021ರಲ್ಲಿ ದೇಶಾದ್ಯಂತ 1,750 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಅತಿ ಹೆಚ್ಚು ಸಾವು ಸಂಭವಿಸಿರುವುದು ಮಹಾರಾಷ್ಟ್ರದಲ್ಲಿ (350). ಕಳೆದ ವರ್ಷ ಗುಡುಗು ಮತ್ತು ಮಿಂಚಿನಿಂದ 787 ಮಂದಿ ಸಾವಿಗೀಡಾದರೆ, ಭಾರೀ ಮಳೆ ಹಾಗೂ ಪ್ರವಾಹಕ್ಕೆ 759 ಮಂದಿ ಬಲಿಯಾಗಿದ್ದಾರೆ. ಚಂಡಮಾರುತವು 172 ಜೀವಗಳನ್ನು ಬಲಿಪಡೆದಿದೆ. ಮತ್ತಿತರ ಪ್ರಾಕೃತಿಕ ವಿಕೋಪದಿಂದ 32 ಮಂದಿ ಅಸುನೀಗಿದ್ದಾರೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ:ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತಕ್ಕೆ ಪ್ರತಿಕೂಲ ಹವಾಮಾನವೇ ಕಾರಣ!
ಮಹಾಬಲೇಶ್ವರದಲ್ಲಿ ಶೂನ್ಯಕ್ಕಿಳಿದ ತಾಪ!
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಕನಿಷ್ಠ ತಾಪಮಾನ ಶೂನ್ಯಕ್ಕೆ ತಲುಪಿದೆ. ಶುಕ್ರವಾರ ಮಹಾಬಲೇಶ್ವರದ ವೆನ್ನಾ ಸರೋವರದಲ್ಲಿ ತಾಪಮಾನ 0 ಡಿ.ಸೆ.ಗೆ ಇಳಿದಿದ್ದು, ರಾಜ್ಯದಲ್ಲೇ ಅತ್ಯಂತ ಶೀತ ಪ್ರದೇಶವಾಗಿ ರೂಪುಗೊಂಡಿತು.