Advertisement

2021ರ ಟೋಕಿಯೊ ಒಲಿಂಪಿಕ್ಸ್‌; ಅರ್ಹತಾ ಆ್ಯತ್ಲೀಟ್‌ಗಳ ಸ್ಥಾನ ಭದ್ರ

09:36 AM Mar 29, 2020 | Sriram |

ಪ್ಯಾರಿಸ್‌: ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿದ ಆ್ಯತ್ಲೀಟ್‌ಗಳು 2021ರಂದು ನಡೆಯುವ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 11,000 ಆ್ಯತ್ಲೀಟ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. ಕೋವಿಡ್‌ 19 ವೈರಸ್‌ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂಟರ್‌ನ್ಯಾಶನಲ್‌ ಒಲಿಂಪಿಕ್‌ ಸಮಿತಿ (ಐಒಸಿ) ಒಲಿಂಪಿಕ್‌ ಕೂಟವನ್ನು 2021ಕ್ಕೆ ಮುಂದೂಡುವುದಕ್ಕಿಂತ ಮೊದಲೇ ಶೇ. 57ರಷ್ಟು ಮಂದಿ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದರು.
ಐಒಸಿ ಮತ್ತು 32 ಅಂತಾರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳು ಗುರುವಾರ ನಡೆಸಿದ ಟೆಲಿಕಾನ್ಫರೆನ್ಸ್‌ ಚರ್ಚೆಯಲ್ಲಿ ಅರ್ಹತಾ ಪ್ರಕ್ರಿಯೆಯನ್ನು ಗೌರವಿಸಲು ನಿರ್ಧರಿಸಿತು. ಚರ್ಚೆಯ ಬಳಿಕ ಮಾತನಾಡಿದ ಐಒಸಿ ಮುಖ್ಯಸ್ಥ ಥಾಮಸ್‌ ಬಾಕ್‌ ಅವರು ಗೇಮ್ಸ್‌ ಮುಂದೂಡಿದ ಕಾರಣವನ್ನು ತಿಳಿಸಿದರಲ್ಲದೇ 2020ರ ಗೇಮ್ಸ್‌ಗೆ ಅರ್ಹತೆ ಗಳಿಸಿದ ಆ್ಯತ್ಲೀಟ್‌ಗಳು ನೇರವಾಗಿ 2021ರ ಗೇಮ್ಸ್‌ನಲ್ಲಿ ಭಾಗವಹಿಸಬಹುದು ಎಂದು ಸ್ಪಷ್ಟಪಡಿಸಿದರು.

ಟೋಕಿಯೊ ಗೇಮ್ಸ್‌ ಜುಲೈ 24ರಿಂದ ಆ. 9ರ ವರೆಗೆ ನಡೆಯಬೇಕಿತ್ತು. ಇದಕ್ಕಿಂತ ಮೊದಲು ನಾವು ಅರ್ಹತಾ ಕೂಟಗಳನ್ನು ಸಂಘಟಿಸಿ ಅರ್ಹ ಆ್ಯತ್ಲೀಟ್‌ಗಳ ಆಯ್ಕೆ ಮಾಡಬೇಕಿತ್ತು. ಕೆಲವು ಫೆಡರೇಶನ್‌ಗಳಲ್ಲಿ ಹಲವು ಪುರುಷ ಮತ್ತು ವನಿತಾ ಕ್ರೀಡಾಪಟುಗಳು ಇನ್ನಷ್ಟೇ ಅರ್ಹತೆ ಗಳಿಸಬೇಕಿದೆ. ಇದಕ್ಕೆ ಕಡಿಮೆಪಕ್ಷ ಮೂರು ತಿಂಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಪಾನಿನ ಪ್ರಧಾನಮಂತ್ರಿ ಶಿಂಜೊ ಅಬೆ ಜತೆ ನಡೆಸಿದ ಮಾತುಕತೆಯಲ್ಲಿ ಒಲಿಂಪಿಕ್‌ ಕೂಟ ಮುಂದೂಡುವ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಬಾಕ್‌ ವಿವರಿಸಿದರು.

ದಿನಾಂಕ ನಿರ್ಧಾರವಾಗಿಲ್ಲ
ಮುಂದೂಡಲ್ಪಟ್ಟ ಒಲಿಂಪಿಕ್‌ ಗೇಮ್ಸ್‌ ಯಾವಾಗ ನಡೆಯುವ ಬಗ್ಗೆ ಇನ್ನೂ ಖಚಿತ ನಿರ್ಧಾರವಾಗಿಲ್ಲ. 2021ರ ಮೇ ತಿಂಗಳಲ್ಲಿ ನಡೆಸಲು ಕೆಲವರು ಒಲವು ವ್ಯಕ್ತಪಡಿಸಿದರೆ ಇನ್ನೂ ಕೆಲವರು ಜೂನ್‌ ಸೂಕ್ತವೆಂದು ಅಭಿಪ್ರಾಯ ತಿಳಿಸಿದ್ದಾರೆ. ಕೆಲವು ಫೆಡರೇಶನ್‌ಗಳು ಆರ್ಥಿಕ ಸಮಸ್ಯೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next