Advertisement
3 ದಶಕಗಳ ಅನಂತರ ದೇಶವು ಮತ್ತೂಂದು ಬೃಹತ್ ಪರೀಕ್ಷೆಯನ್ನು ಎದುರಿಸುತ್ತಿದೆ. ಸಾಂಕ್ರಾಮಿಕದ ಕಾರಣದಿಂದಾಗಿ ಜಾರಿಗೆ ತರಲಾದ ಲಾಕ್‌ಡೌನ್ ಆರ್ಥಿಕ ಚಟುವಟಿಕೆಗಳ ಚಕ್ರವನ್ನೇ ಹಠಾತ್ತನೆ ತಡೆದು ನಿಲ್ಲಿಸಿತು. ಪರಿಣಾಮವಾಗಿ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್ಥಿಕತೆಯು ತೀವ್ರ ಕುಸಿತವನ್ನು ಎದುರಿಸಿತು. ಹಣಕಾಸು ವರ್ಷದ ಎರಡನೇ ಭಾಗದಲ್ಲಿನ ಚೇತರಿಕೆಯ ಹೊರತಾಗಿಯೂ, ರಾಷ್ಟ್ರೀಯ ಸಂಖ್ಯಾಶಾಸ್ತ್ರ ಇಲಾಖೆಯು ವಾರ್ಷಿಕ 7.7 ಪ್ರತಿಶತ ಕುಸಿತವನ್ನು ಸೂಚಿಸುತ್ತಿದೆ. ಒಂದು ವೇಳೆ 2021-22ರಲ್ಲಿ ಭಾರತದ ಆರ್ಥಿಕತೆಯೇನಾದರೂ ಶೇ.8.7 ದರದಲ್ಲಿ ಬೆಳೆದರೆ, 2019-20ರ ಕೊನೆಯಲ್ಲಿ ನಾವು ಆರ್ಥಿಕವಾಗಿ ಎಲ್ಲಿದ್ದೆವೋ ಅಲ್ಲಿ ತಲುಪಲು ಸಾಧ್ಯವಿದೆ. ಇದಕ್ಕಾಗಿ ನಾವು ವೇಗವಾಗಿ ಸಾಗಲೇಬೇಕಿದೆ. ಹಾಗಿದ್ದರೆ ಈ ಆರ್ಥಿಕ ಕುಸಿತವು ಮತ್ತೂಂದು ಸುತ್ತಿನ ಬೃಹತ್ ಸುಧಾರಣೆಗಳಿಗೆ ಕಾರಣವಾಗಬಲ್ಲದೇ? ಈ ಪ್ರಶ್ನೆಗೆ ಉತ್ತರಿಸಬೇಕೆಂದರೆ, 1991ರಲ್ಲಿ ಎದುರಾಗಿದ್ದ ಪಲ್ಲಟ ಮತ್ತು ಆಗಿನ ಸಮಯಕ್ಕೂ ಈಗಿನ ಸಮಯಕ್ಕೂ ಇರುವ ಅಂತರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
Related Articles
Advertisement
ಇಂದು ಸುಧಾರಣ ಕ್ರಮಗಳ ವಿಚಾರದಲ್ಲಿ ಹೆಚ್ಚಿನ ಪ್ರಮಾಣದ ಚರ್ಚೆಯ ಅಗತ್ಯವೂ ಇದೆ. ಕೇಂದ್ರ ಸರಕಾರವು ಏಕಕಾಲದಲ್ಲೇ ರಾಜ್ಯ ಸರ್ಕಾರಗಳ ಜತೆ ಕೆಲಸ ಮಾಡಬೇಕು ಮತ್ತು ತನ್ನ ನಿರ್ಧಾರಗಳಿಂದ ಪರಿಣಾಮ ಎದುರಿಸಬಹುದಾದ ವಿವಿಧ ಪಾಲುದಾರರ ಸಲಹೆಗಳನ್ನೂ ಅದು ಪಡೆಯಬೇಕು. ಟೀಕೆ ಮತ್ತು ಪ್ರತಿಭಟನೆಗಳನ್ನು ಹೇಗೆ ಎದುರಿಸಲಾಗುತ್ತದೆ ಎನ್ನುವುದೂ ಮುಖ್ಯವಾಗುತ್ತದೆ. ಯಾವಾಗ ಸುಧಾರಣ ಕ್ರಮಗಳನ್ನು ರಾಷ್ಟ್ರೀಯ ಪ್ರಗತಿಯೆಡೆಗಿನ ಹೆಜ್ಜೆಗಳು ಎಂದು ನೋಡಲು ಸಾಧ್ಯವಾಗುತ್ತದೋ ಆಗ ಮಾತ್ರವೇ ಅವು ವ್ಯಾಪಕ ಮಟ್ಟದಲ್ಲಿ ಸ್ವೀಕೃತಿಯಾಗುತ್ತವೆ.
ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ಧ ಎದುರಾಗುತ್ತಿರುವ ಪ್ರತಿಭಟನೆಗಳು ಇದಕ್ಕೊಂದು ಉದಾಹರಣೆ. ಈ ವಿಚಾರದಲ್ಲಿ ಕೇಂದ್ರ ಸಾಗಬಹುದಾದ ಅತ್ಯುತ್ತಮ ಮಾರ್ಗವೆಂದರೆ ನಿರ್ಧಾರ ತೆಗೆದುಕೊಳ್ಳುವ ಆಯ್ಕೆಯನ್ನು ರಾಜ್ಯ ಸರಕಾರಗಳಿಗೆ ಬಿಡುವುದು. ಆಗ ರಾಜ್ಯಗಳು ಯಾವ ಕೃಷಿ ಕಾಯ್ದೆಯನ್ನು ತಾವು ಅನುಷ್ಠಾನಗೊಳಿಸಬಹುದು ಎಂದು ನಿರ್ಧರಿಸುತ್ತವೆ. ಇದರಿಂದಾಗಿ ಕೃಷಿ ಕಾಯ್ದೆಗಳಿಗೆ ರಾಜ್ಯ ಮಟ್ಟದ ನಾವೀನ್ಯದ ಸ್ಪರ್ಶ ಸಿಗುವುದಕ್ಕೆ ನಾಂದಿ ಹಾಡಿದಂತಾಗುತ್ತದೆ. ಖುದ್ದು ರೈತರೂ ಸಹ ವಿವಿಧ ಬೆಳೆಗಳಿಗೆ, ಪ್ರದೇಶಗಳಿಗೆ ಅನುಗುಣವಾಗಿ ಯಾವ ಕೃಷಿ ಕಾಯ್ದೆಗಳು ಮತ್ತು ಸಂಸ್ಥೆಗಳು ಅನುಕೂಲಕರ ಎನ್ನುವುದನ್ನು ನಿರ್ಧರಿಸಬಹುದಾಗುತ್ತದೆ.
ನಾವು 1991ರಿಂದ ತಪ್ಪು ಪಾಠಗಳನ್ನು ಕಲಿಯಬಾರದು. 1991ರ ಸುಧಾರಣ ಹೆಜ್ಜೆಗಳು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂಬ ತೀವ್ರ ಟೀಕೆ ಆಗ ಎದುರಾಗಿತ್ತು. ಕೆಲವು ಸುಧಾರಣೆಗಳತೂ ಬಂಡವಾಳಶಾಹಿಗಳಿಗೆ ದೇಶವನ್ನು ಮಾರಾಟ ಮಾಡುವ ಹುನ್ನಾರ ಎಂದೇ ಟೀಕೆ ಎದುರಿಸಿದ್ದವು. ಈ ಬಿಕ್ಕಟ್ಟಿನ ನೆರಳಿನಲ್ಲೇ ವಿವಾದಾತ್ಮಕ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಲಾಯಿತು. ಆದರೆ ಈಗ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ.ಪ್ರಮುಖ ಕ್ಷೇತ್ರಗಳನ್ನು ಸುಧಾರಿಸುವುದರ ಜತೆ ಜತೆಗೇ ಸರಕಾರವು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ ಅಗತ್ಯವೂ ಇದೆ. ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ “ಬೆಳವಣಿಗೆ’ಯನ್ನು ಕೇವಲ ಹೂಡಿಕೆಯಿಂದ ಮಾತ್ರ ಉಳಿಸಿಕೊಳ್ಳಲು ಸಾಧ್ಯ. ನಾವು ಸ್ಥಿರ ಬಂಡವಾಳ ರಚನೆ ದರ(ಜಿಎಫ್ಸಿಎಫ್)ದಲ್ಲಿ ಕುಸಿತ ಕಾಣುತ್ತಿರುವುದನ್ನು ನೋಡಿದ್ದೇವೆ. 2018-19ರಲ್ಲಿ ಜಿಡಿಪಿಯ 29 ಪ್ರತಿಶತದಷ್ಟಿದ್ದ ಜಿಎಫ್ ಸಿಎಫ್, 2020-21ರಲ್ಲಿ 24.2 ಪ್ರತಿಶತಕ್ಕೆ ಕುಸಿದಿದೆ. ಈ ಪ್ರವೃತ್ತಿಯನ್ನು ನಾವು ಹಿಮ್ಮೆಟ್ಟಿಸಬೇಕಿದೆ. ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕಿದೆ. ಕೆಲವು ತಿಂಗಳ ಹಿಂದೆ ಘೋಷಿಸಲಾದ ಕಾರ್ಪೋರೆಟ್ ತೆರಿಗೆಗಳಲ್ಲಿನ ಬದಲಾವಣೆಗಳು, ಬೆಳವಣಿಯು ಹೆಚ್ಚುತ್ತಿದ್ದಂತೆಯೇ ಸಹಾಯಕ್ಕೆ ಬರಲಿವೆ. ಮುಖ್ಯವಾಗಿ ನೀತಿಯ ಚೌಕಟ್ಟು ಹೊಸ ಹೂಡಿಕೆಗಳಿಗೆ ಪೂರಕವಾಗಿ ಇರಬೇಕು. ಆಗ ಮಾತ್ರ ಉದ್ಯಮಿಗಳು ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಾರೆ. ಅಲ್ಲದೇ ಸಾಮಾಜಿಕ ವಾತಾವರಣವೂ ಶಾಂತಿಯುತವಾಗಿ, ಸಹಕಾರಿಯಾಗಿ ಇರುವುದು ಅತ್ಯಗತ್ಯ. ಈ ಎಲ್ಲ ಅಂಶಗಳ ವಿಚಾರದಲ್ಲೂ ಸರಕಾರ ಕೆಲಸ ಮಾಡಲು ಆರಂಭಿಸಬೇಕು. ಆದರೂ ಖಾಸಗಿ ಹೂಡಿಕೆಗಳಿಗೆ ಚೇತರಿಸಿಕೊಳ್ಳಲು ಸಮಯ ಹಿಡಿಯಬಹುದು. ಹತ್ತಿರದ ಸಮಯದಲ್ಲೇ ಸರಕಾರ ಸಾರ್ವಜನಿಕ ಹೂಡಿಕೆಗೂ ಬಲ ತುಂಬಲು ಪ್ರಯತ್ನಿಸಬೇಕು. ತಗ್ಗಿದ ಬೇಡಿಕೆಯಿಂದಾಗಿ ಒಂದೆಡೆ ಆರ್ಥಿಕತೆಯು ಕಗ್ಗಂಟಿನಲ್ಲಿ ಸಿಲುಕಿರುವ ಹೊತ್ತಲ್ಲೇ ಸಾರ್ವಜನಿಕರು ಹಣ ಖರ್ಚು ಮಾಡುವ ಮಟ್ಟವನ್ನು ಹೆಚ್ಚಿಸುವುದು, ಬೆಳವಣಿಗೆಯನ್ನು ಏರಿಸುವುದು ಮತ್ತು ಖಾಸಗಿ ಹೂಡಿಕೆಗಳಿಗೆ ಬಲ ತುಂಬುವುದೇ ಈ ಸಮಸ್ಯೆಗೆ ಮದ್ದು ಎನ್ನಲಾಗುತ್ತದೆ. ಈ ಹಿಂದೆ ಅನೇಕ ಅರ್ಥಶಾಸ್ತ್ರಜ್ಞರು ಸರಕಾರದ ವಿವಿಧ ರೀತಿಯ ಖರ್ಚುಗಳನ್ನು ಗುರುತಿಸುತ್ತಿರಲಿಲ್ಲ. ಆದರೆ ಈಗ ಬಹುತೇಕ ಅರ್ಥಶಾಸ್ತ್ರಜ್ಞರು ಬಂಡವಾಳ ವೆಚ್ಚಗಳಲ್ಲಿ ಹೆಚ್ಚಳವಾಗಬೇಕು ಎನ್ನುವ ವಾದವನ್ನು ಅನುಮೋದಿಸುತ್ತಾರೆ(ಸ್ವತ್ತುಗಳನ್ನು ಸೃಷ್ಟಿಸುವ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ವೆಚ್ಚಗಳು). ಆರ್ಥಿಕತೆಗೆ ಬಲ ತುಂಬುವುದಕ್ಕಾಗಿ ಸರಕಾರವು ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದೆ. ಆದರೆ ಸರಕಾರದ ಖರ್ಚುಗಳ ಮೇಲಿನ ನಿಜವಾದ ದತ್ತಾಂಶವನ್ನು ನೋಡಿದರೆ ಬೇರೆಯದ್ದೇ ಚಿತ್ರಣ ತೆರೆದುಕೊಳ್ಳುತ್ತದೆ. ಎನ್‌ಎಸ್‌ಒ ಪ್ರಕಾರ ಸೆಪ್ಟಂಬರ್ ತ್ತೈಮಾಸಿಕದಲ್ಲಿ ಸರಕಾರದ ಬಳಕೆ ವೆಚ್ಚ 22 ರಷ್ಟು ಕಡಿಮೆಯಾಗಿದೆ. ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರೆ ಸೇವೆಗಳಲ್ಲಿ ಸರಕಾರದ ವೆಚ್ಚಗಳು ಜೂನ್ ತ್ತೈಮಾಸಿಕದಲ್ಲಿ 10.3 ಪ್ರತಿಶತ ಮತ್ತು ಸೆಪ್ಟೆಂಬರ್ ತ್ತೈಮಾಸಿಕದ ವೇಳೆಗೆ 12.2 ಪ್ರತಿಶತ ಕುಸಿತ ಕಂಡಿದೆ. ಹೀಗಾಗಿ ಸರಕಾರವು ತನ್ನ ಖರ್ಚನ್ನು ಸಮಂಜಸವಾಗಿ ಉನ್ನತ ಮಟ್ಟದಲ್ಲೇ ನಿರ್ವಹಿಸಬೇಕಾದ ಅಗತ್ಯವಿದೆ. 2021-22ರ ಬಜೆಟ್ನಲ್ಲಿ ಸರಕಾರಿ ಮತ್ತು ಖಾಸಗಿ ವಲಯದ ಹೂಡಿಕೆಯ ವಿಚಾರವನ್ನು ಸರಕಾರ ಸ್ಪಷ್ಟವಾಗಿ ಸೂಚಿಸಬೇಕು. ಹಣಕಾಸಿನ ಕೊರತೆಯನ್ನು ತಗ್ಗಿಸುವುದು ಆಪೇಕ್ಷಣೀಯವೇ ಆದರೂ 2021-22ರಲ್ಲಿ ಅದನ್ನು ಸೀಮಿತಗೊಳಿಸುವ ಅವಕಾಶ ಕಡಿಮೆಯೇ ಇದೆ. ಅದು ಜಿಡಿಪಿಯ 7 ಪ್ರತಿಶತದಷ್ಟೇ ಇರಬಹುದು. ಮುಂದಿನ ದಿನಗಳಲ್ಲಿ ಸರಕಾರ ಹಣಕಾಸಿನ ಬಲವರ್ಧನೆಗಾಗಿ ಹೊಸ ರೂಪರೇಖೆಯನ್ನೂ ರಚಿಸಬೇಕು. ಬೆಳವಣಿಗೆಯೇ ಈಗ ಸರಕಾರದ ಹಾಗೂ ವಿತ್ತ ಇಲಾಖೆಯ ಮೊದಲ ಆದ್ಯತೆಯಾಗಬೇಕು. ವ್ಯಾಪಾರ ಮಾಡಲು ಪೂರಕವಾದಂಥ ವಾತಾವರಣವನ್ನು ನಿರ್ಮಿಸುವುದು, ಆರ್ಥಿಕ ನೀತಿಗಳ ಬಗ್ಗೆ ಒಮ್ಮತ ಮೂಡುವಂತೆ ಮಾಡುವುದು ಮುಖ್ಯ. ಅಲ್ಲದೇ ಸಾಮಾಜಿಕ ವಿಭಜನಕಾರಿ ನೀತಿಗಳು, ಕ್ರಮಗಳಿಂದ ದೂರವಿರುವುದು ಒಳ್ಳೆಯದು. ಸರಕಾರವು ಏಕಾಗ್ರತೆಯಿಂದ ಬೆಳವಣಿಗೆ ಮತ್ತು ಆರ್ಥಿಕ ಪ್ರಗತಿಯತ್ತ ಗಮನಹರಿಸಿದರೆ, ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ಮೆಟ್ಟಿ ನಿಲ್ಲಲು ನಮಗೆ ಸಾಧ್ಯವಾಗಲಿದೆ.
(ಕೃಪೆ-ಮಿಂಟ್) – ಸಿ. ರಂಗರಾಜನ್, ಆರ್‌ಬಿಐ ಮಾಜಿ ಗವರ್ನರ್