ವಾಷಿಂಗ್ಟನ್/ನವದೆಹಲಿ: ಅಮೆರಿಕದ ಖ್ಯಾತ ಕವಯಿತ್ರಿ ಲೂಯಿಸ್ ಗ್ಲುಕ್ ಅವರಿಗೆ 2020ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿ ಗುರುವಾರ (ಅಕ್ಟೋಬರ್ 08, 2020) ಘೋಷಿಸಲಾಗಿದೆ. ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಜಗತ್ತಿನ ಶ್ರೇಷ್ಠ ಸಾಹಿತಿಗೆ ಪ್ರತಿ ವರ್ಷ ನೀಡಲಾಗುತ್ತದೆ.
1943ರಲ್ಲಿ ಲೂಯಿಸ್ ಗ್ಲುಕ್ ನ್ಯೂಯಾರ್ಕ್ ನಲ್ಲಿ ಜನಿಸಿದ್ದರು.ಮೆಸಾಚುಸೆಟ್ಸ್ ನ ಕೇಂಬ್ರಿಡ್ಜ್ ನಲ್ಲಿ ಲೂಯಿಸ್ ವಾಸವಾಗಿದ್ದಾರೆ. ಸ್ವೀಡಿಶ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲಮ್ ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ.
ಅಮೆರಿಕದ ಯೇಲ್ ಯೂನಿರ್ವಸಿಟಿಯಲ್ಲಿ ಆಂಗ್ಲ ಪ್ರೊಫೆಸರ್ ಆಗಿ ಲೂಯಿಸ್ ಕಾರ್ಯನಿರ್ವಹಿಸುತ್ತಿದ್ದಾರೆ. 1968ರಲ್ಲಿ ಫಸ್ಟ್ ಬಾರ್ನ್ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದರು.
ಅಮೆರಿಕದ ಸಮಕಾಲೀನ ಸಾಹಿತ್ಯದಲ್ಲಿನ ಪ್ರಮುಖ ಕವಿಗಳಲ್ಲಿ ಲೂಯಿಸ್ ಕೂಡಾ ಒಬ್ಬರಾಗಿದ್ದಾರೆ. ಲೂಯಿಸ್ 1993ರಲ್ಲಿ ಪುಲಿಟ್ಜೆರ್ ಪ್ರಶಸ್ತಿ, 2014ರಲ್ಲಿ ನ್ಯಾಷನಲ್ ಬುಕ್ ಅವಾರ್ಡ್ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.