Advertisement

2020 ಹೊಸ ಪ್ರಪಂಚ

12:46 AM Jan 31, 2020 | Sriram |

ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆ ಕಡಿಮೆಯಾಗಿದೆ ಎಂಬ ಮಾತು ಈಗಲೂ ಕೇಳಿಬರುತ್ತಿರಬಹುದು. ಆದರೆ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ಕ್ಷೇತ್ರದಲ್ಲಿ ಹೊಸ ಆವೃತ್ತಿಗಳಿಗೆ ಬರವೇನೂ ಬಂದಿಲ್ಲ. 2020ರಲ್ಲಿ ಗ್ರಾಹಕರ ಮಾರುಕಟ್ಟೆಗೆ ದಾಂಗುಡಿ ಇಡಲು ಹಲವಾರು ಹೊಸ ನಮೂನೆಯ ಕಾರುಗಳು ಕಾದು ಕುಳಿತಿವೆ. ಎಪ್ರಿಲ್‌ ಬಳಿಕ ಬಿಎಸ್‌-6 ಮಾದರಿಯ ಬೈಕ್‌ ಸೇರಿದಂತೆ ಕಾರುಗಳಿಗೆ ಆಗಮನ ಕಾಲ. ಈಗಾಗಲೇ ಹಲವಾರು ಕಾರು ನಿರ್ಮಾಣ ಕಂಪೆನಿಗಳು ತಮ್ಮದೇ ವಿನೂತನ ಪರಿಕಲ್ಪನೆಯೊಂದಿಗೆ ಕಾರುಗಳನ್ನು ರೂಪಿಸಿವೆ. ಬಿಡುಗಡೆಗೆ ಮುಹೂರ್ತವಷ್ಟೇ ಕೂಡಿ ಬರಬೇಕು, ವರ್ಷವೇನೋ ಕೂಡಿ ಬಂದಿದೆ.
ಅದು 2020 ಎನ್ನುತ್ತಾರೆ ಸುಶ್ಮಿತಾ ಜೈನ್‌.

Advertisement

ಬಿಎಸ್‌-6 ಹೋಂಡಾ ಸಿಟಿ
ಪ್ರಮುಖ ಕಾರುಗಳ ಉತ್ಪಾದನ ಸಂಸ್ಥೆಯಾದ ಹೋಂಡಾವು ಈಗಾಗಲೇ ಬಿಎಸ್‌-6 ಹೋಂಡಾ ಸಿಟಿ ಪೆಟ್ರೋಲ್‌ ಕಾರನ್ನು ಬಿಡುಗಡೆಗೊಳಿಸಿದೆ. ಇದು ಸೆಡಾನ್‌ ಮಾದರಿಯ ಕಾರುಗಳಲ್ಲಿ ಒಂದಾಗಿದ್ದು, ಇದೀಗ ಬಿಎಸ್‌-6 ನಿಬಂಧನೆಯಲ್ಲಿ ಡಿಸೇಲ್‌ ಹೊಸ ಆವೃತ್ತಿಯ ಕಾರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಡಿಸೇಲ್‌ ಆವೃತ್ತಿಗೆ ಬಿಎಸ್‌-6 ಎಂಜಿನ್‌ ಆದ ಕಾರಣ ಬೆಲೆ ಕೊಂಚ ಜಾಸ್ತಿ ಇರಲಿದೆ.

ಟಾಟಾ ಹ್ಯಾರಿಯರ್‌
ಟಾಟಾ ಹ್ಯಾರಿಯರ್‌ ಮಾರುಕಟ್ಟೆಗೆ ಬರುವ ಮುನ್ನವೇ ಸಾಕಷ್ಟು ಸದ್ದು ಮಾಡಿದೆ. 2018ರ ಆಟೊ ಎಕ್ಸ್‌ಪೋದಲ್ಲಿ ಗಮನ ಸೆಳೆದ ಟಾಟಾಎಚ್‌5ಎಕ್ಸ್‌ ಮಾದರಿ ಪರಿಕಲ್ಪನೆ ಆಧರಿಸಿರುವ ಈ ಕಾರು ಆಕರ್ಷಕ ವಿನ್ಯಾಸ ಹೊಂದಿರಲಿದೆ. ಅಲ್ಲದೇ ಹಲವು ನೂತನ ಸೌಲಭ್ಯ ಒಳಗೊಂಡಿದೆ. ಇದರ ದರ 13 ಲಕ್ಷ ರೂ. ರಿಂದ 18 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಎಲೆಕ್ಟ್ರಿಕ್‌ ಕಾರುಗಳು
ಇಂಧನ ಬಿಟ್ಟು ದೇಶ ಎಲೆಕ್ಟ್ರಿಕ್‌ ವಾಹನ ಉತ್ಪಾದನೆಯತ್ತ ದಾಪುಗಾಲಿಡುತ್ತಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್‌ ವಾಹನಗಳು ಬಿಡುಗಡೆಯಾಗಿದ್ದು, 2020ರಲ್ಲಿ ಮತ್ತೂ ಹೆಚ್ಚಿನ ಕಾರುಗಳು ಬರಲಿವೆ. ಬಹುತೇಕ ಎಲ್ಲ ಕಾರು ತಯಾರಿಕ ಕಂಪೆನಿಗಳು ಎಲೆಕ್ಟ್ರಿಕ್‌ ವಾಹನಗಳ ಬಿಡುಗಡೆಗೆ ಮುಂದಾಗಿವೆ. ಟಾಟಾ ಮೋಟಾರ್ಸ್‌ನ ನೆಕ್ಸಾನ್‌ ಬಿಡುಗಡೆ ಆಗಿದೆ. ಮೋರಿಸ್‌ ಗ್ಯಾರೇಜಸ್‌ (ಎಂಜಿ) ಸಂಸ್ಥೆಯು ವಿದ್ಯುತ್‌ ಚಾಲಿತ ಮತ್ತು ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿದ ಎಸ್‌ಯುವಿ ಝಡ್‌ಎಸ್‌ ಕಾರೂ ಬಿಡುಗಡೆಯಾಗಲಿದೆ. ಮಾರುತಿ ಸುಜುಕಿ ಸಹ ತನ್ನ ಮೊತ್ತ ಮೊದಲ ಎಲೆಕ್ಟ್ರಿಕ್‌ ಕಾರನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. ಮಾರುತಿ ಸುಜುಕಿ ಮತ್ತು ಟೊಯೋಟಾ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್‌ ಕಾರು ತಂತ್ರಜ್ಞಾನ ರೂಪಿಸಲಾಗುತ್ತಿದೆ. ಆದರೆ ಮಾರುತಿ ಸುಜುಕಿಯೇ ಈ ಕಾರಿನ ನಿರ್ಮಾಣ ಮತ್ತು ಮಾರಾಟ ನಡೆಸಲಿದೆ.

ಆಟೋ ಎಕ್ಸ್‌ಪೋಗೆ ಸಜ್ಜು
ಪ್ರತಿ ಎರಡು ವರ್ಷಕ್ಕೆ ನಡೆಯುವ ಆಟೋ ಎಕ್ಸ್‌ಪೋ ಹೊಸದಿಲ್ಲಿಯಲ್ಲಿ ನಡೆಯುತ್ತದೆ. ಫೆಬ್ರವರಿ 7ರಿಂದ ಆರಂಭವಾಗಲಿರುವ ಈ ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರು ಮಾದರಿಗಳ ಪ್ರದರ್ಶನವಾಗಲಿದೆ. ವಿಶ್ವದ ಪ್ರತಿಷ್ಠಿತ ಆಟೋ ಬ್ರ್ಯಾಂಡ್‌ಗಳ ಅತ್ಯಾಕರ್ಷಕ ನೂತನ ಕಾರುಗಳು, ಮುಂದೆ ಬಿಡುಗಡೆಯಾಗುವ ವಾಹನಗಳ ಮಾದರಿಗಳನ್ನು ಕಾರು ತಯಾರಕ ಕಂಪೆನಿಗಳು ಮಾರುಕಟ್ಟೆಗೆ ಪ್ರದರ್ಶಿಸಲು ಕಾಯುತ್ತಿದ್ದಾರೆ. 6 ದಿನಗಳು ನಡೆಯಲಿರುವ ಈ ಎಕ್ಸ್‌ಪೋದಲ್ಲಿ ಒಟ್ಟು 11 ಟಾಪ್‌ ಬ್ರ್ಯಾಂಡ್‌ ಕಾರುಗಳು ಅನಾವರಣಗೊಳ್ಳಲಿದ್ದು, ಬೆಳಗ್ಗೆ 11 ರಿಂದ ಸಂಜೆ 7ರ ವರೆಗೆ ಪ್ರದರ್ಶನ ನಡೆಯಲಿದೆ.

Advertisement

ಟಿಯುವಿ 300 ಪ್ಲಸ್‌
ಮಹೀಂದ್ರಾ ಸಂಸ್ಥೆಯು ಟಿಯುವಿ 300 ಪ್ಲಸ್‌ನ ಬಿಎಸ್‌-6 ಸುಧಾರಿತ ಆವೃತ್ತಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಕಾರು ಬಿಎಸ್‌-6 ಎಂಜಿನ್‌ ಹೊಂದಿದ್ದು, ಮುಂಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. ಪವರ್‌ಫುಲ್‌ ಹೆಡ್‌ಲೈಟ್‌ನೊಂದಿಗೆ ಫಾಗ್‌ಲೈಟ್‌ ಕೂಡ ಅಳವಡಿಸ ಲಾಗಿದೆ. ಕಾರಿನ ಮುಂಭಾಗದಲ್ಲಿಯೂ ಆಕರ್ಷಕ ಬಂಪರ್‌ಗಳನ್ನು ಅಳವಡಿಸಲಾಗಿದೆ.

ಅಲ್ಟ್ರೋಝ್
ಟಾಟಾ ಮೋಟಾರ್ಸ್‌ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್‌ ಅಲ್ಟ್ರೋಝ್ ಕಾರಿನ ಟೀಸರ್‌ ಈಗಾಗಲೇ ಬಿಡುಗಡೆ ಮಾಡಿದ್ದು ಎಲ್ಲರ ಗಮನಸೆಳೆಯುತ್ತಿದೆ. ಆಕರ್ಷಕ ಕಾರು ಜನವರಿ 22 ರಂದು ಬಿಡುಗಡೆಗೊಂಡಿತು. ಎರಡೂ ಪೆಟ್ರೋಲ್‌ ಹಾಗೂ ಡೀಸೆಲ್‌ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಮಾರುತಿಯವರ ಬಲೆನೊ, ಹುಂಡೈ ಅವರ ಐ20 ಹಾಗೂ ಹೊಂಡಾದವರ ಜಾಜ್‌ಗೆ ಪೈಪೋಟಿ ಕೊಡುವುದು ಇದರ ಉದ್ದೇಶ ಎನ್ನುವಂತಿದೆ.

ಮಾರುತಿ ಸುಜುಕಿ ಹಸ್ಟ್ಲರ್
2019ರಲ್ಲಿ ಮಾರುತಿ ಸಣ್ಣ ಕಾರು ಎಸ್‌ ಪ್ರೆಸ್ಸೋ ಕಾರು ಬಿಡುಗಡೆ ಮಾಡಿದ ಮಾರುತಿ ಸುಜುಕಿ ಮತ್ತೂಂದು ಸಣ್ಣ ಕಾರು ಬಿಡುಗಡೆ ಮಾಡುತ್ತಿದೆ. ಎಸ್‌ ಪ್ರೆಸ್ಸೋ ಕಾರಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾದ ಮಾದರಿಯಲ್ಲಿ ಮಾರುತಿ ಸುಜುಕಿ ಹಸ್ಟ್ಲರ್ ಕಾರು ಸುಜುಕಿ ಜಿಮ್ಮಿ ಕಾರಿನ ಮಾಡೆಲ್‌ ಹೊಂದಿರಲಿದೆ.ಟೊಕಿಯೊ ಮೋಟಾರು ಶೋ ಎಕ್ಸ್‌ಪೋದಲ್ಲಿ ಈಗಾಗಲೇ ಮಾರುತಿ ಸುಜುಕಿ ಹಸ್ಟ್ಲರ್ ಕಾರು ಬಿಡುಗಡೆಯಾಗಿದ್ದು, ಆಕರ್ಷಕ ಲುಕ್‌ ಹೊಂದಿರುವ ಹಸ್ಟ್ಲರ್ ಕಾರಿನ ಎಂಜಿನ್‌ನಲ್ಲಿ ಎರಡು ಆಯ್ಕೆಗಳಿವೆ. 660ಸಿಸಿ ಎಂಜಿನ್‌ ಹೊಂದಿರುವ ಹಸ್ಟ್ಲರ್ ಕಾರು 64ಸಿಸಿ ಪವರ್‌ ಹೊಂದಿದೆ. ಎರಡನೇ ವೇರಿಯೆಂಟ್‌ ಕಾರು ಟರ್ಬೋಚಾರ್ಜ್ಡ್ಎಂಜಿನ್‌ 64ಹೆಚ್‌ಪಿ ಪವರ್‌ ನೀಡಲಿದೆ. ಸೆಕೆಂಡ್‌ ಜನರೇಶನ್‌ ಹಸ್ಟ್ಲರ್ ಕಾಂಪಾಕ್ಟ್ ಎಸ್‌ಯುವಿ ಕಾರು ಡ್ಯುಯೆಲ್‌ ಬಣ್ಣದಲ್ಲಿ ಲಭ್ಯ. 2020ರ ಎಪ್ರಿಲ್‌ ತಿಂಗಳಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ. ಆರಂಭಿಕ ಹಂತದಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಹಸ್ಟ್ಲರ್ ಕಾರು ಬಿಡುಗಡೆಯಾಗಲಿದೆ. ಬಳಿಕ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಕಾರಿನ ಬೆಲೆ ಕುರಿತ ಮಾಹಿತಿ ಬಹಿರಂಗವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next