Advertisement
ದೂರದಿಂದಲೇ ಕಾಣಿಸಿತು ಹಿಮಾಲಯ ಪರ್ವತಕೊರೊನಾ ಲಾಕ್‌ಡೌನ್‌ನಿಂದ ತೊಂದರೆಯಾಗಿದ್ದು ಸತ್ಯ. ಹಾಗೆಯೇ, ಒಂದಷ್ಟು ವಿಚಿತ್ರ ಘಟನೆಗಳೂ ನಡೆದವು. ಎಪ್ರಿಲ್ ಅಂತ್ಯದ ವೇಳೆಯಲ್ಲಿ ಉತ್ತರ ಪ್ರದೇಶದ ಸಹರಾನ್ಪುರದಿಂದ ಬರೀಗಣ್ಣಿಗೆ ಹಿಮಾಲಯ ಕಾಣಿಸಿತು. ಇದು ಅದೆಷ್ಟೋ ದಶಕಗಳ ಅನಂತರ ಕಾಣಿಸಿದ ದೃಶ್ಯ. ಲಾಕ್‌ಡೌನ್‌ನಲ್ಲಿ ವಾಹನ ಸಂಚಾರ ಶೂನ್ಯಕ್ಕಿಳಿದು, ವಾಯು ಮಾಲಿನ್ಯ ಕಡಿಮೆಯಾದುದೇ ಇದಕ್ಕೆ ಕಾರಣ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹಳೇ ಮಹಾಭಾರತ ಭಾರಿಯಾಗಿಯೇ ಸದ್ದು ಮಾಡಿತು. ಡಿಡಿ ಭಾರತಿಯಲ್ಲಿ ಮರುಪ್ರಸಾರವಾದ ಈ ಧಾರಾವಾಹಿಗೆ ಈಗಲೂ ಬೇಡಿಕೆ ಕಡಿಮೆಯಾಗಲಿಲ್ಲ. 2.2 ಕೋಟಿ ಮಂದಿ ಈ ಧಾರಾವಾಹಿ ವೀಕ್ಷಿಸಿದ್ದು, ಡಿಡಿ ಚಾನೆಲ್‌ಗಳಿಗೆ ಭಾರೀ ಪ್ರಮಾಣದ ಪ್ರೇಕ್ಷಕರನ್ನೂ ಸೆಳೆದಿತ್ತು. ಹಾಗೆಯೇ, ರಾಮಾಯಣ ಮತ್ತು ಶ್ರೀಕೃಷ್ಣ ಧಾರಾವಾಹಿಗಳನ್ನೂ ಕೋಟ್ಯಂತರ ಮಂದಿ ವೀಕ್ಷಿಸಿದರು. ಕುಸ್ತಿ ಅಖಾಡದಿಂದ ಹೊರಗುಳಿದು ಬದುಕಿನ ಅಖಾಡದಲ್ಲಿ… ಬೆರೆತಾಗ…
ಎಚ್.ಎಸ್.ಆತ್ಮಶ್ರೀ, ಕ್ರೀಡಾರತ್ನ ವಿಜೇತ ರಾಷ್ಟ್ರೀಯ
ಕಳೆದ ಏಳೆಂಟು ತಿಂಗಳಲ್ಲಿ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ನಡೆದವು. ಕೊರೊನಾ ಪರಿಣಾಮ ಅನಿವಾರ್ಯವಾಗಿ ಕೆಲಸ ಬಿಡಬೇಕಾಯಿತು. ಕುಸ್ತಿ ಅಭ್ಯಾಸವನ್ನು ನಿಲ್ಲಿಸಬೇಕಾಯಿತು. ವಿಪ ರೀತ ಬಿಡುವು. ಆ ಸಮಯವನ್ನು ಹೇಗೆ ಕಳೆಯಬೇಕು? ಎಂಬ ಗೊಂದಲ. ಈ ವಿಪರೀತ ಬಿಡುವು ನನಗೆ ಸಮಯದ ಮಹತ್ವ ಅರ್ಥ ಮಾಡಿಸಿತು. ಈ ಅವಧಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸಿದಾಗ ಕೃಷಿಯ ಬಗ್ಗೆ ಗಮನ ಹೋಯಿತು. ಮನೆಯವರೊಂದಿಗೆ ಕೃಷಿಯಲ್ಲಿ ತೊಡಗಿಕೊಂಡೆ, ಬೆಳೆದು ನಿಂತ ಭತ್ತದ ಪೈರನ್ನು ಕೊಯ್ಲು ಮಾಡುವುದು ಗೊತ್ತಾಯಿತು. ಅಡುಗೆಯಲ್ಲಿ ಇನ್ನಷ್ಟು ತಿಳಿವಳಿಕೆ ಬಂತು. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ಸಂಬಂಧದ ಬೆಲೆ ಗೊತ್ತಾಯಿತು. ಆತ್ಮೀಯರೇ ದಿಢೀರ್ ಸಾವನ್ನಪ್ಪಿದ್ದನ್ನು ನೋಡಿ ಸಂಬಂಧಗಳು ನಿಜಕ್ಕೂ ಅಮೂಲ್ಯವೆನಿಸಿದವು. ಸ್ನೇಹಿತರು, ಕುಟುಂಬದವರಿಂದಲೇ ದೂರವಿರಬೇಕಾದ ಸ್ಥಿತಿ ಬಹಳ ಸಂಕಟವುಂಟು ಮಾಡಿತು. ಬಹಳ ವಿಶೇಷವೆನಿಸಿದ್ದು ಊಟದ ರುಚಿ ತಿಳಿದದ್ದು. ಈ ಹಿಂದೆ ಸದಾ ಕ್ರೀಡಾ ಬದುಕಿಗೆ ಹೊಂದಿಕೊಂಡು ಊಟದ ಸವಿಯೇ ಮರೆತುಹೋಗಿತ್ತು. ಹಾಗೆಯೇ ಹಣಕ್ಕೆ ಎಷ್ಟು ಮಹತ್ವವಿದೆ ಎಂಬ ಅರಿವೂ ಬಂತು. ಎಗ್ಗಿಲ್ಲದೇ ಖರ್ಚು ಮಾಡಬಾರದು ಎನ್ನುವುದು ನಾನು ಕಲಿತ ಮುಖ್ಯಪಾಠ. ನನ್ನ ಅರಿವಿಗೆ ನಿಲುಕಿದ ಸಂಗತಿಯೆಂದರೆ, ಸಾವಿನೆದುರು ಎಲ್ಲರೂ ಒಂದೇ .
ಕಲಿತ ಪಾಠ: ಸಾವಿನೆದುರು ಎಲ್ಲರೂ ಒಂದೇ
Related Articles
ಸಂಯುಕ್ತಾ ಹೊರನಾಡು, ನಟಿ
“ನನಗೆ ಮೊದಲಿನಿಂದಲೂ ಪ್ರಾಣಿಗಳು ಅಂದ್ರೆ ತುಂಬ ಇಷ್ಟ. ಅದರಲ್ಲೂ ನಾಯಿಗಳು ಅಂದ್ರೆ ಅದೇನೋ ವಿಶೇಷವಾದ ಪ್ರೀತಿ. ನಮ್ಮ ಮನೆಯಲ್ಲೂ ನಾಯಿಗಳ ಪಾಲನೆ, ಪೋಷಣೆ, ಆರೈಕೆ ಎಲ್ಲ ನಾನೇ ಮಾಡ್ತೀನಿ. ಆದರೆ ಇದ್ದಕ್ಕಿದ್ದಂತೆ ಕೊರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ, ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತುಂಬ ತೊಂದರೆಯಾಯಿತು. ಅದರಲ್ಲೂ ಬೆಂಗಳೂರಿನಲ್ಲಿ ಹೊಟೇಲ್, ಟಿಫನ್ ಸೆಂಟರ್, ಮಾರ್ಕೆಟ್ ಎಲ್ಲವೂ ಬಂದ್ ಆಗಿದ್ದರಿಂದ, ಬೀದಿ ನಾಯಿಗಳಂತೂ ಆಹಾರ ಸಿಗದೇ ಪರದಾಡುವಂತಾದವು. ಇದನ್ನು ನೋಡಿದ ನನಗೆ ತುಂಬ ಬೇಸರವಾಯಿತು. ಅವುಗಳಿಗಾಗಿ ಏನಾದರೂ ಮಾಡಬೇಕು ಅನ್ನೋ ಯೋಚನೆ ಬಂತು. ಅದಕ್ಕಾಗಿ ನಾನೇ ಒಂದಷ್ಟು ಫುಡ್ ರೆಡಿ ಮಾಡಿಕೊಂಡು, ಲಾಕ್‌ಡೌನ್ ಸಡಿಲವಾದ ಸಮಯದಲ್ಲಿ ಹೊರಗೆ ಹೋಗಿ ಬೀದಿ ನಾಯಿಗಳಿಗೆ ಕೊಟ್ಟು ಬರುತ್ತಿದ್ದೆ. ಲಾಕ್‌ಡೌನ್ ಸಮಯದಲ್ಲಿ ಹೀಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ನಾಯಿಗಳಿಗೆ ಆಹಾರ ಕೊಟ್ಟಿದ್ದೇನೆ. ಈ ಕೆಲಸ ನನಗೆ ತುಂಬ ಖುಷಿಕೊಡುತ್ತಿತ್ತು. ಮನಸ್ಸಿಗೆ ನೆಮ್ಮದಿ ಸಿಗುತ್ತಿತ್ತು. ಈಗಲೂ ಅಷ್ಟೇ ಬೀದಿ ನಾಯಿಗಳಿಗೆ ಒಂದಷ್ಟು ಆಹಾರ ಕೊಡೋದು ನನಗೊಂದು ಅಭ್ಯಾಸವಾಗಿ ಹೋಗಿದೆ. ನನ್ನ ಆತ್ಮ ತೃಪ್ತಿಗಾಗಿ ಈ ಕೆಲಸವನ್ನು ಮುಂದುವರಿ ಸಿಕೊಂಡು ಹೋಗುತ್ತಿದ್ದೇನೆ’.
ಕಲಿತ ಪಾಠ: ಆತ್ಮತೃಪ್ತಿಗಾಗಿ ಮಾಡುವ ಕೆಲಸ ಬಹಳ ದೊಡ್ಡದು
Advertisement
ಸಾಯಲು ಹೊರಟವನು ಕೋವಿಡ್ ಯೋಧನಾದೆ!ಡಾ| ವಿ.ಎ. ಲಕ್ಷ್ಮಣ, ಕೊರೊನಾ ವಾರಿಯರ್
ಅಕಸ್ಮಾತ್ ಈ ಕೊರೊನಾದಿಂದ ನಾನೇ ಸತ್ತುಹೋದರೆ, ನನ್ನ ಮನೆಯವರಿಗೆ ಈ ಅವಘಡವನ್ನು ತಡೆದುಕೊಳ್ಳುವ ಶಕ್ತಿ ಅವರಿಗೆ ಇದೆಯೇ? ಲಾಕ್‌ಡೌನ್ ಶುರುವಾದಾಗ ಹೀಗೆಲ್ಲ ಯೋಚಿಸಿ ಭಯದಿಂದ ಬೆವತು ಮತ್ತೆ ಮಲಗುತ್ತಿದ್ದೆ. ಅನಂತರದ ಎರಡು ತಿಂಗಳು ಮನೆಯೊಳಗೆ ಬದುಕಿ¨ªಾಯಿತು. ಆಮೇಲೆ, ನನ್ನ ಮೇಲೆ ನನಗೇ ಜಿಗುಪ್ಸೆ ಉಂಟಾಯಿತು. ಜೀವನ ಬೇಸರವಾಗಿ ಆತ್ಮಹತ್ಯೆ ಯೋಚನೆಯೂ ಬಂದು ಆ ದಿನ ಸಂಜೆ ಲಾಂಗ್ ವಾಕಿಂಗ್ ಹೋದೆ. ಬಹುದೂರ ನಡೆದಮೇಲೆ ಒಂದು ನಿರ್ಜನ ರೈಲ್ವೇ ಹಳಿ ತಲುಪಿದ್ದೆ. ಅಲ್ಲೇ ಪಕ್ಕದ ಜಲ್ಲಿಯ ಮೇಲೆ ಮೈ ಚಾಚಿದೆ. ಸಂಜೆಯ ಗಾಳಿಗೆ ಅಲ್ಲೇ ಕೊಂಚ ಕಣ್ಣು ಮುಚ್ಚಿದೆ. ನಿದ್ದೆ ಯಾವಾಗ ಬಂತೋ ಗೊತ್ತಿಲ್ಲ. ಎಚ್ಚರವಾದಾಗ ಸುತ್ತ ಕತ್ತಲು. ಅರೇ !! ನಾನು ಮಲಗಿದ ಹೊತ್ತಿನಲ್ಲಿ ಸದ್ಯ ಯಾವ ರೈಲೂ ಬಂದಿಲ್ಲ. ಅಕಸ್ಮಾತ್ ಬಂದಿದ್ದರೆ ನಾನು ಸತ್ತು ಹೋಗುತ್ತಿದ್ದೆನಲ್ಲವೇ? ನಾನು ಸತ್ತಿದ್ದರೆ,ಮಾರನೇ ದಿನ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯ ಸಾವು ಎಂಬ ನಾಲ್ಕು ಸಾಲಿನ ವರದಿಯಲ್ಲಿ ನನ್ನ ಜೀವನ ಮುಗಿದು ಹೋಗಬಹುದಿತ್ತಲ್ಲವೇ? ಅನಿಸಿತು. ಸಾಯುವುದು ನಿಜವೇ ಆದರೆ ಇಂತಹ ನಿಕೃಷ್ಟ ಸಾವು ಬೇಡ. ನನ್ನ ಸಾವು ನಾಲ್ಕು ಸಾಲಿನ ಸುದ್ದಿಯ ಅಪರಿಚಿತ ಶವವಾಗುವುದು ಬೇಡ. ಗಡಿ ಕಾಯುವ ಯೋಧನ ಸಾವು ನೋಡು!! ತಿರಂಗಾ ಅವನ ಎದೆಯ ಮೇಲಿರುತ್ತದೆ!! ಎಂತಹ ಸಾರ್ಥಕ ಸಾವದು! ನಾನು ಸತ್ತರೆ ಅಲ್ಲೇ ಸಾಯುತ್ತೇನೆಂದು ಕೋವಿಡ್ ಸೇವೆಗೆ ಅಣಿಯಾಗಿ ಹೊರಟೆ. ಯೋಧನ ಕೈಯಲ್ಲಿ ಕೋವಿ ಇರುತ್ತದೆ. ನನ್ನ ಕೈಯಲ್ಲಿ ಸ್ಟೆತೋಸ್ಕೋಪು. ಇನ್ನೂ ಕೋವಿಡ್ ಯೋಧನಾಗಿ ಅನುದಿನ ಸೆಣೆಸುತ್ತಲೇ ಇದ್ದೇನೆ. ಕಣ್ಣು ಮುಂದೆ ಎದೆಯ ತುಂಬ ನಿಮ್ಮದೇ ಚಿತ್ರವಿದೆ. ನಿಮ್ಮ ಪ್ರೀತಿ ಹಾರೈಕೆ ಇರುವಾಗ ಯಕಶ್ಚಿತ್ ಕಣ್ಣಿಗೆ ಕಾಣದ ಹುಳ ಯಾವ ಲೆಕ್ಕ?
ಕಲಿತ ಪಾಠ: ದೊಡ್ಡ ಉದ್ದೇಶವಿದ್ದರೆ, ದಿಟ್ಟವಾಗಿ ಮುನ್ನಡೆಯಬಲ್ಲ ಕೃಷಿ ಭೂಮಿಯಲ್ಲಿ ಕಲಿತ ಪಾಠ ಮರೆಯಲಾಗದ್ದು…
ಉಪೇಂದ್ರ, ನಟ ಮತ್ತು ನಿರ್ದೇಶಕ
“ಕೊರೊನಾ ಲಾಕ್‌ಡೌನ್‌ನಿಂದ ಸಿನೆಮಾಗಳ ಕೆಲಸಗಳು ಏನೂ ಇಲ್ಲದಿದ್ದರಿಂದ, ನಾನೇ ಖುದ್ದಾಗಿ ನಮ್ಮ ತೋಟದಲ್ಲಿ ಕೃಷಿ ಕೆಲಸವನ್ನು ಶುರು ಮಾಡಿದ್ದೆ. ಇದು ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿಕೊಟ್ಟಿತು. ನಮ್ಮ ರೈತರು ಹೇಗೆ ಬೆಳೆಗಳನ್ನು ಬೆಳೆಯುತ್ತಾರೆ, ಯಾವ ಪದ್ಧತಿಯಲ್ಲಿ ಕೃಷಿ ಮಾಡಬೇಕು, ರೈತರ ಮುಂದಿರುವ ಸವಾಲುಗಳೇನು, ಬೆಳೆಗಳನ್ನ ಹೇಗೆ ಮಾರುಕಟ್ಟೆಗೆ ಒದಗಿಸಬೇಕು, ಹೀಗೆ ಕೃಷಿಗೆ ಸಂಬಂಧಿಸಿದ ಹತ್ತಾರು ವಿಷಯಗಳನ್ನ ಈ ಸಮಯದಲ್ಲಿ ಕಲಿತುಕೊಂಡೆ. ನಾನೇ ಭೂಮಿಗೆ ಇಳಿದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರಿಂದ, ಕೃಷಿಯ ಬಗ್ಗೆ ಇದ್ದ ಕಲ್ಪನೆ ಮತ್ತು ವಾಸ್ತವಾಂಶ ಎರಡೂ ಅರ್ಥವಾಯಿತು. ನಾನೇ ಕೃಷಿಯಲ್ಲಿ ಒಂದಷ್ಟು ಪ್ರಯೋಗಗಳನ್ನು ಮಾಡಿ ಫಲಿತಾಂಶ ಕಂಡುಕೊಂಡಿದ್ದೇನೆ. ಕೃಷಿಯಾಗಲಿ, ಪ್ರಕೃತಿಯಾಗಲಿ ಮೊದಲು ಅದರ ಜತೆ ನಾವು ಬೆರೆಯಬೇಕು. ಆಮೇಲೆ ಅದು ತಾನಾಗಿಯೇ ಒಂದೊಂದಾಗಿ ಎಲ್ಲವನ್ನೂ ಅರ್ಥ ಮಾಡಿಸುತ್ತದೆ. ಕೃಷಿಯಲ್ಲಿ ಕಲಿಯುವ ಪಾಠ, ಪ್ರಕೃತಿಯಲ್ಲಿ ಸಿಗುವ ಪಾಠ ಬೇರೆಲ್ಲೂ ಸಿಗೋದಿಲ್ಲ ಅನ್ನೋದು ನನಗೆ ಅರ್ಥವಾಯಿತು. ಈಗ ಸಿನೆಮಾದ ಜತೆಗೆ ಕೃಷಿ ಕೆಲಸವನ್ನೂ ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಮುಂದೆಯೂ ಇದು ಹೀಗೆ ನಡೆದುಕೊಂಡು ಹೋಗುತ್ತದೆ’.
ಕಲಿತಪಾಠ: ಪ್ರಕೃತಿ ಜತೆೆ ಬೆರೆತರೆ ಅದು ತಾನಾಗಿಯೇ ಎಲ್ಲ ಅರ್ಥಮಾಡಿಸುತ್ತದೆ. ರೈತನಾಗಿ ಕೃಷಿ ಕೆಲಸ ಮಾಡಿದ ಖುಷಿನೇ ಬೇರೆ
ದರ್ಶನ್, ನಟ
“ಇಷ್ಟು ವರ್ಷ ಸಿನೆಮಾ ಶೂಟಿಂಗ್ ಇಲ್ಲದಿರುವಾಗ, ಫಾರ್ಮ್ಹೌಸ್‌ನಲ್ಲಿ ಕೃಷಿ ಕೆಲಸ ಮಾಡುತ್ತ ಸಮಯ ಕಳೆಯುತ್ತಿದ್ದೆ. ಆದರೆ ಈ ಬಾರಿ ಕೊರೊನಾ ಲಾಕ್‌ಡೌನ್‌ನಿಂದ, ಅನಿವಾರ್ಯವಾಗಿ ಅಲ್ಲೇ ಇರಬೇಕಾಯಿತು. ನನಗೆ ಮೊದಲಿನಿಂದಲೂ ತೋಟ, ಪ್ರಾಣಿಗಳು ಅಂದ್ರೆ ಇಷ್ಟ. ಸಮಯ ಸಿಕ್ಕಾಗ ಅವುಗಳ ಜತೆ ಇರೋದಕ್ಕೆ ಇಷ್ಟಪಡ್ತೀನಿ. ಈ ಬಾರಿ ನಮ್ಮ ತೋಟ, ಕೃಷಿ, ಜಾನುವಾರುಗಳು ಎಲ್ಲವೂ ಇನ್ನಷ್ಟು ಹತ್ತಿರವಾದವು. ನನಗೆ ಖುಷಿಕೊಡುವಂಥ ಒಂದಷ್ಟು ಕೆಲಸಗಳನ್ನ ತೋಟದಲ್ಲಿ ಮಾಡಿದ್ದೇನೆ. ನನ್ನ ಅನೇಕ ಸ್ನೇಹಿತರಿಗೆ ನಮ್ಮ ತೋಟದ ಪರಿಚಯ ಮಾಡಿಸಿದ್ದೇನೆ. ರೈತನಾಗಿ ತೋಟದಲ್ಲಿದ್ದುಕೊಂಡು ಕೃಷಿ ಕೆಲಸ ಮಾಡುವ ಖುಷಿನೇ ಬೇರೆ. ಅದನ್ನ ಮಾತಿನಲ್ಲಿ ಹೇಳ್ಳೋದಕ್ಕೆ ಆಗಲ್ಲ’.
ಕಲಿತ ಪಾಠ: ಕೃಷಿಯ ಖುಷಿ ಮಾತಲ್ಲಲ್ಲ, ಕೃತಿಯಲ್ಲೇ ಸಿಗುತ್ತದೆ ಹಣವನ್ನು ಮಿತವಾಗಿ ಖರ್ಚು ಮಾಡುವುದು ಕಲಿತೆ
ಮಮತಾ ಪೂಜಾರಿ, ಭಾರತ ಮಹಿಳಾ ಕಬಡ್ಡಿ ತಂಡದ ಮಾಜಿ ನಾಯಕಿ
ದೇಶದಲ್ಲಿ ಕೊರೊನಾ ತೀವ್ರವಾಗಿ ಪ್ರಕಟವಾಗಿದ್ದು ಮಾರ್ಚ್ ತಿಂಗಳಲ್ಲಿ. ಮಾ.8ರಲ್ಲಿ ನಾನು ರೈಲ್ವೆ ಇಲಾಖೆಯ ಕಬಡ್ಡಿ ಕೂಟವೊಂದಕ್ಕೆ ಸಿದ್ಧವಾಗುತ್ತಿದ್ದೆ. ಮತ್ತೂಮ್ಮೆ ಪೂರ್ಣಪ್ರಮಾಣದಲ್ಲಿ ಆಡಲು ತಯಾರಾಗಿದ್ದಾಗ ಎಲ್ಲ ಕಡೆ ಕೊರೊನಾ, ಕೊರೊನಾ ಎಂಬ ಸುದ್ದಿ ಹಬ್ಬಿ ಕೂಟ ರದ್ದಾಯಿತು. ನನ್ನ ತಯಾರಿ ವ್ಯರ್ಥವಾಯಿತು. ಆನಂತರ ದೇಶಾದ್ಯಂತ ದೀರ್ಘ ಕಾಲ ದಿಗ್ಬಂಧನ ಹೇರಿದ್ದರಿಂದ ಪರಿಸ್ಥಿತಿ ಎಲ್ಲ ಕಡೆ ಬಿಗಡಾಯಿಸಿತು. ಕಬಡ್ಡಿ ಆಡುವುದಂತೂ ಇಲ್ಲದ ಮಾತು. ಕಡೆಯ ಪಕ್ಷ ಅಭ್ಯಾಸಕ್ಕಾಗಿ ಹೊರಕ್ಕೆ ತೆರಳಲೂ ಸಾಧ್ಯವಿರಲಿಲ್ಲ. ಇಂತಹ ಹೊತ್ತಿನಲ್ಲಿ ದೈಹಿಕಕ್ಷಮತೆ ಕಾಪಾಡಿಕೊಳ್ಳುವುದೇ ಕಷ್ಟವಾಗಿತ್ತು. ಕಡೆಗೆ ಯೂಟ್ಯೂಬ್ ನೋಡಿ ಮನೆಯಲ್ಲೇ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡೆ. ಇರುವ ಜಾಗದಲ್ಲೇ ದೈಹಿಕಕ್ಷಮತೆ ಕಾಪಾಡಿಕೊಳ್ಳುವುದು ಕಷ್ಟದ ಕೆಲಸ. ಆದರೆ ಅದು ಅನಿವಾರ್ಯವಾಗಿತ್ತು. ಇನ್ನೊಂದು ಸಮಸ್ಯೆಯೆಂದರೆ ಆಗ ನನ್ನ ಮಗುವಿಗೆ ಇನ್ನೂ ಎರಡು ವರ್ಷ, ನನ್ನೊಂದಿಗಿದ್ದ ತಾಯಿಗೆ 60 ವರ್ಷ. ಮಕ್ಕಳಿಗೆ ಮತ್ತು ವಯಸ್ಕರಿಗೆ ಕೊರೊನಾ ಅಪಾಯದ ಪ್ರಮಾಣ ಜಾಸ್ತಿ ಎಂದು ಟಿವಿಯಲ್ಲಿ ನಿರಂತರವಾಗಿ ಬರುತ್ತಿದ್ದರಿಂದ ಬಹಳ ಗಾಬರಿಯಾಗಿತ್ತು. ಈ ಇಬ್ಬರನ್ನೂ ನಾನೊಬ್ಬಳೇ ನಿಭಾಯಿಸಬೇಕಾಗಿತ್ತು. ಹೊರಕ್ಕೆ ಹೋಗಿ ಒಂದು ವಸ್ತುವನ್ನು ತರಲೂ ಹೆದರಿಕೆಯಾಗುತ್ತಿತ್ತು. ಪ್ರತಿಯೊಂದಕ್ಕೂ ಆತಂಕ. ಆಗ ರೈಲ್ವೇ ಇಲಾಖೆಯ ಹೈದರಾಬಾದ್ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಪರಿಸ್ಥಿತಿ ಗಂಭೀರವಾದಾಗ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡೆ. ಎಂತಹ ಪರಿಸ್ಥಿತಿಯಲ್ಲೂ ದೈಹಿಕಕ್ಷಮತೆ ಉಳಿಸಿಕೊಳ್ಳುವುದು ಸಾಧ್ಯ ಎಂದು ನನಗೆ ಗೊತ್ತಾಯಿತು. ಜತೆಗೆ ಹಣವನ್ನು ಮಿತವಾಗಿ ಖರ್ಚು ಮಾಡುವುದು ಕಲಿತೆ. ನಾನು ಕಚೇರಿಗೆ ಹೋಗುತ್ತಿದ್ದುದರಿಂದ ಸಂಬಳಕ್ಕೇನು ತೊಂದರೆಯಿರಲಿಲ್ಲ. ಜೀವನ ನಿರ್ವಹಣೆಯೂ ಕಷ್ಟವಾಗಲಿಲ್ಲ. ಆದರೆ ಸುತ್ತಮುತ್ತಲು ಹಣವಿಲ್ಲದೇ, ಕೆಲಸವಿಲ್ಲದೇ, ಊಟವಿಲ್ಲದೇ ಪರದಾಡುತ್ತಿದ್ದವರಿಗೆ ನಾನು ಸಾಧ್ಯವಾದಷ್ಟು ಸಹಾಯ ಮಾಡಿದೆ. ಅದರಿಂದ ನನಗೆ ಬಹಳ ಸಂತೋಷ ಸಿಕ್ಕಿದೆ. ಮಿಕ್ಕ ಟೈಮನ್ನೆಲ್ಲ ಸಮಾಜಕ್ಕೆ ಚೆಲ್ಲಿ
ಟಿ.ಎಂ. ವಿಜಯ ಭಾಸ್ಕರ್, ಮುಖ್ಯ ಕಾರ್ಯದರ್ಶಿ
ದಿಲ್ಲಿಯಲ್ಲಿ ಮೀಟಿಂಗ್, ಮತ್ತೆಲ್ಲೋ ಕಾನ್ಫರೆನ್ಸ್… ಅಬ್ಬಬ್ಟಾ ಆಡಳಿತಾತ್ಮಕ ಸೇವೆಗಿಳಿದ ಮೇಲೆ ಓಡಾಡಿದ್ದಕ್ಕೆ ಲೆಕ್ಕವೇ ಇಲ್ಲ. ಸಭೆಗಳಿಗೆ ಹೀಗೆಲ್ಲ ವೇಗದಿಂದ ಓಡುತ್ತಿದ್ದ ಬದುಕು ಕೊರೊನಾ ಕಾಲದಲ್ಲಿ ಗಕ್ಕನೆ ಬ್ರೇಕ್ ಹಾಕಿ ನಿಂತಿದ್ದೇ ಒಂದು ವಿಸ್ಮಯದಂತೆ ತೋರುತ್ತಿದೆ. ತಿಂಗಳಿಗೆ ದೂರದ ಪ್ರದೇಶಗಳಿಗೆ ಕೈಗೊಳ್ಳುತ್ತಿದ್ದ ಆಡಳಿತಾತ್ಮಕ ಪ್ರವಾಸಗಳು ಕಡಿಮೆಯಾಗಿ, ವರ್ಚುವಲ್ ಮೂಲಕ “ಹೊಸ ಮೀಟಿಂಗ್ ಜಗತ್ತು’ ತೆರೆದುಕೊಂಡಿದೆ. ವಾಟ್ಸ್‌ಆ್ಯಪ್‌ಗ್ಳಲ್ಲೇ ಸಲಹೆ, ಸೂಚನೆ, ಆದೇಶಗಳು ವೇಗಗೊಂಡಿವೆ. ಜನ ತಮ್ಮ ಕೆಲಸ- ಕಾರ್ಯಗಳಿಗೆ ಕಚೇರಿಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವ ಕಾರಣ ಹೆಚ್ಚು ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ನೀಡುವ “ಸ್ಮಾರ್ಟ್ ಹಾದಿ’ ನಮ್ಮ ಮುಂದೆ ತೆರೆದುಕೊಂಡಿದೆ. ಇದರಿಂದ ಜನರಿಗೂ ಸಮಯ, ವೆಚ್ಚ ಉಳಿತಾಯ; ಅಧಿಕಾರಿಗಳಿಗೂ ಕಾಲ ಉಳಿತಾಯ. ಆ ಸಮಯ ಜನಸೇವೆಗೆ ವಿನಿಯೋಗಿಸುತ್ತಿದ್ದೇವೆ.
ಕಲಿತ ಪಾಠ: ವರ್ಚುವಲ್ ಮೀಟಿಂಗ್‌ನಿಂದ ಸಮಯ, ಹಣ ಉಳಿತಾಯ ಕತ್ತಲನ್ನು ಓಡಿಸಿ ಬಂತು ಬೆಳಕಿನ ಆಶಾಕಿರಣ
ಮಾನಸಿ ಸುಧೀರ್, ಗಾಯಕಿ, ನಟಿ
ಲಾಕ್‌ಡೌನ್ ಅವಧಿಯಲ್ಲಿ ಬದುಕಿನ ಬಗ್ಗೆ ಭಯ ಆರಂಭವಾಯಿತು. ಕತ್ತಲು ಆವರಿಸುತ್ತಿದ್ದಂತೆ ಬೆಳಕಿನ ಆಶಾಭಾವನೆಯೂ ಮೂಡಿತು. ಮೇ 18ರಂದು “ಹೇಗಿದ್ದೆಯೇ ಟ್ವಿಂಕಲ್’ ಹಾಡನ್ನು ಅಭಿನಯಿಸಿ ಹಾಡಿದೆ. ಅನಂತರ 4-5 ಹಾಡುಗಳನ್ನು ಹಾಡಿದೆ. ಜೂ.8ರಂದು “ಏನೀ ಅದ್ಭುತವೇ’ ಸಾಂಗ್ ವೈರಲ್ ಆಯಿತು. ಅದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆಯಿತು. ಇದು ಜೀವನದಲ್ಲಿ ನಾನು ಕಂಡ ಅತೀ ದೊಡ್ಡ ತಿರುವು ಎನ್ನಬಹುದು. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಸಿದ್ಧಿ ಪಡೆದೆ. ಸಾಮಾಜಿಕ ಮಾಧ್ಯಮದ ಒಳಿತು, ಕೆಡುಕುಗಳನ್ನು ಕಂಡುಕೊಂಡ ವರ್ಷ. ಹಲವಾರು ಮಂದಿಯ ಸಾವು-ನೋವಿನ ಕಥೆಯನ್ನು ಕೇಳುವಂತಾಯಿತು. ಕಲೆಯನ್ನು ನಂಬಿಕೊಂಡವರ ನೋವಿನ ಕಥೆ ಕೇಳಿ ನೋವು ಮಡುಗಟ್ಟಿದೆ. ಕತ್ತಲಿನಿಂದ ಬೆಳಕಿನೆಡೆಗೆ ಎಂಬಂತೆ ಮೊದಲಿನಂತೆ ಆಗಬಹುದು ಎಂಬ ನಿರೀಕ್ಷೆ ಇದೆ. ಆಗುವ ಲಕ್ಷಣವೂ ಕಾಣುತ್ತಿದೆ. ಹೊಸ ವರ್ಷಕ್ಕೆ ಹೊಸ ಬೆಳಕು ಕಾಣುವ ಲಕ್ಷಣವಿದೆ.
ಕಲಿತ ಪಾಠ: ಸಾಮಾಜಿಕ ಮಾಧ್ಯಮದ ಒಳಿತು, ಕೆಡುಕುಗಳನ್ನು ಕಂಡುಕೊಂಡೆ. ಜೀವನದ ಮೌಲ್ಯ ಅರ್ಥವಾಯ್ತು
ಲೀಲಾವತಿ, ನರ್ಸ್ ಆಫೀಸರ್, ಶಿವಮೊಗ್ಗ
ಮೊದ ಮೊದಲು ಕೊರೊನಾ ಸೋಂಕಿನ ಬಗ್ಗೆ ಭಯವಿತ್ತು. ಮನೆಯಲ್ಲಿ ಮಕ್ಕಳು, ಹಿರಿಯರು ಇದ್ದಾರೆ. ನನ್ನಿಂದ ಕೊರೊನಾ ಸೋಂಕು ಅವರಿಗೆಲ್ಲ ಹರಡಿದರೆ ಹೇಗೆ ಎಂಬ ಆತಂಕವಿತ್ತು. ಹೀಗಾಗಿ ಭಯದಿಂದಲೇ ಕರ್ತವ್ಯಕ್ಕೆ ಹೋಗುತ್ತಿದ್ದೆ. ಆದರೆ ಬರ ಬರುತ್ತಾ ಭಯವನ್ನು ಮೆಟ್ಟಿ ನಿಲ್ಲುವುದನ್ನು ಕಲಿತೆ. ಕೊರೊನಾ ಸನ್ನಿವೇಶ ಭಯ ವನ್ನು ಬಿಟ್ಟು ಕೆಲಸ ಮಾಡುವುದನ್ನು ಕಲಿಸಿಕೊಟ್ಟಿತು. ನನಗೆ ಪುಟಾಣಿ ಮಗಳಿದ್ದರೂ ಅವಳ ಬಳಿ ಹೋಗಲು ಅಂಜುತ್ತಿದ್ದೆ. ದೂರದಿಂದಲೇ ಅಕ್ಕರೆಯಿಂದ ಮಾತನಾಡಿಸುತ್ತಿದ್ದೆ. ಈ ವೇಳೆ ಮಕ್ಕಳನ್ನು ಬಿಟ್ಟು ಬದುಕುವುದು ಅಮ್ಮಂದಿರಿಗೆ ಎಷ್ಟು ಸಂಕಟವಾಗುತ್ತದೆ ಎಂಬುವುದು ಕೂಡ ಮನವರಿಕೆ ಆಯಿತು. ಜತೆಗೆ ತಂದೆ-ತಾಯಿಯನ್ನು ಬಿಟ್ಟಿರುವುದು ಕೂಡ ಕಷ್ಟವಾಯಿತು. ಹಿರಿಯ ಜೀವನದ ಮೌಲ್ಯಗಳು ಕೂಡ ನನಗೆ ಅರ್ಥವಾಯಿತು. ಭಯ ಮೆಟ್ಟಿ ನಿಲ್ಲುವುದು, ತಾಯ್ತನದಿಂದ ದೂರ ಇರುವುದರ ಸಂಕಟ ಸಹಿತ ಹಲವು ರೀತಿಯ ಅನುಭವ ನನಗಾಯಿತು. ಮಾನವೀಯ ಸಂಬಂಧದ ಬೆಲೆ ಜತೆಗೆ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಪಾಠ ಕಲಿಸಿಕೊಟ್ಟಿತು.
ಕಲಿತ ಪಾಠ: ಸಂಬಂಧದ ಬೆಲೆ ಜತೆಗೆ ಸ್ವತ್ಛತೆಗೆ ಆದ್ಯತೆ ನೀಡಬೇಕೆನ್ನುವುದು ರಾಯಲ್ ಸ್ವೀಟ್ ಆರಂಭಕ್ಕೆ ಕಾರಣವಾದ ಕೋವಿಡ್
ಅಜ್ಜಿಮನೆ ವಿಜಯಕ್ಕ, ಸ್ವ ಉದ್ಯಮಿ, ಪ್ರವಾಸಿ
ನಿವೃತ್ತಿ ಅನಂತರದ ಬದುಕನ್ನು ನಾನು ಆರಿಸಿಕೊಂಡ ಒಂಟಿ ಬದುಕು ಸ್ವರ್ಗ ಸಮಾನವಾಗಿತ್ತು. ಎಪ್ರಿಲ್‌ನಲ್ಲಿ ಯೂರೋಪ್ ಪ್ರವಾಸಕ್ಕೆ ಹೋಗುವ ಉದ್ದೇಶದಿಂದ ನವೆಂಬರ್‌ನಲ್ಲೇ ಪೂರ್ತಿ ಹಣ ಕಟ್ಟಿಯಾಗಿತ್ತು. ಲಾಕ್ ಡೌನ್ ಶುರುವಾದಾಗ ಅದೊಂದು ರೀತಿಯ ಕಳವಳ, ನಾಲ್ಕು ಗೋಡೆಯ ನಡುವೆ ನಾನೊಬ್ಬಳೇ. ಹೊರಗೆಲ್ಲೂ ಹೋಗಲಾಗದ, ಯಾರೊಂದಿಗೂ ನೇರ ಮಾತನಾಡಲಾಗದ ಪರಿಸ್ಥಿತಿಯಿಂದ ಖನ್ನತೆ ಆವರಿಸಿಕೊಂಡಿದ್ದೂ ಹೌದು. ಊಟ, ತಿಂಡಿ, ಸ್ನಾನದ ಸಮಯ ಏರು ಪೇರಾಯಿತು. ಆಗಲೇ, ನೀನು ತುಂಬಾ ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಿದ್ದೆಯಲ್ಲಾ, ಇದು ನಿನ್ನ ಪರೀಕ್ಷಾ ಕಾಲ. ಎದ್ದೇಳು. ಈ ಕಷ್ಟ ನಿನಗೊಬ್ಬಳಿಗೇ ಬಂದಿರುವುದಲ್ಲ ಎಂದು ಒಳಮನಸ್ಸು ಪಿಸುಗುಟ್ಟಿತು. ಮತ್ತೆ ನಾನು ಬ್ಯುಸಿ ಆಗಬೇಕು. ಯಾವುದಾದರೂ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಆಹಾರಕ್ಕೆ ಮಾತ್ರ ಡಿಮ್ಯಾಂಡ್ ಇರುವ ಬಿಸಿನೆಸ್ ಅನಿಸಿ, ಸಿಹಿತಿನಿಸು ತಯಾರಿಸಿ ಅದನ್ನು ಹಂಚುವ ಉದ್ಯಮ ಆರಂಭಿ ಸಲು ನಿರ್ಧರಿಸಿದೆ. ಹೀಗೆ, ಕಹಿ ಕರೋನ ಕಾಲಮಾನವು ‘ಸಿಹಿ’ ರಾಯಲ್ ಸ್ವೀಟ್ ಜನ್ಮಕ್ಕೆ ಕಾರಣವಾಯಿತು. ಅದಕ್ಕೆ ನನ್ನ ನಿರೀಕ್ಷೆಗೂ ಮೀರಿದ ಸ್ವಾಗತ ಮತ್ತು ಯಶಸ್ಸು ಸಿಕ್ಕಿದೆ. “”ರಾಯಲ್ ಸ್ವೀಟ್” ಬೆಂಗಳೂರಿನಲ್ಲಿ ವಲ್ಡ್ ಫೇಮಸ್ ಆಗಿದೆ! ಅಷ್ಟೇ ಅಲ್ಲ, ಮೈಸೂರು, ಮಂಗಳೂರು, ಮುಂಬಯಿಯನ್ನೂ ತಲುಪಿದೆ! ಪ್ರತಿಯೊಂದನ್ನೂ ತುಂಬ ಮೊದಲೇ ಪ್ಲಾನ್ ಮಾಡೋದು, ಹೀಗೇ ಇರಬೇಕು ಅನ್ನೋದನ್ನ ಮನಸ್ಸಿನಿಂದ ತೆಗೆದು ಹಾಕುವ ಪ್ರಯತ್ನ ಜಾರಿಯಲ್ಲಿದೆ.
ಕಲಿತ ಪಾಠ: ಬದಲಾವಣೆಗೆ ಸದಾ ಸಿದ್ಧಳಾಗಿರಬೇಕು.