ಮಣಿಪಾಲ: ಸುಮಾರು ನೂರು ವರ್ಷಗಳ ಹಿಂದೆ ಜಾಗತಿಕವಾಗಿ ಸ್ಪ್ಯಾನಿಶ್ ಫ್ಲೂ, ಕಾಲರಾ, ಪ್ಲೇಗ್ ಜನರನ್ನು ಯಾವುದೇ ಜಾತಿ, ಮತ, ಬಣ್ಣ, ರಾಷ್ಟ್ರೀಯತೆಯನ್ನು ನೋಡದೆ ಕಂಗೆಡಿಸಿಬಿಟ್ಟಿತ್ತು. ಅದೇ ರೀತಿ 2020 ಕೂಡಾ ಇಡೀ ಮಾನವ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಕೋವಿಡ್ 19 ಸೋಂಕು ದೊಡ್ಡ ಪ್ರಮಾಣದ ನಷ್ಟ ಹಾಗೂ ಭೀತಿಗೆ ತಳ್ಳಿಬಿಟ್ಟಿತ್ತು. ಇದೊಂದು ಎಂದೆಂದಿಗೂ ಮಾಸದ, ಇತಿಹಾಸದ ಪುಟಗಳಲ್ಲಿ ದಾಖಲಾಗುವ ಘಟನೆಯಾಗಿದೆ.
2020 ಹಲವು ಮರೆಯಲಾರದ ಘಟನೆಗಳಿಗೆ ಸಾಕ್ಷಿಯಾಗಿದ್ದು, ಅದರ ಕೆಲವು ಘಟನೆಗಳು ಇಲ್ಲಿವೆ:
ಜನವರಿ 2020: ಜೆಎನ್ ಯು ರಾದ್ಧಾಂತ-ಗಲಭೆ
2020ರ ಜನವರಿ ತಿಂಗಳಿನಲ್ಲಿ ಜವಾಹರಲಾಲ್ ನೆಹರು ಯೂನಿರ್ವಸಿಟಿ ಆವರಣ ಐದು ದಿನಗಳ ಕಾಲ ಶಸ್ತ್ರ ಸಜ್ಜಿತ ಗುಂಪುಗಳಿಂದಾಗಿ ರಣಾಂಗಣವಾಗಿ ಮಾರ್ಪಟ್ಟಿತ್ತು. ಜೆಎನ್ ಯು ಘಟನೆಯನ್ನು ನಿರ್ಲಕ್ಷಿಸುಂತೆಯೂ ಇಲ್ಲ. ನ್ಯಾಷನಲ್ ಇನ್ ಟಿಟ್ಯೂಷನಲ್ ರಾಂಕಿಂಗ್ ಫ್ರೇಮ್ ವರ್ಕ್ ನಲ್ಲಿ ಮೂರನೇ ಸ್ಥಾನದಲ್ಲಿ ಜೆಎನ್ ಯು ಹೆಸರಿದೆ. ಅಷ್ಟೇ ಅಲ್ಲ ಕೇಂದ್ರದ ಹಾಲಿ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಹಾಗೂ ಎಸ್ ಜೈಶಂಕರ್ ಕೂಡಾ ಜೆಎನ್ ಯು ಹಳೇ ವಿದ್ಯಾರ್ಥಿಗಳು.
ಜನವರಿ 5ರಂದು ಉದ್ರಿಕ್ತರ ಗುಂಪು ಜೆಎನ್ ಯು ಆವರಣದೊಳಕ್ಕೆ ನುಗ್ಗಿತ್ತು. ಮುಖಕ್ಕೆ ಮುಚ್ಚಿಕೊಂಡಿದ್ದ ವ್ಯಕ್ತಿಗಳು ಸಾಬರ್ ಮತಿ ಹಾಸ್ಟೆಲ್ ಒಳಗೆ ಇದ್ದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದ ಜೆಎನ್ ಯು ಟೀಚರ್ಸ್ಸ್ ಅಸೋಸಿಯೇಶನ್ ಮೇಲೆಯೂ ಕಲ್ಲೂತೂರಾಟ ನಡೆಸಲಾಗಿತ್ತು.
ಜೆಎನ್ ಯು ಉಪಕುಲಪತಿ ಜಗದೀಶ್ ಕುಮಾರ್ ನೇತೃತ್ವದ ಆಡಳಿತ ಮಂಡಳಿಯ ಪರಿಷ್ಕೃತ ಶುಲ್ಕದ ವಿರುದ್ಧ ಜೆಎನ್ ಯುಎಸ್ ಯು ಕಾಲೇಜು ಬಂದ್ ಗೆ ಕರೆ ನೀಡಿತ್ತು. ಇದು ಜವಾಹರಲಾಲ್ ನೆಹರು ಯೂನಿರ್ವಸಿಟಿ ಸ್ಟೂಡೆಂಟ್ಸ್ ಯೂನಿಯನ್ ಮತ್ತು ಎಬಿವಿಪಿ ನಡುವೆ ಘರ್ಷಣೆಗೆ ಕಾರಣವಾಗಿ ಜನವರಿ 5ರ ರಣಾಂಗಣ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ:ನಾಳೆ ಹಳ್ಳಿ ಫೈಟ್ ಫಲಿತಾಂಶ ಅಖೈರು : 209 ಗ್ರಾಪಂಗಳ ಭವಿಷ್ಯ ನಿರ್ಧಾರ
ದೆಹಲಿ ಪೊಲೀಸರ ಸತ್ಯ ಶೋಧನಾ ಸಮಿತಿ ಕೂಡಾ ಭದ್ರತಾ ಸಿಬ್ಬಂದಿಗೆ ಕ್ಲೀನ್ ಚಿಟ್ ನೀಡಿತ್ತು. ಅಷ್ಟೇ ಅಲ್ಲ ಜೆಎನ್ ಯು ಆವರಣದಲ್ಲಿ ನಡೆದ ಗಲಭೆ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿಲ್ಲ. ಕುತೂಹಲದ ಸಂಗತಿ ಎಂದರೆ ಘಟನೆ ನಡೆಯುವ ಹೊತ್ತಿನಲ್ಲಿ ಬೀದಿ ದೀಪಗಳನ್ನು ಕೂಡಾ ಸ್ವಿಚ್ ಆಫ್ ಮಾಡಲಾಗಿತ್ತು ಎಂದು ವರದಿ ವಿವರಿಸಿದೆ.
2020 ಫೆಬ್ರುವರಿ: ದೆಹಲಿಯಲ್ಲಿ ಭುಗಿಲೆದ್ದ ಗಲಭೆ:
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಸಿಎಎ, ಎನ್ ಪಿಆರ್ -ಎನ್ ಆರ್ ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಆರಂಭಗೊಂಡಿತ್ತು. 60 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಗಂಭೀರ ಸ್ವರೂಪ ತಾಳಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಕೋಮುದಳ್ಳುರಿ ಹೊತ್ತಿಕೊಂಡಿತ್ತು. ಫೆಬ್ರುವರಿ 24ರಂದು ಐದು ಮಂದಿ ಗಲಭೆಗೆ ಬಲಿಯಾಗಿದ್ದರು, ಎರಡು ದಿನಗಳಲ್ಲಿ ಆ ಸಂಖ್ಯೆ 25ಕ್ಕೆ ಏರಿಕೆಯಾಗಿತ್ತು. ಫೆ.28ರಂದು ಸಾವಿನ ಸಂಖ್ಯೆ 42ಕ್ಕೆ ಏರಿಕೆಯಾಗಿತ್ತು. ಒಟ್ಟು ದೆಹಲಿ ಗಲಭೆಯಲ್ಲಿ ಬಲಿಯಾದವರ ಸಂಖ್ಯೆ 53 ಮಂದಿ ಎಂದು ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಎಸ್ ಎನ್ ಶ್ರೀವಾಸ್ತವ್ ತಿಳಿಸಿದ್ದರು.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 254 ಎಫ್ ಐಆರ್ ಗಳನ್ನು ದಾಖಲಿಸಿದ್ದು, 903 ಮಂದಿಯನ್ನು ವಶಕ್ಕೆ ಪಡೆದಿದ್ದರು. ಈ ಗಲಭೆ ಸಂಚಿನ ಒಂದು ಭಾಗವಾಗಿತ್ತು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು.
2020 ಮಾರ್ಚ್: ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ
2012ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು 2020ರ ಮಾರ್ಚ್ 20ರ ಬೆಳಗಿನ ಜಾವ 5.30ಕ್ಕೆ ಗಲ್ಲಿಗೇರಿಸುವ ಮೂಲಕ ಕೊನೆಗೂ ಪೋಷಕರಿಗೆ ನ್ಯಾಯ ಒದಗಿಸಲಾಗಿತ್ತು.
2012ರ ಡಿಸೆಂಬರ್ ನಲ್ಲಿ 23 ವರ್ಷದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ, ಹಲ್ಲೆಗೈದಿದ್ದರು. ಚಿಂತಾಜನಕ ಸ್ಥಿತಿಯಲ್ಲಿ ನಿರ್ಭಯಾ ಸಾವು ಬದುಕಿನ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಳು. ಈ ಪ್ರಕರಣ ಸುಮಾರು 8 ವರ್ಷಗಳ ಕಾಲ ವಿಚಾರಣೆ ನಡೆದು ಕೊನೆಗೂ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸುವ ಮೂಲಕ ಅಂತ್ಯ ಹಾಡಲಾಗಿತ್ತು.
ಮಾರ್ಚ್/ಏಪ್ರಿಲ್: ದೇಶಾದ್ಯಂತ ಲಾಕ್ ಡೌನ್ ಹೇರಿಕೆ:
ಇಡೀ ಭಾರತ ಕಂಡು ಕೇಳರಿಯದ ಬೆಳವಣಿಗೆಗೆ ಮಾರ್ಚ್ ಕೊನೆಯ ವಾರದಂದು ಸಾಕ್ಷಿಯಾಗಿತ್ತು. ಕೋವಿಡ್ 19 ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25ರಿಂದ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಘೋಷಿಸಿಬಿಟ್ಟಿದ್ದರು. ಮಾರ್ಚ್ ನಲ್ಲಿ ಭಾರತದಲ್ಲಿ 600 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 12 ಸಾವು ಸಂಭವಿಸಿತ್ತು.
ಇಡೀ ದೇಶ ಲಾಕ್ ಡೌನ್ ಆದ ಸಂದರ್ಭದಲ್ಲಿ ಎಲ್ಲವೂ ಸ್ತಬ್ಧವಾಗಿದ್ದು, ಆರೋಗ್ಯ ಕಾರ್ಯಕರ್ತರು ಮುಂಚೂಣಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದರಲ್ಲಿ ಹಲವು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರು.
2020-ಮೇ: ಕಾಲ್ನಡಿಗೆಯಲ್ಲಿ ಸಾವಿರಾರು ಮಂದಿ ವಲಸೆ:
ಏಕಾಏಕಿ ಲಾಕ್ ಡೌನ್ ನಿಂದಾಗಿ ವಿವಿಧ ರಾಜ್ಯಗಳಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರ ಪಾಡು ಕಂಗಾಲಾಗಿ ಹೋಗಿತ್ತು. ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು..ಕೊನೆಗೂ ಯಾವುದೇ ವಾಹನ ವ್ಯವಸ್ಥೆ ಇಲ್ಲದ ಪರಿಣಾಮ ಸಾವಿರಾರು ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ನೂರಾರು ಕಿಲೋ ಮೀಟರ್ ನಡೆದೇ ಊರು ತಲುಪಿದ್ದರು. ಈ ಸಂದರ್ಭದಲ್ಲಿ ನೂರಾರು ಮಾನವೀಯ ಘಟನೆಗಳು ಬೆಳಕಿಗೆ ಬಂದಿದ್ದವು.
ಹೀಗೆ ಕಾಲ್ನಡಿಗೆಯಲ್ಲಿ ತಮ್ಮ ಊರಿನತ್ತ ತೆರಳುತ್ತಿದ್ದ ಮಧ್ಯಪ್ರದೇಶದ 16 ಮಂದಿ ವಲಸೆ ಕಾರ್ಮಿಕರ ಮೈ ಮೇಲೆ ಸರಕು ತುಂಬಿದ ರೈಲು ಚಲಿಸಿದ ಪರಿಣಾಮ ಎಲ್ಲರೂ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನ ಜಾಲ್ನಾ ಪ್ರದೇಶದಲ್ಲಿ ನಡೆದಿತ್ತು. ಸುಮಾರು 36 ಕಿಲೋ ಮೀಟರ್ ನಷ್ಟು ದೂರ ನಡೆದಿದ್ದ 16 ಮಂದಿ ತಂಡಕ್ಕೆ ಆಯಾಸವಾಗಿದ್ದ ಪರಿಣಾಮ ರೈಲ್ವೆ ಹಳಿ ಮೇಲೆ ಮಲಗಿಬಿಟ್ಟಿದ್ದರು. ಆದರೆ ಸರಕು ಓಡಾಟದ ರೈಲು ಸಂಚರಿಸುತ್ತದೆ ಎಂಬ ಪರಿಜ್ಞಾನ ಇಲ್ಲದೆ ಮಲಗಿದ್ದವರು ದಾರುಣವಾಗಿ ಸಾವಿಗೀಡಾಗಿದ್ದರು.
2020 ಜೂನ್: ಕೋವಿಡ್ ಅಟ್ಟಹಾಸ-ಗಾಲ್ವಾನ್ ಸಂಘರ್ಷ:
ಜಗತ್ತಿನ ವಿವಿಧ ಭಾಗಗಳಿಗೆ ಹಬ್ಬಿದ್ದ ಕೋವಿಡ್ 19 ಸೋಂಕು ಭಾರತವನ್ನೂ ಪ್ರವೇಶಿಸಿತ್ತು. ಜೂನ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗತೊಡಗಿತ್ತು. ಏತನ್ಮಧ್ಯೆ ಪೂರ್ವ ಲಡಾಖ್ ನ ಗಡಿ ಪ್ರದೇಶದಲ್ಲಿ ಜೂನ್ 16ರಂದು ಚೀನಾ ಸೇನಾ ಪಡೆ ಕ್ಯಾತೆ ತೆಗೆದು ಘರ್ಷಣೆಗೆ ಇಳಿದಿತ್ತು.
ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ಜೂನ್ 16ರಂದು ಘರ್ಷಣೆ ನಡೆದಿದೆ ಎಂಬ ಅಸ್ಪಷ್ಟ ಸುದ್ದಿ ಹರಿದಾಡತೊಡಗಿತ್ತು. ಬಳಿಕ ಭಾರತೀಯ ಸೇನೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಘರ್ಷಣೆಯನ್ನು ಖಚಿತಪಡಿಸಿತ್ತು.
16ನೇ ಬಿಹಾರ್ ರೆಜಿಮೆಂಟಿನ್ ಕರ್ನಲ್ ಸಂತೋಷ್ ಬಾಬು ನೇತೃತ್ವದ ಪಡೆ ಗಡಿ ಪ್ರದೇಶದಲ್ಲಿದ್ದ ಚೀನಾ ಸೇನಾಪಡೆಯ ಬಳಿ ಮಾತುಕತೆ ನಡೆಸಲು ತೆರಳಿದ್ದ ವೇಳೆ ಚೀನಾ ಪಡೆ ಕಲ್ಲು, ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿ ಬಿಟ್ಟಿತ್ತು. ಇದರ ಪರಿಣಾಮ ಗಾಲ್ವಾನ್ ಕಣಿವೆ ಪ್ರದೇಶದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಭಾರತೀಯ ಯೋಧರು ಹುತಾತ್ಮರಾದ ಘಟನೆ ನಂತರ ಗಡಿ ಪ್ರದೇಶದಲ್ಲಿ ಭಾರತ, ಚೀನಾ ನಡುವೆ ಘರ್ಷಣೆ ತೀವ್ರವಾಗಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರ, ಯುದ್ಧ ಟ್ಯಾಂಕ್ ಗಳನ್ನು ನಿಯೋಜಿಸುವ ಮೂಲಕ ಭಾರತ ಚೀನಾಕ್ಕೆ ಸಡ್ಡು ಹೊಡೆದಿತ್ತು. ಬಳಿಕ ಭಾರತ ಮತ್ತು ಚೀನಾ ಸಂಘರ್ಷ ತಿಳಿಗೊಳಿಸುವ ನಿಟ್ಟಿನಲ್ಲಿ ಮಾತುಕತೆ ಮುಂದಾಗಿತ್ತು. ಇದರ ಪರಿಣಾಮ ಗಡಿಯಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಡಿವಾಣ ಬಿದ್ದಿತ್ತು.