Advertisement

ಮೊಗವರಳಿಸಿದ ಸಿಹಿ ಸುದ್ದಿಗಳ ಸಂತೆ

11:18 AM Dec 28, 2019 | sudhir |

ನೂರೆಂಟು ಸಿಹಿ ಸುದ್ದಿಗಳ ಹಂಚಿದ 2019 ನಮಗೆಲ್ಲ ವಿದಾಯ ಹೇಳಲು ಸಜ್ಜಾಗಿದೆ. ಈ ವರ್ಷವು ನಮ್ಮ ಬಳಿ ಹೊತ್ತುತಂದ ಸಂತಸದ ಕ್ಷಣಗಳು ಹಲವು. ಮನಕ್ಕೆ ಮುದ ನೀಡಿ ಮೊಗವರಳಲು ಕಾರಣವಾದ ಹಲವು “ಹ್ಯಾಪಿ ನ್ಯೂಸ್‌’ಗಳ ನೆನಪು ಇಲ್ಲಿ…

Advertisement

ಹುತಾತ್ಮರಿಗೆ “ಮಸ್ತಕಾಭಿಷೇಕ’ ಅರ್ಪಣೆ
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಮುಗಿಲಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕದ ಪುಳಕ ಈ ವರ್ಷದಾರಂಭದಲ್ಲಿ ನಡೆಯಿತು. ರತ್ನಗಿರಿ ಬೆಟ್ಟದ ಮೇಲೆ ನಿಂತ ತ್ಯಾಗಮೂರ್ತಿಗೆ, 12 ವರ್ಷಗಳಿಗೊಮ್ಮೆ ನಡೆಯುವ ಮಂಡೆಪೂಜೆಯ ಸಕಲ ವಿಧಿವಿಧಾನಗಳು, ಧರ್ಮಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ನೆರವೇರಿದವು. ಪುಲ್ವಾಮಾದಲ್ಲಿ ಅಗಲಿದ ವೀರಯೋಧರಿಗೆ ಮಹಾಮಸ್ತಕಾಭಿಷೇಕವನ್ನು ಸಮರ್ಪಿಸಿದ್ದು ವಿಶೇಷವಾಗಿತ್ತು.

ಸಂಸತ್‌ಗೆ ಅನುಭವ ಮಂಟಪದ ಕಳೆ
12ನೇ ಶತಮಾನದ ಬಸವಾದಿ ಶರಣರ ಅನುಭವ ಮಂಟಪ, ಸಂಸತ್‌ನ ಮೆರುಗು ಹೆಚ್ಚಿಸಲಿದೆ. ನಾಡೋಜ ಜಿ.ಎಸ್‌. ಖಂಡೇರಾವ್‌ ರಚಿಸಿರುವ ಅನುಭವ ಮಂಟಪದ ಬೃಹತ್‌ ಕಲಾಕೃತಿ, ಸಂಸತ್‌ ಆವರಣದೊಳಗೆ ಅಳವಡಿಕೆ ಆಗಲಿದೆ. 2020ರ ಬಜೆಟ್‌ಗೂ ಮುನ್ನ ಪ್ರಧಾನಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂಬು ದು, ಕನ್ನಡಿಗರ ಪಾಲಿಗೆ ಪುಳಕ.

ಎನ್‌ಎಸ್‌ಜಿಗೆ ಮುಧೋಳ
ರಾಜ್ಯದ ಮುಧೋಳ ನಾಯಿ ಈಗ ರಾಷ್ಟ್ರೀಯ ಭದ್ರತಾ ಪಡೆಗೂ ಹೀರೋ. ಭಾರತೀಯ ಸೇನೆ, ಸಿಆರ್‌ಪಿಎಫ್ಗೆ ಆಯ್ಕೆಯಾಗಿದ್ದ ಮುಧೋಳ ನಾಯಿ ತನ್ನ ವಿಶಿಷ್ಟ ಚಾಣಾಕ್ಷತೆಯಿಂದ ಎನ್‌ಎಸ್‌ಜಿ ಕಮಾಂಡೋದ ಗಮನವನ್ನೂ ಸೆಳೆದಿದೆ. ಸ್ವತಃ ಎನ್‌ಎಸ್‌ಜಿ ಅಧಿಕಾರಿಗಳೇ, ಈ ನಾಯಿ ಮರಿಗಳನ್ನು ಆಯ್ಕೆ ಮಾಡಲಿದ್ದಾರೆ. ಗಣ್ಯಾತಿಗಣ್ಯರಿಗೆ ಭದ್ರತೆ ಒದಗಿಸುವ ಕೆಲಸವನ್ನು ಮುಧೋಳ ನಾಯಿಗಳು ಮಾಡಲಿವೆ ಎನ್ನುವುದು ನಾಡಿಗೊಂದು ಹೆಮ್ಮೆಯ ವಿಚಾರ.

“ದಾದಾ’ಗಿರಿಯ ಈ ದಿನಗಳು
ಬ್ಯಾಟಿಂಗ್‌ ಚತುರ, ಉತ್ತಮ ನಾಯಕತ್ವದಿಂದಲೇ ಗಮನ ಸೆಳೆದಿದ್ದ, ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಪಾಲಿಗೆ 2019 ಸ್ಮರಣಾರ್ಹ ಕಾಲಘಟ್ಟ. ಭಾರತೀಯ ಕ್ರಿಕೆಟ್‌ ಮಂಡಳಿಯ ನೂತನ ಅಧ್ಯಕ್ಷರಾಗಿ ದಾದಾ ಅವಿರೋಧವಾಗಿ ಆಯ್ಕೆಯಾದರು. ತಮ್ಮ 16 ವರ್ಷದ ಸುದೀರ್ಘ‌ ಕ್ರಿಕೆಟ್‌ ಅನುಭವದಿಂದ ಭಾರತೀಯ ಕ್ರಿಕೆಟ್‌ ಅನ್ನು ಗಂಗೂಲಿ ಇನ್ನಷ್ಟು ಎತ್ತರಕ್ಕೇರಿಸುತ್ತಾರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

Advertisement

ಥರ್ಡ್‌ ಅಂಪೈರ್‌ಗೆ ನೋಬಾಲ್‌
ಕೆಲವು ಸಲ ಅಂಪೈರ್‌ ನೋಬಾಲ್‌ ಕೊಟ್ಟರೂ, ಕ್ರಿಕೆಟ್‌ಪ್ರೇಮಿಗಳಿಗೆ ಅದೇನೋ ಕಸಿವಿಸಿ. ಹೌದೋ, ಅಲ್ವೋ ಅಂತ. ಈ ಶಂಕೆಗೆ ಮುಕ್ತಿ ಹಾಡಿದ ವರ್ಷವಿದು. ಫ್ರಂಟ್‌ಫ‌ೂಟ್‌ ನೋಬಾಲ್‌ಗ‌ಳ ನಿರ್ಣಯ ವನ್ನು ಥರ್ಡ್‌ ಅಂಪೈರ್‌ಗೆ ವಹಿಸುವ ಮಹತ್ವದ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಕೈಗೊಂಡಿತು.

ತೊಗರಿಗೆ “ಜಿಐ’ ತಗೋರಿ
ಕಲಬುರಗಿಯ ತೊಗರಿ ವಿಶಿಷ್ಟ ಸ್ವಾದಕ್ಕೂ, ಗುಣಮಟ್ಟಕ್ಕೂ, ಪೌಷ್ಟಿಕತೆಗೂ ಹೆಸರುವಾಸಿ. ಭಾರತ ಸರ್ಕಾರದ ಅಂಗಸಂಸ್ಥೆ ಜಿಯಾಲಾಜಿಕಲ್‌ ಇಂಡಿಕೇಶನ್‌ ರಿಜಿಸ್ಟ್ರಿ ಈ ಅಂಶವನ್ನು ಗುರುತಿಸಿ, ಭೌಗೋಳಿಕ ವಿಶೇಷ ಮಾನ್ಯತೆಯ (ಜಿಐ ಟ್ಯಾಗ್‌) ಪ್ರಮಾಣ ಪತ್ರ ನೀಡಿದ್ದೂ ಇದೇ ವರ್ಷ. ದೇಶ-ವಿದೇಶ ಮಾರುಕಟ್ಟೆಯಲ್ಲಿ ಕಲಬುರಗಿ ತೊಗರಿ ಬ್ರ್ಯಾಂಡ್‌ ಆಗಲು ಜಿಐ ಟ್ಯಾಗ್‌ ನೆರವಾಗಲಿದೆ. ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ.

ಇಸ್ರೋ ಸಾಧನೆ
ಚಂದ್ರಯಾನ -2 ಸೇರಿ ದಂತೆ ಅನೇಕ ಯೋಜನೆಗಳ ಯಶಸ್ಸು ದೇಶ ವನ್ನು ಜಾಗತಿಕ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಪಾಲುದಾರನನ್ನಾಗಿಸಿದೆ.

ಖುಷಿ ತಂದ ಟಾಪ್‌ 3 ಆಯ್ಕೆ
ಕಾಯ್ಕಿಣಿ ಮುಡಿಗೆ ಡಿಎಸ್‌ಸಿ
ದಕ್ಷಿಣ ಏಷ್ಯಾ ಸಾಹಿತ್ಯಕ್ಕಾಗಿ ನೀಡುವ ಪ್ರತಿಷ್ಠಿತ ಡಿಎಸ್‌ಸಿ ಪ್ರಶಸ್ತಿ, ಕನ್ನಡದ ಕಥೆಗಾರ ಜಯಂತ್‌ ಕಾಯ್ಕಿಣಿ ಅವರನ್ನು ಅರಸಿ ಬಂದಿದ್ದು ಇದೇ ವರ್ಷ. ಮುಂಬೈ ಕಥೆಗಳನ್ನೊಳಗೊಂಡ ಕನ್ನಡದ ರಚನೆಯ ಇಂಗ್ಲಿಷ್‌ ಅನುವಾದಿತ ಕೃತಿ “ನೋ ಪ್ರಸೆಂಟ್‌ ಪ್ಲೀಸ್‌’ಗೆ ಸಂದ ಗೌರವವಿದು.ಬಹುಮಾನದ ಮೊತ್ತ 18 ಲಕ್ಷ ರೂ.!

ವಿಶ್ವ ಆರ್ಥಿಕತೆಗೆ ಹೆಗಲಾದ ಗೀತಾ
ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಕನ್ನಡತಿ, ವಿಶ್ವ ಆರ್ಥಿಕತೆಗೆ ಹೆಗಲಾಗಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) 11ನೇ ಮುಖ್ಯ ಆರ್ಥಿಕ ತಜ್ಞೆಯಾಗಿ, ಮೈಸೂರು ಮೂಲದ ಗೀತಾ ಗೋಪಿನಾಥ್‌ ಅಧಿಕಾರ ವಹಿಸಿಕೊಂಡರು. ಈ ಹುದ್ದೆ ಸ್ವೀಕರಿಸಿದ, ವಿಶ್ವದ ಮೊದಲ ಮಹಿಳೆ ಎನ್ನುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ.

ಕುಗ್ರಾಮದ ಯುವತಿಗೆ ಸೌಂದರ್ಯ ಕಿರೀಟ
ಬೀದರ್‌ನ ಕುಗ್ರಾಮದ ಯುವತಿ “ಮಿಸ್‌ ಇಂಡಿಯಾ ಇಂಟರ್‌ನ್ಯಾಷನಲ್‌- 2019′ ಕಿರೀಟ ತೊಟ್ಟು ಕರುನಾಡಿಗೆ ಹೆಮ್ಮೆ ಮೂಡಿಸಿದರು. ಹುಮನಾಬಾದ್‌ ಸನಿಹದ ಧುಮ್ಮನಸೂರು ಗ್ರಾಮದ ಚೆಲುವೆ ನಿಶಾ, ಇಂಡೋನೇಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯದ ನಗು ಬೀರಿದರು. ದೇಶದ ವಿವಿಧೆಡೆಯಿಂದ ಪಾಲ್ಗೊಂಡ, 30 ಸ್ಪರ್ಧಿಗಳನ್ನು ಹಿಂದಿಕ್ಕಿದ ಕೀರ್ತಿ ಈಕೆಯದ್ದು.

Advertisement

Udayavani is now on Telegram. Click here to join our channel and stay updated with the latest news.

Next