Advertisement

ವಿಶ್ವಕಪ್‌ನಲ್ಲೀಗ ಎಲ್ಲರಿಗೂ ಗಾಯದ ಚಿಂತೆ!

01:12 AM Jun 18, 2019 | Team Udayavani |

ನಾಟಿಂಗ್‌ಹ್ಯಾಮ್‌: ಪ್ರಸಕ್ತ ವಿಶ್ವಕಪ್‌ ಕೂಟವನ್ನು ‘ಇಂಜುರಿ ಹಿಟ್ ವಿಶ್ವಕಪ್‌’ ಎಂದರೆ ತಪ್ಪಾಗಲಾರದು ಎಂದೇ ವಿಶ್ಲೇಷಿಸಲಾಗುತ್ತಿದೆ. ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಸೇರಿದಂತೆ ಬಹುತೇಕ ಎಲ್ಲಾ ತಂಡಗಳೂ ಗಾಯಾಳುಗಳ ಸಮಸ್ಯೆಯಿಂದ ನರಳುತ್ತಿವೆ. ವಿಚಿತ್ರವೆಂದರೆ, ಪ್ರಮುಖ ಆಟಗಾರರೇ ಹೊರಗುಳಿಯುತ್ತಿರುವುದು ಆಘಾತ ತರಿಸಿದೆ.

Advertisement

ಶಿಖರ್‌ ಧವನ್‌
ಫಾರ್ಮ್ನಲ್ಲಿರುವ ಭಾರತದ ಆರಂಭಿಕ ಆಟಗಾರನಾಗಿರುವ ಶಿಖರ್‌ ಧವನ್‌ ಕೈಗಾಯಕ್ಕೆ ತುತ್ತಾಗಿ ಮೂರ್ನಾಲ್ಕು ಪಂದ್ಯಗಳಿಂದ ಹೊರಗಿದ್ದಾರೆ. ಇವರು ಇಡೀ ವಿಶ್ವಕಪ್‌ನಿಂದಲೇ ಹೊರಗುಳಿಯಬಹುದು ಎಂಬ ಆತಂಕಗಳಿವೆ. ಇವರ ಬದಲು ರಿಷಬ್‌ ಪಂತ್‌ ಇಂಗ್ಲೆಂಡ್‌ಗೆ ಬಂದಿಳಿದಿದ್ದಾರೆ.

ಭುವನೇಶ್ವರ್‌ ಕುಮಾರ್‌
ಭಾನುವಾರ ನಡೆದ ಪಾಕ್‌ ವಿರುದ್ಧದ ಪಂದ್ಯದಲ್ಲಿ ಭಾರತದ ತಾರಾ ಬೌಲರ್‌ ಭುವನೇಶ್ವರ ಕುಮಾರ್‌ ಗಾಯಗೊಂಡಿದ್ದಾರೆ. ಹೀಗಾಗಿಯೇ ಇವರು 2.4 ಓವರ್‌ ಮಾತ್ರ ಬೌಲಿಂಗ್‌ ಮಾಡಿ ಪಂದ್ಯದಿಂದ ಹೊರಗುಳಿದಿದ್ದರು. ಇನ್ನೂ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ತಂಡ ಹೇಳಿದೆ. ಇವರ ಬದಲಿಗೆ ಶಮಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಕೇದಾರ್‌ ಜಾಧವ್‌
ಕೇದಾರ್‌ ಜಾಧವ್‌ ಅವರಂತೂ ಕೂಟ ಆರಂಭಕ್ಕೂ ಮುನ್ನವೇ ಗಾಯಗೊಂಡಿದ್ದರು. ಅದೃಷ್ಟವಶಾತ್‌ ಪಂದ್ಯ ಆರಂಭವಾಗುವ ಹೊತ್ತಿಗೆ ಚೇತರಿಸಿಕೊಂಡು ತಂಡದಲ್ಲಿ ಆಡುತ್ತಿದ್ದಾರೆ.

ಜಾಸನ್‌ ರಾಯ್‌
ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಜಾಸನ್‌ ರಾಯ್‌ ಕೂಡ ಗಾಯಾಳುಗಳ ಪಟ್ಟಿಗೆ ಸೇರಿದ್ದಾರೆ. ಇವರು ಮಂಡಿರಜ್ಜು ಸಮಸ್ಯೆಗೆ ತುತ್ತಾಗಿದ್ದಾರೆ. ಮುಂದಿನ ಎರಡು ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನ.

Advertisement

ಇಯಾನ್‌ ಮಾರ್ಗನ್‌
ಇಂಗ್ಲೆಂಡ್‌ ತಂಡದ ನಾಯಕ ಮಾರ್ಗನ್‌ ಬೆನ್ನುನೋವಿನಿಂದ ನರಳುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಇವರು ಈ ಸಮಸ್ಯೆಗೆ ತುತ್ತಾಗಿದ್ದರು. ಸದ್ಯಕ್ಕೆ ಮುಂದಿನ ಪಂದ್ಯದಲ್ಲಿ ಇವರು ಆಡಲಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿರುವುದು ಇಂಗ್ಲೆಂಡ್‌ ಪಾಲಿಗೆ ಸಂತಸದ ವಿಚಾರ.

ಡೇಲ್ ಸ್ಟೇನ್‌
ದಕ್ಷಿಣ ಆಫ್ರಿಕಾ ಪಾಲಿನ ಪ್ರಮುಖ ಬೌಲರ್‌ ಆಗಿದ್ದ ಡೇಲ್ ಸ್ಟೇನ್‌ ವಿಶ್ವಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನಾಡದೇ ವಾಪಸ್‌ ತೆರಳಿದ್ದಾರೆ. ಇವರು ಭುಜನೋವಿನ ಸಮಸ್ಯೆಯಿಂದಾಗಿ ಹೊರಗುಳಿಯುವಂತಾಯಿತು. ಜತೆಗೆ ಪ್ರಮುಖ ಬ್ಯಾಟ್ಸ್‌ಮನ್‌ ಆಮ್ಲ ಕೂಡ ಗಾಯಕ್ಕೀಡಾಗಿ ವಾಪಸ್‌ ಬಂದಿದ್ದಾರೆ.

ಲುಂಗಿ ಎನ್‌ಗಿಡಿ
ದಕ್ಷಿಣ ಆಫ್ರಿಕಾದ ಮತ್ತೂಬ್ಬ ಬೌಲರ್‌ ಲುಂಗಿ ಒಂದೆರಡು ಪಂದ್ಯಗಳಲ್ಲಿ ಆಡಿ, ಅನಂತರ ಹೊರಗುಳಿದಿದ್ದಾರೆ. ಅವರು ಮಂಡಿರಜ್ಜು ನೋವಿನ ಕಾರಣದಿಂದಾಗಿ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಇವರಷ್ಟೇ ಅಲ್ಲ, ತರಬೇತಿ ವೇಳೆ ಭಾರತದನಾಯಕ ಕೊಹ್ಲಿ, ಮುಷ್ಪಿಕರ್‌ ರಹೀಮ್‌, ನುವಾನ್‌ ಪ್ರದೀಪ್‌ ಗಾಯಗೊಂಡು ಆತಂಕ ಮೂಡಿಸಿದ್ದರು. ಆದರೆ ಬೇಗನೆ ಗುಣಮುಖರಾಗಿ ಆಡುತ್ತಿದ್ದಾರೆ. ಜತೆಗೆ ಬಾಂಗ್ಲಾದ ಶಕೀಬ್‌ ಅಲ್ ಹಸನ್‌, ತಮೀಮ್‌ ಇಕ್ಬಾಲ್ ಕೂಡ ಗಾಯಕ್ಕೆ ತುತ್ತಾಗಿದ್ದರೂ ಅನಿವಾರ್ಯವಾಗಿ ಆಡುತ್ತಿದ್ದಾರೆ.

ಪಟ್ಟಿ ದೊಡ್ಡದೇ ಇದೆ..

ಇವರಷ್ಟೇ ಅಲ್ಲ, ತರಬೇತಿ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ, ಮುಷ್ಪಿಕರ್‌ ರಹೀಮ್‌, ನುವಾನ್‌ ಪ್ರದೀಪ್‌ ಗಾಯಗೊಂಡು ಆತಂಕ ಮೂಡಿಸಿದ್ದರು. ಆದರೆ, ಬೇಗನೆ ಗುಣಮುಖರಾಗಿ ಆಡುತ್ತಿದ್ದಾರೆ. ಜತೆಗೆ ಬಾಂಗ್ಲಾದ ಶಕೀಬ್‌ ಅಲ್ ಹಸನ್‌, ತಮೀಮ್‌ ಇಕ್ಬಾಲ್ ಕೂಡ ಗಾಯಕ್ಕೆ ತುತ್ತಾಗಿದ್ದರೂ, ಅನಿವಾರ್ಯವಾಗಿ ಆಡುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next