Advertisement

ಹದಿನೆಂಟರ ಮೂಟೆಯಲ್ಲಿ  ಸುದ್ದಿ ನೂರೆಂಟು!

12:30 AM Dec 29, 2018 | Team Udayavani |

2018 ಮುಕ್ತಾಯವಾಗುತ್ತಾ ಬರುತ್ತಿದೆ. ದೇಶ ಮತ್ತು ವಿಶ್ವದ ಪ್ರಮುಖ ಘಟನಾವಳಿಗಳನ್ನು ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.

Advertisement

ಮುಂದುವರಿದ ಜಲಯುದ್ಧ
ಗೋವಾ, ತಮಿಳುನಾಡು ಜತೆಗೆ ಮಹದಾಯಿ, ಕಾವೇರಿ ನದಿ ನೀರಿನ ಬಗ್ಗೆ ರಾಜ್ಯದ ಹೋರಾಟ ಮುಂದುವರಿದಿತ್ತು. ಮಹದಾಯಿ ನೀರು ಹಂಚಿಕೆ ವಿವಾದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಪ್ರಚಾರದ ಮುಖ್ಯ ವಸ್ತುವಾಗಿತ್ತು. ಮೇಕೆದಾಟುವಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿದ ಅಣೆಕಟ್ಟು ಈಗ ಮತ್ತೆ ಸುದ್ದಿಯಲ್ಲಿದೆ. ಕೇಂದ್ರ ಜಲ ಆಯೋಗ ಯೋಜನೆ ಕೈಗೆತ್ತಿಕೊಳ್ಳಲು ಅಗತ್ಯವಾಗಿರುವ ವಿಸ್ತೃತ ಯೋಜನಾ ವರದಿ ಸಲ್ಲಿಸಲು ಅನುಮೋದನೆ ನೀಡಿದ್ದಕ್ಕೆ ತಮಿಳುನಾಡು ಆಕ್ರೋಶ ವ್ಯಕ್ತಪಡಿಸಿದೆ.

ಮಲ್ಯ ಗಡಿಪಾರಿಗೆ ಕೋರ್ಟ್‌ ಒಪ್ಪಿಗೆ
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಆರೋಪಕ್ಕೆ ಗುರಿಯಾಗಿ ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡುವ ಬಗ್ಗೆ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಆದೇಶಿಸಿದೆ. ಇದೀಗ ಅದರ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಎಲ್ಲಾ ಹಂತದಲ್ಲಿಯೂ ಮಲ್ಯರಿಗೆ ಹಿನ್ನಡೆಯಾದರೆ ಪ್ರಕ್ರಿಯೆ ಪೂರ್ತಿಯಾಗಿ 2 ತಿಂಗಳ ಒಳಗಾಗಿ ಭಾರತಕ್ಕೆ ವಿಜಯ ಮಲ್ಯ ಗಡಿಪಾರಾಗುವ ಸಾಧ್ಯತೆ ಉಂಟು.

ಪಂಚ ರಾಜ್ಯ ಚುನಾವಣೆ
2019ರ ಏಪ್ರಿಲ್‌-ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್‌ ಎಂದು ಹೆಗ್ಗಳಿಕೆ ಪಡೆದಿದ್ದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ, ಮಿಜೋರಾಂ, ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಮೂರು ಪ್ರಮುಖ ರಾಜ್ಯಗಳಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಜಯಗಳಿಸಿ ಸದ್ದು ಮಾಡಿತು. ತೆಲಂಗಾಣದಲ್ಲಿ ನಿರೀಕ್ಷೆಯಂತೆಯೇ ಕವಲಕುಂಟ ಚಂದ್ರಶೇಖರ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಗೆದ್ದು ಅಧಿಕಾರ ಉಳಿಸಿಕೊಂಡಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕೊನೆಯ ರಾಜ್ಯವನ್ನೂ ಕಾಂಗ್ರೆಸ್‌ ಕಳೆದುಕೊಂಡಿತು. ಗಮನಾರ್ಹ ಅಂಶವೆಂದರೆ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾದದ್ದ‌ಕ್ಕೆ ಸರಿಯಾಗಿಯೇ 3 ರಾಜ್ಯಗಳಲ್ಲಿನ ಜಯ ಅವರಿಗೆ ಭಾರೀ ಶಕ್ತಿ ನೀಡಿದೆ. 

ಸೋತರೂ ಅಧಿಕಾರದಲ್ಲುಳಿದ ಕಾಂಗ್ರೆಸ್‌
ಹೈವೋಲ್ಟೆàಜ್‌ ಕರ್ನಾಟಕ ವಿಧಾನಸಭೆ ಚುನಾವಣೆ ನಡೆದು ಬಿಜೆಪಿ 104 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸರ್ಕಾರ ರಚಿಸಲು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಬಿಜೆಪಿ ಘಟಕ ಪ್ರಯತ್ನಿಸಿದರೂ ಫ‌ಲ ಕಾಣಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರೂ, ವಿಶ್ವಾಸಮತ ಯಾಚನೆ ಮುನ್ನವೇ ರಾಜೀನಾಮೆ ನೀಡಿದರು. ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿ ತಡ ರಾತ್ರಿ ಕಾನೂನು ಹೋರಾಟ ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ 35 ಸ್ಥಾನ ಗೆದ್ದ ಜೆಡಿಎಸ್‌ ಮತ್ತು 80 ಸ್ಥಾನ ಗೆದ್ದ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚಿಸಿಕೊಂಡವು. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಡಾ.ಜಿ.ಪರಮೇಶ್ವರ ಉಪ ಮುಖ್ಯಮಂತ್ರಿಯಾದರು.

Advertisement

ಮಹಾ ಮೈತ್ರಿಕೂಟ ರಚನೆ ಪ್ರಯತ್ನ
ಮೇನಲ್ಲಿ ಉತ್ತರ ಪ್ರದೇಶದ ಫ‌ೂಲ್‌ಪುರ್‌, ಗೋರಖ್‌ಪುರ ಲೋಕಸಭಾ ಕ್ಷೇತ್ರಗಳಿಗೆ ಎಸ್‌ಪಿ, ಬಿಎಸ್‌ಪಿ ಕೈಜೋಡಿಸಿ ಮೈತ್ರಿಕೂಟ ರಚಿಸಿ ಸ್ಪರ್ಧಿಸಿ ಗೆದ್ದವು. ಆ ಬಳಿಕ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಎದುರಿಸಲು ಕಾಂಗ್ರೆಸ್‌ ನೇತೃತ್ವದ ಮಹಾ ಮೈತ್ರಿಕೂಟ ರಚಿಸುವ ಬಗ್ಗೆ ಪ್ರಸ್ತಾಪವಾಯಿತು. ಬೆಂಗಳೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಪ್ರಮಾಣ ವಚನ ಸ್ವೀಕಾರ ವೇಳೆ ಪ್ರತಿಪಕ್ಷಗಳ ಎಲ್ಲಾ ನೇತಾರರು ಹಾಜರಿದ್ದು ನಾವೂ ಸಿದ್ಧರಿದ್ದೇವೆ ಎಂದು ಸಂದೇಶ ನೀಡಿದ್ದರು. ಬಳಿಕ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲವೆಂಬ ನೆಪವೊಡ್ಡಿ ಟಿಡಿಪಿ ಎನ್‌ಡಿಎಯಿಂದ ಹೊರಬಂತು. ಚಂದ್ರಬಾಬು ನಾಯ್ಡು ಮಹಾಮೈತ್ರಿಕೂಟ ರಚನೆಯ ನೇತೃತ್ವ ವಹಿಸಿದ್ದಾರೆ. ಅದಕ್ಕಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜತೆಗೂ ಮಾತಾಡಿದ್ದಾರೆ.

ಸುದ್ದಿಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ-ಪಿಡಿಪಿ ಸರ್ಕಾರ ಜೂನ್‌ನಲ್ಲಿ ಪತನವಾಯಿತು. ಬಿಜೆಪಿ ಮೈತ್ರಿ ಹಿಂಪಡೆದ ಬಗ್ಗೆ ರಾಜಕೀಯವಾಗಿ ವಾಕ್ಸಮರ ಬಿರುಸಾಗಿಯೇ ನಡೆಯಿತು. ಅದರ ಜತೆಗೆ ಹತ್ತು ವರ್ಷಗಳಿಂದ ರಾಜ್ಯಪಾಲರಾಗಿದ್ದ ಎನ್‌.ಎನ್‌.ವೋರಾ ಸ್ಥಾನದಲ್ಲಿ ರಾಜಕೀಯ ವ್ಯಕ್ತಿ ಸತ್ಯಪಾಲ್‌ ಮಲಿಕ್‌ರನ್ನು ನೇಮಿಸಲಾಯಿತು. ಇದರ ಜತೆಗೆ ಅಲ್ಲಿ ಈಗ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ. ಪಂಚಾಯತ್‌ ಚುನಾವಣೆಗಳಲ್ಲಿಯೂ ಹಲವು ಭಾಗಗಳಲ್ಲಿ ಸ್ಥಳೀಯರು ಉತ್ಸಾಹ ದಿಂದಲೇ ಭಾಗವಹಿಸಿದ್ದರು. ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದೂ ಸರ್ಕಾರ ಪತನ ಮತ್ತು ರಾಜಕೀಯ ವಾಗ್ವಾದಕ್ಕೆ ಕಾರಣವಾಯಿತು. ಒಟ್ಟು 230 ಮಂದಿ ಉಗ್ರರನ್ನು ಸೇನಾ ಪಡೆಗಳು ಕಾರ್ಯಾಚರಣೆಯಲ್ಲಿ ಕೊಂದಿವೆ. 

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಿತಿ ಮಹಿಳೆಯರು ಪ್ರವೇಶಿಸಬಹುದು ಎಂದು ಸೆ.28ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಆ ದಿನದಿಂದ ಇದುವರೆಗೆ ತೀರ್ಪಿನ ಪರ ವಿರೋಧ ಹೋರಾಟ ನಡೆಯುತ್ತಿದೆ. ಹೀಗಾಗಿ ಪ್ರಸಕ್ತ ಸಾಲಿನ ಯಾತ್ರೆ ವಿಶ್ವಾದ್ಯಂತ ಸುದ್ದಿಯಾಗಿದೆ. ಈ ಪ್ರಕರಣದ ಮೂಲಕ ಕೇರಳದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಮುಂದಾಗು ತ್ತಿದೆ. ತಿರುವನಂತಪುರದಲ್ಲಿ ಕೇರಳ ವಿಧಾನಸಭೆ ಎದುರು ಬಿಜೆಪಿಯ ಸರಣಿ ಉಪವಾಸ ಸತ್ಯಾಗ್ರಹ ಮುಂದುವರಿದಿದೆ. ತೀರ್ಪಿನ ವಿರುದ್ಧ ಕೊನೆಗೂ ಅಯ್ಯಪ್ಪ ದೇಗುಲದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಮೇಲ್ಮನವಿ ಸಲ್ಲಿಸಿದೆ. ಜತೆಗೆ ಇತರ ಸಂಘಟನೆಗಳೂ ಮೇಲ್ಮನವಿ ಸಲ್ಲಿಸಿವೆ. ಈ ಎಲ್ಲಾ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಒಪ್ಪಿಕೊಂಡಿದೆ.

ವಿದೇಶ ವಿಶೇಷ ವಾರ್ತೆ
ಡೀಲ್‌ ರದ್ದು-ಗುದ್ದು
ಇರಾನ್‌ ಜತೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಸಹಿ ಹಾಕಿದ್ದ ಪರಮಾಣು ಒಪ್ಪಂದವನ್ನು ರದ್ದುಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಈ ವಿದ್ಯಮಾನದ ನಂತರ ಇರಾನ್‌ನೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ರಾಷ್ಟ್ರಗಳಿಗೆ(ಅದರಲ್ಲೂ ತೈಲ ಖರೀದಿ) ತುಂಬಾ ತೊಂದರೆಯಾಯಿತು. ಭಾರತಕ್ಕೂ ಇದರ ಬಿಸಿ ಜೋರಾಗಿಯೇ ತಟ್ಟಿತು. ಅಮೆರಿಕದ ನಿರ್ಬಂಧಗಳ ನಂತರ ಈಗ ಇರಾನ್‌ ಬಹುದೊಡ್ಡ ಆರ್ಥಿಕ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಟ್ರಂಪ್‌-ಕಿಮ್‌ ಭೇಟಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಂ ಜಾಂಗ್‌ ಉನ್‌ ಜೂ.12ರಂದು ಸಿಂಗಾಪುರದಲ್ಲಿ ಭೇಟಿಯಾಗಿದ್ದರು. ದಶಕಗಳ ಕಾಲ ಮಾತಿಗೆ ಮಾತು, ಕ್ಷಿಪಣಿ ಪರೀಕ್ಷೆಗಳ ಮೂಲ ಸೆಡ್ಡು ಹೊಡೆದಿದ್ದ ಕಿಂ ರಹಸ್ಯವಾಗಿ ನಡೆಸುತ್ತಿದ್ದ ಅಣಸ್ತ್ರ ಪರೀಕ್ಷೆ ರದ್ದುಗೊಳಿಸಲು ಮತ್ತು ಕ್ಷಿಪಣಿ ಉಡಾವಣೆ ನಿಲ್ಲಿಸಲು ಒಪ್ಪಿಕೊಂಡಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಉತ್ತರ ಕೊರಿಯಾ ವತಿಯಿಂದ ಗಮನಾರ್ಹ ನಿರ್ಧಾರ ಘೋಷಣೆಯಾಗಿಲ್ಲ. 

ಪ್ರಧಾನಿಯಾದ ಮಾಜಿ ಕ್ರಿಕೆಟಿಗ ಇಮ್ರಾನ್‌ 
1976ರಿಂದ 1992ರ ವರೆಗೆ ಪಾಕಿಸ್ತಾನ ಕ್ರಿಕೆಟ್‌ ಬೆನ್ನುಲುಬಾಗಿದ್ದ ಇಮ್ರಾನ್‌ ಖಾನ್‌ ಆ ರಾಷ್ಟ್ರದ ಪ್ರಧಾನಮಂತ್ರಿಯಾದರು. ಅಲ್ಲಿನ ಸಂಸತ್‌ನ ಕೆಳಮನೆ ನ್ಯಾಷನಲ್‌ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಖಾನ್‌ರ ಪಕ್ಷ ತೆಹ್ರಿಕ್‌-ಇ-ಇನ್ಸಾಫ್ 116 ಸ್ಥಾನಗಳನ್ನು ಗೆದ್ದುಕೊಂಡಿತು. ಭಾರತದ ನೆರೆಯ ರಾಷ್ಟ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ 2 ದೇಶಗಳ ಸಂಬಂಧ ಸುಧಾರಣೆ ಆದೀತು ಎನ್ನುವುದರ ಬಗ್ಗೆ ಚೇತೋಹಾರಿ ಬೆಳವಣಿಗೆ ಏನೂ ಆಗಿಲ್ಲ.

ಶ್ರೀಲಂಕಾ ಬಿಕ್ಕಟ್ಟು
ದ್ವೀಪ ರಾಷ್ಟ್ರದ ಅಧ್ಯಕ್ಷ ಮೈತ್ರಿಪಾಲ  ಸಿರಿಸೇನೆ ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರನ್ನು ವಜಾ ಮಾಡಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಿದರು. ಸಂಸತ್‌ನಲ್ಲಿ ವಿಶ್ವಾಸ ಮತ ಗಳಿಸಲು ವಿಫ‌ಲರಾದರು. ಸುಪ್ರೀಂಕೋರ್ಟ್‌ ಕೂಡ ಮೈತ್ರಿಪಾಲ ಸಿರಿಸೇನೆ ನಿರ್ಧಾರ ಅಸಾಂವಿಧಾನಿಕ ಎಂದು ಘೋಷಿಸಿತು. ಹೀಗಾಗಿ ಜ.5ರಂದು ನಡೆಯಬೇಕಾಗಿದ್ದ ಸಂಸತ್‌ ಚುನಾವಣೆ ರದ್ದಾಗಿ, ಯಥಾ ಸ್ಥಿತಿಗೆ ಬಂದಂತಾಗಿದೆ. ಆದರೆ ಸಿರಿಸೇನೆ ಮಾತ್ರ ರನಿಲ್‌ರನ್ನು ಮತ್ತೆ ಪ್ರಧಾನಿಯನ್ನಾಗಿಸುವುದಿಲ್ಲ ಎಂದು ಹೇಳಿದ್ದಾರೆ.

ಸದ್ದು ಮಾಡಿದ ಸುಪ್ರೀಂ ಕೋರ್ಟ್‌
1    ಆಧಾರ್‌ ಕಾರ್ಡ್‌ ಸಿಂಧುತ್ವ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಎಳೆದ ಸುಪ್ರೀಂ ಕೋರ್ಟ್‌, ಆಧಾರ್‌ನ ಸಾಂವಿಧಾನಿಕ ಮಾನ್ಯತೆ ಎತ್ತಿಹಿಡಿಯಿತು. 

2    ಸೆಕ್ಷನ್‌ 377 ಕುರಿತ ಐತಿಹಾಸಿಕ ತೀರ್ಪು ನೀಡಿ ದಶಕಗಳಿಂದ ನೋವನುಭವಿಸುತ್ತಿದ್ದ ಎಲ್‌ಜಿಬಿಟಿ ಸಮುದಾಯದ ಸಂತಸಕ್ಕೆ ಕಾರಣವಾಯಿತು ಸುಪ್ರೀಂ ಕೋರ್ಟ್‌.

3    ಅನೈತಿಕ ಸಂಬಂಧ ಕ್ರಿಮಿನಲ್‌ ಅಪರಾಧ ಅಲ್ಲ ಎಂಬ ಮಹತ್ವದ ತೀರ್ಪು ಪ್ರಕಟಿಸಿ, 158 ವರ್ಷಗಳ ಹಳೆಯ ಬ್ರಿಟಿಷ್‌ ಕಾಲದ ಕಾನೂನನ್ನು ಅಸಿಂಧುಗೊಳಿಸಿತು.

4    ಶಬರಿಮಲೆ ಅಯ್ಯಪ್ಪ ದರ್ಶನ ಪಡೆಯಲು ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ  ನೀಡಿ ತೀರ್ಪು ನೀಡಿತು.

5    ವ್ಯಕ್ತಿಯೊಬ್ಬನಿಗೆ ಗೌರವದಿಂದ ಸಾವನ್ನಪ್ಪುವ ಸಂಪೂರ್ಣ ಹಕ್ಕಿದೆ ಎಂದು ಅಭಿಪ್ರಾಯ ಪಟ್ಟು ದಯಾಮರಣದ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿತು. ಮರಣಶಯೆಯಲ್ಲಿರುವ ರೋಗಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸುವ ಮೂಲಕ ದಯಾಮರಣಕ್ಕೆ ಅನುವು ಮಾಡಿಕೊಡಲು ಅನುಮತಿ ನೀಡಿತು.

6    ತೀವ್ರ ಕುತೂಹಲ ಕೆರಳಿಸಿದ್ದ ಕಾವೇರಿ ತೀರ್ಪು ಪ್ರಕಟವಾಗಿ, ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿದ ಸುಪ್ರೀಂಕೋರ್ಟ್‌ ರಾಜ್ಯಕ್ಕೆ ಹೆಚ್ಚುವರಿಯಾಗಿ 14.75 ಟಿಎಂಸಿ ನೀರನ್ನು ನೀಡುವ ಕುರಿತು ಅನುಮೋದನೆ ನೀಡಿತು.

7    ಚಿತ್ರಪ್ರದರ್ಶನಕ್ಕಿಂತ ಮೊದಲು ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಹೇಳುವ ಮೂಲಕ 2016ರಲ್ಲಿ ತಾನು ನೀಡಿದ್ದ ತೀರ್ಪನ್ನು ಪರಿಷ್ಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next