2018 Everyone is a Hero ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಮಲಯಾಳಂ ಭಾಷೆಯ ಚಲನಚಿತ್ರ. ಜ್ಯೂಡ್ ಆಂಥನಿ ಜೋಸೆಫ್ ಈ ಚಿತ್ರದ ನಿರ್ದೇಶಕ. ಕೇರಳದ ವಿವಿಧ ಜಿಲ್ಲೆಗಳಲ್ಲಿ2018 ರಲ್ಲಿನೆರೆ ಬಾಧಿಸಿತ್ತು. ಲಕ್ಷಾಂತರ ಜನ ನಿರಾಶ್ರಿತರಾದರು. 483 ಮಂದಿ ನೆರೆಗೆ ಬಲಿಯಾದರು. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ಬೆಳೆನಾಶ. ವಾಸ್ತವವಾಗಿ ಸಂಪೂರ್ಣ ಕೇರಳವನ್ನೇ ಹಿಂಡಿ ಹಿಪ್ಪೆ ಮಾಡಿದ್ದು ಆ ನೆರೆ. ಪ್ರತಿಯೊಬ್ಬರೂ ತಮ್ಮ ರಕ್ಷಣೆಗೆ ಹರ ಸಾಹಸ ಪಟ್ಟರೆ, ಪ್ರಕೃತಿ ವಿಕೋಪ ರಕ್ಷಣಾ ಪಡೆ ಹಾಗೂ ಸೇನೆ ಎಲ್ಲರೂ ಪ್ರತಿಯೊಬ್ಬರ ಪ್ರಾಣ ಉಳಿಸಲು ಪಟ್ಟ ಅವಿರತ ಶ್ರಮ ಅನನ್ಯ.
ಇವೆಲ್ಲವನ್ನೂ ಹಿನ್ನೆಲೆಯಾಗಿಟ್ಟುಕೊಂಡು ಆಂಥನಿ ರೂಪಿಸಿದ ಸಿನಿಮಾ 2018- ಎವ್ರಿವನ್ ಈಸ್ ಹೀರೋ. ಅದೀಗ 2024ರ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಭಾಗವಹಿಸುತ್ತಿರುವ ಚಲನಚಿತ್ರ. ಸಿನಿಮಾದ ಕೇಂದ್ರ ಇರುವುದು ಬದುಕು. ಅಳಿವು ಉಳಿವಿನ ಹೋರಾಟದಲ್ಲಿ ಹೇಗೆ ಪ್ರತಿಯೊಬ್ಬರೂ ಅಸಾಧಾರಣ ಸಾಮರ್ಥ್ಯದ ಹಾಗೂ ಮಹಾತ್ವಾಕಾಂಕ್ಷೆಯ ನಾಯಕ [ಹೀರೋ]ನಾಗಿ ಹೊರ ಹೊಮ್ಮುತ್ತಾರೆ ಎಂಬುದನ್ನು ಹೇಳಲು ಪ್ರಯತ್ನಿಸುವ ಚಿತ್ರ.
ಯುದ್ಧಭೂಮಿಯಲ್ಲಿ ಪ್ರತಿಯೊಬ್ಬನೂ ಹೇಗೆ ಯೋಧನೋ, ಹಾಗೆಯೇ ಬದುಕಿನ ಹೋರಾಟದಲ್ಲಿ ಪ್ರತಿಯೊಬ್ಬರೂ ಅಸಲಿ ನಾಯಕರೇ. ಕಥೆಯ ಹಂದರವನ್ನೂ ಅತಿ ಗಟ್ಟಿಯಾಗಿ ಕಟ್ಟಿರುವ ಆಂಥನಿ ಪ್ರವಾಹ ಎನ್ನುವುದನ್ನು ಅತ್ಯಂತ ಪ್ರಬಲ ಉಪಮೆಯಾಗಿ ಬಳಸಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡೂ ಸಂದರ್ಭಗಳು ಸೃಷ್ಟಿಸುವ ಭೀಕರತೆಯನ್ನು ಹಿಡಿದಿಡುವ ಪ್ರಯತ್ನವೂ ಇದರಲ್ಲಿರುವುದು ವಿಶೇಷ. ಬರ ಬಂದು ಪ್ರತಿ ಹನಿ ನೀರಿಗೆ ಕಣ್ಣೀರು ಹಾಕುವಂಥ ಕಷ್ಟದಲ್ಲಿರುವವನ ಸ್ಥಿತಿಯನ್ನು ಹೇಳುತ್ತಲೇ ಅದೇ ಅಸಂಖ್ಯಾತ ಹನಿಗಳು ಒಮ್ಮೆಲೆ ಅಪ್ಪಳಿಸಿದಾಗ ಸೃಷ್ಟಿಯಾಗುವ ಸಂಪೂರ್ಣ ವಿರುದ್ಧದ ಸ್ಥಿತಿಯನ್ನೂ ಸಿನಿಮಾ ವಿವರಿಸುತ್ತದೆ. ಈ ಎರಡೂ ವೈರುಧ್ಯ ಸಂದರ್ಭಗಳ ಮುಖಾಮುಖಿಯಲ್ಲೂ ಬದುಕಿನ ಹೋರಾಟ ಮುನ್ನೆಲೆಯಲ್ಲಿರುತ್ತದೆ ಎಂಬುದು ವಿಶೇಷ.
ಕಥೆ ತೆರೆದುಕೊಳ್ಳುವುದು ಪ್ರತಿಯೊಬ್ಬರ ವೈಯಕ್ತಿಕ ಬದುಕಿನ ಎಳೆಗಳಿಂದಲೇ. ಮಾಜಿ ಮಿಲಿಟರಿ ಅಧಿಕಾರಿ ಅನೂಪ್, ಟ್ರಕ್ ಡ್ರೈವರ್ ಸೇತುಪತಿ, ಮೀನುಗಾರ ಮತಚ್ಚನ್, ಪತ್ರಕರ್ತೆ ನೂರಾ..ಹೀಗೆ ಹಲವರ ಬಿಡಿ ಬಿಡಿ ಕಥೆಗಳು ಒಂದು ಎಳೆಯಲ್ಲಿ ಬಂಧಿಸುವುದು ಅನಿರೀಕ್ಷಿತ ಪ್ರವಾಹದ ಎದುರು. ಅಂತರ್ ಪ್ರವಾಹ ಮತ್ಯ ಬಾಹ್ಯ ಪ್ರವಾಹ-ಎರಡರಲ್ಲಿ ಯಾವುದು ಮೇಲುಗೈ ಸಾಧಿಸಬಲ್ಲದು ಎನ್ನುವ ಮಧ್ಯೆಯೇ ಅವೆಲ್ಲವನ್ನೂ ಹತ್ತಿಕ್ಕಿ ಜೀವನೋತ್ಸಾಹದಿಂದ ಪುಟಿಯುವ ಮನುಷ್ಯನೇ [ನಾಯಕ] ಬೆಳ್ಳಿತೆರೆ ಮೇಲೆ ರಾರಾಜಿಸುತ್ತಾನೆ.
ಪ್ರತಿಯೊಬ್ಬರೂ ವೈಯಕ್ತಿಕ ಬದುಕಿನ ಸಂಘರ್ಷವನ್ನು ಮನಸ್ಸಿನಲ್ಲಿ ಎದುರಿಸುತ್ತಲೇ ಇದ್ದ ಪ್ರತಿ ಪಾತ್ರಗಳ ಬದುಕಿನಲ್ಲಿ ಅನಿರೀಕ್ಷಿತ ಪ್ರವಾಹ ಎದುರಾಗುತ್ತದೆ. ಆಗ ತಮ್ಮ ಬದುಕಿನ ಎದುರಿನ ಆಯ್ಕೆಗಳ ಬದಲು ಅನಿವಾರ್ಯವನ್ನು ಒಪ್ಪಿಕೊಳ್ಳುತ್ತಾ ಬದುಕಲು ಹೋರಾಡುವ, ಉಳಿದವರನ್ನು ಬದುಕಿಸಲು ಶ್ರಮಿಸುವಂಥ ಪರಿಯನ್ನು ಸಿನಿಮಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.
ಧೈರ್ಯ, ಮಾನವೀಯತೆ, ಭರವಸೆ ಹಾಗೂ ಸ್ಫೂರ್ತಿ ಎಲ್ಲವೂ ಈ ಚಿತ್ರದಲ್ಲಿದೆ ಎಂಬುದು ಚಿತ್ರ ನಿರ್ದೇಶಕರ ಅಭಿಪ್ರಾಯ. ತೊವಿನೊ ಥಾಮಸ್. ಕುಂಚಕೊ ಬಾಬನ್, ಆಸಿಫ್ ಆಲಿ, ಅಪರ್ಣಾ ಮುರಳಿ, ನಾರಾಯಣ್, ಲಾಲ್, ವಿನೀತ್ ಶ್ರೀನಿವಾಸನ್ ಸೇರಿದಂತೆ ಹಲವು ಕಲಾವಿದರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿರುವುದರಿಂದಲೇ ಸಿನಿಮಾ ಪಕ್ವವಾಗಿ ಮೂಡಿ ಬಂದಿದೆ.
ಸಿನಿಮಾದಲ್ಲಿ ಬರುವ ಒಂದು ವಾಕ್ಯ ಜಗತ್ತಿನ ಭವಿಷ್ಯವನ್ನೂ ಹೇಳಬಲ್ಲದು. ’ನಿತ್ಯವೂ ನೀರಿನ ರಾಶಿ ಸಮುದ್ರವನ್ನೇ ನೋಡುವ ನಮಗೆ ಇದೇ ನೀರು ಇಷ್ಟೊಂದು ಭಯಾನಕ ಸ್ವರೂಪ ಪಡೆದೀತೆಂದು ನಿರೀಕ್ಷಿಸಲೂ ಸಾಧ್ಯವಿಲ್ಲ’. ನಿಜ. ಒಂದು ಸಹಜ ಸ್ಥಿತಿ ಎನ್ನುವುದೇ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಬಿರುಗಾಳಿಯಾಗಿಬಿಟ್ಟರೆ ಬದುಕು ಏನಾಗಬೇಕು?
ಇಂಥದೊಂದು ಪ್ರಶ್ನೆಗೆ ನಮ್ಮೊಳಗೆ ಉತ್ತರ ಹುಡುಕುವ ಪ್ರಯತ್ನವೂ ಇದು ಎನ್ನಬಹುದು. ಸಂಪೂರ್ಣ ಭಾವನಾತ್ಮಕ ಚಿತ್ರವಾಗಿ, ಅಷ್ಟಕ್ಕೇ ಸೀಮಿತಗೊಳಿಸಬಹುದಾದ ಸಾಧ್ಯತೆಯೂ ಇದಕ್ಕಿತ್ತು. ಆದರೆ ನಿರ್ದೇಶಕ ಜೂಡಿ ಮತ್ತು ಅಖಿಲ್ ಪಿ ಧರ್ಮಜನ್ ಅತ್ಯಂತ ಜಾಣ್ಮೆ ಮತ್ತು ಜತನದಿಂದ ಕಟ್ಟಿರುವ ಪರಿಣಾಮ, ಬದುಕಿನ ಹೋರಾಟದ ಚಿತ್ರವಾಗಿ ಭಾವನಾತ್ಮಕ ವರ್ಣಗಳಲ್ಲಿ ಮಿಂದೆದ್ದ ಮೇಲೂ ಅಪರಿಮಿತ ಜೀವನೋತ್ಸಾಹದ ವರ್ಣ ಪಡೆದುಕೊಳ್ಳುತ್ತದೆ. ಆದರೆ ಅದೂ ಸಹ ಅಲ್ಲಿಗೇ ನಿಲ್ಲುವುದಿಲ್ಲ. ಹಾಗಾಗಿ ಈ ಸಿನಿಮಾಕ್ಕೆ ಇದು ಇಂಥದ್ದು ಎಂದು ಚೌಕಟ್ಟು ವಿಧಿಸಿದ ಮೇಲೂ ಅದನ್ನು ಮೀರಿ ನಿಲ್ಲುತ್ತದೆ.
ಸಿನಿಮಾವನ್ನು ತ್ರಿಶ್ಶೂರ್, ಎರ್ನಾಕುಲಂ, ಕೊಟ್ಟಾಯಂ, ಆಲಪ್ಪುಜ, ಇಡುಕಕ್ಕಿ, ಕೊಲ್ಲಂ ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿತ್ತು. ಇವೆಲ್ಲವೂ 2018 ರಲ್ಲಿ ಪ್ರವಾಹಕ್ಕೆ ಗುರಿಯಾಗಿದ್ದ ಜಿಲ್ಲೆಗಳು. ಅದಲ್ಲದೇ ಹೈದರಾಬ್ ಹಾಗೂ ತಿರುಣೆಲ್ವೇಲಿಯಲ್ಲೂ ಚಿತ್ರೀಕರಣ ಮಾಡಲಾಗಿತ್ತು.
ಸಿನಿಮಾಕ್ಕೆ ಸಂಯೋಜಿಸಿದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಓಘಕ್ಕೆ ಹೇಳಿ ಮಾಡಿಸಿದಂತಿರುವುದು ಮತ್ತೊಂದು ಪೂರಕ ಅಂಶ. ಅಖಿಲ್ ಜಾರ್ಜ್‌ರ ಸಿನಿಮಾಟೋಗ್ರಫಿ ದಟ್ಟವಾದ ಸಿನಿಮೀಯ ಅನುಭವವನ್ನು ನಮ್ಮೊಳಗೇ ಉಳಿಸುತ್ತದೆ.
ಕಾವ್ಯ ಫಿಲಂ ಕಂಪೆನಿ ಇದನ್ನುನಿರ್ಮಿಸಿತ್ತು. ಸುಮಾರು 200 ಕೋಟಿ ರೂ. ಗಳಿಸಿ ಅತಿ ಹೆಚ್ಚು ಗಳಿಕೆಯ ಸಿನಿಮಾವಾಗಿ ದಾಖಲೆ ನಿರ್ಮಿಸಿತು. ಹಾಗೆಯೇ 2023 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳಲ್ಲಿಯೂ ಸ್ಥಾನ ಗಳಿಸಿತು.ಈಗ ಆಸ್ಕರ್ 2024 ರ ಸ್ಪರ್ಧೆಗೆ ಭಾರತದ ಅಧಿಕೃತ ಚಿತ್ರವಾಗಿ ಈ ಚಿತ್ರ ಭಾಗವಹಿಸಲಿದೆ.