Advertisement

ಹಾಕಿ: ಪಾಕ್‌ ವಿರುದ್ಧ ಡ್ರಾ ಸಮಾಧಾನ

06:30 AM Apr 08, 2018 | Team Udayavani |

ಗೋಲ್ಡ್‌ಕೋಸ್ಟ್‌: ವಿವಾದಾತ್ಮಕ ಪೆನಾಲ್ಟಿ ಕಾರ್ನರ್‌ ಒಂದರ ಮೂಲಕ ಕೊನೆಯ 7ನೇ ಸೆಕೆಂಡ್‌ನ‌ಲ್ಲಿ ಪಾಕಿಸ್ಥಾನಕ್ಕೆ ಗೋಲನ್ನು ಬಿಟ್ಟುಕೊಟ್ಟ ಭಾರತ, ಕಾಮನ್ವೆಲ್ತ್‌ ಹಾಕಿ ಲೀಗ್‌ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನ ವಿರುದ್ಧ 2-2 ಗೋಲುಗಳ ಡ್ರಾಗೆ ಸಮಾಧಾನಪಟ್ಟಿದೆ. ಇದರೊಂದಿಗೆ ಭಾರತ ತೀವ್ರ ನಿರಾಸೆಯಿಂದಲೇ ಗೇಮ್ಸ್‌ ಹಾಕಿ ಹೋರಾಟವನ್ನು ಆರಂಭಿಸಿದಂತಾಗಿದೆ.

Advertisement

ಪಂದ್ಯದ ಕೊನೆಯ ನಿಮಿಷದ ತನಕವೂ ಭಾರತದ 2-1 ಗೆಲುವು ಬಹುತೇಕ ಖಾತ್ರಿಯಾಗಿತ್ತು. ಆದರೆ ಇನ್ನೇನು ಅಂತಿಮ ಸೀಟಿ ಮೊಳಗಲು ಕೇವಲ 7 ಸೆಕೆಂಡ್‌ಗಳಿವೆ ಎನ್ನುವಾಗ ಪಾಕಿಗೆ ಪೆನಾಲ್ಟಿ ಕಾರ್ನರ್‌ ಒಂದು ದಕ್ಕಿತು. ಇದಕ್ಕೆ ಭಾರತ ಮೇಲ್ಮನವಿ ಸಲ್ಲಿಸಿತಾದರೂ ಯಶಸ್ವಿಯಾಗಲಿಲ್ಲ. ವಿಶ್ವದರ್ಜೆಯ ಗೋಲ್‌ ಕೀಪರ್‌ ಪಿ.ಆರ್‌. ಶ್ರೀಜೇಶ್‌ ಇದನ್ನು ತಡೆದು ಭಾರತಕ್ಕೆ ಗೆಲುವನ್ನು ತಂದುಕೊಡಬಹುದೆಂಬ ನಿರೀಕ್ಷೆ ದಟ್ಟವಾಗಿತ್ತು. ಆದರೆ ಇದು ಕ್ಷಣಾರ್ಧದಲ್ಲಿ ಹುಸಿಯಾಯಿತು. ಮುಬಾಶರ್‌ ಅಲಿ ಬಾರಿಸಿದ ಹೊಡೆತ ಶ್ರೀಜೇಶ್‌ ಅವರನ್ನು ವಂಚಿಸಿಯೇ ಬಿಟ್ಟಿತು. ಭಾರತದ ಗೆಲುವಿನ ಗೋಪುರ ಕುಸಿದು ಬಿತ್ತು.

ಪಾಕಿಸ್ಥಾನದ ಮೊದಲ ಗೋಲನ್ನು 38ನೇ ನಿಮಿಷದಲ್ಲಿ ಮೊಹಮ್ಮದ್‌ ಇರ್ಫಾನ್‌ ಜೂನಿಯರ್‌ ಹೊಡೆದಿದ್ದರು. ಇದಕ್ಕೂ ಮುನ್ನ ಭಾರತ ಮೊದಲೆರಡು ಕ್ವಾರ್ಟರ್‌ಗಳಲ್ಲೇ 2-0 ಗೋಲುಗಳ ಅಮೋಘ ಮುನ್ನಡೆ ಸಾಧಿಸಿತ್ತು. 19ನೇ ನಿಮಿಷದಲ್ಲಿ ದಿಲ್‌ಪ್ರೀತ್‌ ಸಿಂಗ್‌ ಹಾಗೂ 19ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಈ ಗೋಲುಗಳನ್ನು ಸಿಡಿಸಿದ್ದರು. ಆದರೆ ಇಲ್ಲಿಂದ ಮುಂದೆ ಭಾರತದ ಆಟ ನಡೆಯಲಿಲ್ಲ. ಪಾಕ್‌ ನಿಧಾನವಾಗಿ ಚೇತರಿಸಿಕೊಂಡು ಪಂದ್ಯಕ್ಕೆ ಮರಳಿತು.

ಡ್ರಾ ಫ‌ಲಿತಾಂಶದಿಂದ ನಿರಾಸೆ
“ಈ ನಿರ್ವಹಣೆಯಿಂದ ನಮಗೆ ಏನೂ ಸಮಾಧಾನವಾಗಿಲ್ಲ. ಈ ಪಂದ್ಯವನ್ನು ನಾವು ಗೆಲ್ಲಬೇಕಿತ್ತು. ಡ್ರಾ ಫ‌ಲಿತಾಂಶದಿಂದ ತೀವ್ರ ನಿರಾಸೆಯಾಗಿದೆ…’ ಎಂದು ಭಾರತ ತಂಡದ ಡಿಫೆಂಡರ್‌ ರೂಪಿಂದರ್‌ ಪಾಲ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.”ಪಾಕಿಸ್ಥಾನ ವಿರುದ್ಧ ಆಡುತ್ತಿರುವುದು ಇದೇ ಮೊದಲೇನಲ್ಲ. ನಾವು ಒತ್ತಡಕ್ಕೆ ಸಿಲುಕಿಲ್ಲ. ಕೇವಲ ನಮ್ಮ ಸಾಮರ್ಥ್ಯದತ್ತ ಗಮನ ನೀಡತೊಡಗಿದೆವು’ ಎಂದೂ ರೂಪಿಂದರ್‌ ಹೇಳಿದರು.

ಪಾಕಿಸ್ಥಾನ ಅಂತಿಮ 15 ನಿಮಿಷಗಳಲ್ಲಿ ಅಮೋಘ ಪ್ರದರ್ಶನ ನೀಡಿತು. ಸತತ 3 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆಯಿತು. ಆದರೂ ಇದರಲ್ಲಿ ಯಶಸ್ಸು ಸಿಗಲಿಲ್ಲ. ಹೊಡೆತಗಳೂ ದುರ್ಬಲವಾಗಿದ್ದವು, ಅಲ್ಲದೇ ಗೋಲಿ ಶ್ರೀಜೇಶ್‌ ಪ್ರಯತ್ನವೂ ಅಮೋಘ ಮಟ್ಟದಲ್ಲಿತ್ತು. ಹೀಗಾಗಿ ಕೊನೆಯ ನಿಮಿಷದ ಪೆನಾಲ್ಟಿ ಕಾರ್ನರ್‌ಗೂ ಶ್ರೀಜೇಶ್‌ ತಡೆಯೊಡ್ಡುತ್ತಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ ಇದು ಫ‌ಲಿಸಲಿಲ್ಲ.ಕೊನೆಯ ನಿಮಿಷಗಳಲ್ಲಿ ಭಾರತಕ್ಕೂ ಮುನ್ನಡೆಯ ಅವಕಾಶ ಲಭಿಸಿತ್ತು. ಆದರೆ ಮನ್‌ದೀಪ್‌ ಸಿಂಗ್‌ ಅವರ ಹೊಡೆತ ಗುರಿ ತಪ್ಪಿತು.

Advertisement

ಇದು ನನ್ನ ತಂಡದ ಆಟ ಆಗಿರಲಿಲ್ಲ:ಹಾಕಿ ಕೋಚ್‌ ಮರಿನ್‌ ತೀವ್ರ ನಿರಾಸೆ
ಪಾಕಿಸ್ಥಾನ ವಿರುದ್ಧ ಭಾರತ ತೋರ್ಪಡಿಸಿದ ಹಾಕಿ ಪ್ರದರ್ಶನದಿಂದ ಕೋಚ್‌ ಸೋರ್ಡ್‌ ಮರಿನ್‌ ತೀವ್ರ ಅಸಮಾಧಾನಗೊಂಡಿದ್ದಾರೆ. “ಇದು ನನ್ನ ತಂಡದ ಆಟ ಆಗಿರಲಿಲ್ಲ’ ಎಂದು ನಿರಾಸೆಯಿಂದ ಪ್ರತಿಕ್ರಿಯಿಸಿದ್ದಾರೆ.

“ಕಳೆದ 5 ತಿಂಗಳಿಂದ ನನ್ನಿಂದ ತರಬೇತಿ ಪಡೆದ ತಂಡದ ಆಟ ಇದಾಗಿರಲಿಲ್ಲ. ಇದನ್ನು ತೀರಾ ಕೆಳ ಮಟ್ಟದ ಆಟವೆಂದೇ ಹೇಳಬೇಕು. ಇದಕ್ಕೆ ಕಾರಣ ಎರಡು… ಪಾಕಿಸ್ಥಾನ ಎದುರಾಳಿ ಎಂಬುದು ಅಥವಾ ಕೂಟದ ಮೊದಲ ಪಂದ್ಯವಾಗಿರುವುದು. ಆದರೆ ಇನ್ನು ಈ ಪಂದ್ಯದ ಫ‌ಲಿತಾಂಶವನ್ನು ಬದಲಿಸಲಾಗದು. ನಾವಿನ್ನು ನಾಳಿನ ಪಂದ್ಯದತ್ತ ಗಮನ ನೀಡಬೇಕು’ ಎಂದು ಹಾಲೆಂಡ್‌ನ‌ವರಾದ ಸೋರ್ಡ್‌ ಹೇಳಿದರು. ರವಿವಾರ “ಬಿ’ ವಿಭಾಗದ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ವೇಲ್ಸ್‌ ವಿರುದ್ಧ ಸೆಣಸಲಿದೆ.

“ಇಂದಿನ ಪಂದ್ಯವನ್ನು ಗಮನಿಸಿದಾಗ ತಂಡದ ಮೂಲಭೂತ ಅಂಶಗಳಲ್ಲೇ ಸುಧಾರಣೆ ಆಗಬೇಕಾದ ಅಗತ್ಯ ಕಂಡುಬರುತ್ತದೆ. ನಾವಾಗಿ ಪಾಕಿಸ್ಥಾನಕ್ಕೆ ಹಾದಿ ಕಲ್ಪಿಸಿ ಕೊಟ್ಟೆವು. ಈ ಆಟದ ಕುರಿತಂತೆ ತಂಡದ ಎಲ್ಲ ಆಟಗಾರರ ಪ್ರತಿಕ್ರಿಯೆಯನ್ನು ನಾನು ಬಯಸುತ್ತೇನೆ. ನಾವು ಸ್ಪಷ್ಟವಾದ ಗೇಮ್‌ಪ್ಲ್ರಾನ್‌ ರೂಪಿಸಿದ್ದೆವು. ಆದರೆ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲರೂ ಎಡವಿದರು. ಆಟದಲ್ಲಿ ಶಿಸ್ತು ಕಂಡುಬರಲಿಲ್ಲ’ ಎಂದರು.

“ಆಸ್ಟ್ರೇಲಿಯದಂತೆ ಆಟದ ಗುಣಮಟ್ಟವನ್ನು ನಿರಂತರವಾಗಿ ಉಳಿಸಿಕೊಂಡು ಬರುವ ಅಗತ್ಯವಿದೆ. ಇಂದಿನ ಪ್ರದರ್ಶನಕ್ಕೆ ಕ್ಷಮೆ ಇಲ್ಲ. ಇದಕ್ಕಿಂತ ಉತ್ತಮವಾಗಿ ಆಡುವ ಸಾಮರ್ಥ್ಯ ನಮ್ಮವರಲ್ಲಿದೆ. ಪೆನಾಲ್ಟಿ ಕಾರ್ನರ್‌ ರಿವ್ಯೂ ನಿರ್ಧಾರಗಳೆಲ್ಲ ಮೈದಾನದಲ್ಲಿನ ಆಟಗಾರರಿಗೆ ಬಿಟ್ಟ ಸಂಗತಿ. ಆದರೆ ಒಂದು ಕೆಟ್ಟ ಪಂದ್ಯದ ಬಳಿಕ ನಮ್ಮ ಆಟದ ಶೈಲಿ ಬದಲಾಗಬೇಕೆಂಬುದನ್ನು ನಾನು ಒಪ್ಪಲಾರೆ…’ ಎಂದು ಸೋರ್ಡ್‌ ಮರಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next