ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ “ಧಾರವಾಡ ಸಾಹಿತ್ಯ ಸಂಭ್ರಮ-2017’ಕ್ಕೆ ಭಾನುವಾರ ತೆರೆ ಬಿತ್ತು.
ಸಮಾರೋಪ ಭಾಷಣ ಮಾಡಿದ ಸಾಹಿತಿ ಡಾ|ಗುರುಲಿಂಗ ಕಾಪಸೆ, ಅಭಿಮಾನಿಗಳಿಂದಲೇ ಸಂಶೋಧಕ ಡಾ|ಎಂ.ಎಂ.ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿ. ಸರ್ಕಾರದ ನೆರವಿಲ್ಲದೆ ಸಂಶೋಧನಾ ಕೇಂದ್ರ ಸ್ಥಾಪಿಸುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಸಂಭ್ರಮ ಸಂಘಟಕ ಡಾ|ಗಿರಡ್ಡಿ ಗೋವಿಂದರಾಜ್ ಮಾತನಾಡಿ, ಎಡ ಮತ್ತು ಬಲ ಸಿದ್ಧಾಂತಗಳ ಮಧ್ಯದಲ್ಲಿ ಒಂದು ಹೊಸ ವಿಚಾರದ ಕೇಂದ್ರ ಬಿಂದುವಿದ್ದು, ಅದನ್ನು ಎಲ್ಲರೂ ಒಪ್ಪಿಕೊಳ್ಳುವುದು ಅಗತ್ಯವಿದೆ. ಇದನ್ನು ಕೆಲವರು ಲಘುವಾಗಿ ಹೇಳುವುದರಿಂದ ವಿಚಾರದ ಗಂಭೀರತೆಯೇ ಕಳೆದು ಹೋಗುತ್ತದೆ. ಇಂತಹದು ಸಾಹಿತ್ಯ ಸಂಭ್ರಮದಲ್ಲಿ ಆಗಬಾರದು ಎಂದು ಪ್ರೊ|ಚಂಪಾ ಅವರನ್ನು ತರಾಟೆಗೆ ತೆಗೆದುಕೊಂಡರು.
2018ರ ಧಾರವಾಡ ಸಾಹಿತ್ಯ ಸಂಭ್ರಮ, ಜನವರಿ 19, 20, 21ರಂದು ಮೂರು ದಿನಗಳ ಕಾಲ ನಡೆಯಲಿದೆ. ಸಾಹಿತ್ಯಾಭಿಮಾನಿಗಳು ಈಗಿನಿಂದಲೇ ಈ ಮೂರು ದಿನಗಳನ್ನು ಕಾಯ್ದಿರಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಈಗಲೇ ದಿನಾಂಕ ನಿಗದಿಪಡಿಸಿದ್ದೇವೆ ಎಂದು ಅವರು ತಿಳಿಸಿದರು.
ಸಾಹಿತಿ ಡಾ|ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ಸಾಹಿತ್ಯ ಸಂಭ್ರಮದಲ್ಲಿ ಬರೀ ಹಿರಿಯ ಸಾಹಿತಿಗಳಿಗೆ ಮಾತ್ರ ಅವಕಾಶ ನೀಡಬಾರದು. ಬೇರೆ ಬೇರೆ ಕ್ಷೇತ್ರದಲ್ಲಿ ಭಾಗಿಯಾದ ಯುವಕರಿಗೂ ತಮ್ಮ ವಿಚಾರಗಳ ಮಂಡನೆಗೆ ಅವಕಾಶ ನೀಡಬೇಕು. ಅಂದಾಗ ಮಾತ್ರ ಇದು ಪರಿಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಾಡೋಜ ಚೆನ್ನವೀರ ಕಣವಿ ಉಪಸ್ಥಿತರಿದ್ದರು.