ಹುಬ್ಬಳ್ಳಿ: ಜಿಲ್ಲಾದ್ಯಂತ ಕಳೆದೆರಡು ದಿನಗಳ ಅವಧಿಯಲ್ಲಿ ಸುರಿದ ಭಾರೀ ಮಳೆಗೆ ಸುಮಾರು 201 ಮನೆಗಳು, 1044 ವಿದ್ಯುತ್ ಕಂಬಗಳು, 22 ವಿದ್ಯುತ್ ಪರಿವರ್ತಕಗಳು ಹಾನಿಯಾದ ಬಗ್ಗೆ ವರದಿಗಳು ಬಂದಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಅತಿವೃಷ್ಟಿಯಿಂದ ಬಾಧಿತವಾಗಿರುವ ಹಳೇಹುಬ್ಬಳ್ಳಿ ಆನಂದನಗರ ರಸ್ತೆಯ ಗಣೇಶ ಕಾಲೋನಿ, ನೇಕಾರ ನಗರ, ಟಿಪ್ಪು ನಗರ, ರಾಜನಾಲಾ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ, ಸ್ಥಳೀಯರಿಂದ ಅಹವಾಲುಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ 8 ತಾಲೂಕುಗಳಲ್ಲಿ ಅತ್ಯಧಿಕ ಮಳೆಯಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಸುಮಾರು 101 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಅಂದಾಜು 71 ಹೆಕ್ಟೇರ್ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಸುಮಾರು 96 ಲಕ್ಷ ರೂ. ಹಾನಿಯ ಅಂದಾಜು ಮಾಡಲಾಗಿದೆ. ರೈತ ಸಹಾಯವಾಣಿ ಪ್ರಾರಂಭಿಸಲಾಗಿದೆ. ಅತಿವೃಷ್ಟಿ ಸಂದರ್ಭದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಆಯುಕ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ನಗರ ಪ್ರದೇಶದಲ್ಲಿ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ತೊಂದರೆ ಎದುರಾಗಿದೆ. ಸೂಕ್ತ ಮಾರ್ಪಾಟು ಮಾಡಿಕೊಳ್ಳಲು ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಅವರು ನೇಕಾರ ನಗರ, ಟಿಪ್ಪುನಗರ, ರಾಜನಾಲಾ ಸುತ್ತಲಿನ ಪ್ರದೇಶದ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ತ್ವರಿತ ಪರಿಹಾರಕ್ಕೆ ಆಗ್ರಹ: ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಅತಿವೃಷ್ಟಿಗೆ ಈ ಬಾರಿ ಕುಂದಗೋಳ ತಾಲೂಕಿನಾದ್ಯಂತ ಅಧಿಕ ಹಾನಿಯಾಗಿದೆ. ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸಲು ಮನವಿ ಮಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ, ಎಸ್ಪಿ ಪಿ. ಕೃಷ್ಣಕಾಂತ, ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ| ಬಿ. ಗೋಪಾಲಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ಸಚಿವರಿಗೆ ಅತಿವೃಷ್ಟಿಯ ಮಾಹಿತಿ ನೀಡಿದರು.
ಉಪ ವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಡಾ| ಸಂತೋಷಕುಮಾರ ಬಿರಾದಾರ, ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ, ಅಲ್ತಾಫ ಕಿತ್ತೂರ, ಮೋಹನ ಅಸುಂಡಿ ಮೊದಲಾದವರಿದ್ದರು.
ಮಳೆಗಾಲದ ಪೂರ್ವದಲ್ಲಿ ತಯಾರಿಯಾಗಬೇಕು. ಯಾವುದೇ ವರ್ಷ ಮೇ ತಿಂಗಳಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಆದರೆ ಈ ಬಾರಿಯಾಗಿದೆ. ಇದು ಸರಕಾರಕ್ಕೆ ಒಂದು ಪಾಠವಾಗಲಿದೆ. ಎಲ್ಲಿ ಈ ರೀತಿ ಸಮಸ್ಯೆಯಾಗಿದೆಯೋ ಅಲ್ಲಿ ಬಗೆಹರಿಸುವುದರ ಜೊತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಸಣ್ಣ ಸಮಸ್ಯೆಗಳಿದ್ದರೂ ತಿದ್ದುಕೊಳ್ಳಬೇಕು. ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ನಿರ್ದೇಶಿಸಲಾಗುವುದು. –
ಹಾಲಪ್ಪ ಆಚಾರ್, ಜಿಲ್ಲಾ ಉಸ್ತುವಾರಿ ಸಚಿವ