ತೆಲಂಗಾಣ/ಹೈದರಾಬಾದ್: ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸ್ ವರಿಷ್ಠಾಧಿಕಾರಿ ವಿಶ್ವನಾಥ ಸಜ್ಜನರ್ ನೇತೃತ್ವದ ತಂಡ ಶುಕ್ರವಾರ ಬೆಳಗ್ಗೆ ಎನ್ ಕೌಂಟರ್ ನಲ್ಲಿ ಹತ್ಯೆಗೈದಿದೆ. ಏತನ್ಮಧ್ಯೆ ವಾರಂಗಲ್ ಮಾದರಿಯಂತೆಯೇ ತೆಲಂಗಾಣ ಎನ್ ಕೌಂಟರ್ ನಡೆಸಲಾಗಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಏನಿದು ವಾರಂಗಲ್ ಎನ್ ಕೌಂಟರ್ ಮಾದರಿ?
2008ರ ಡಿಸೆಂಬರ್ 10ರಂದು ಕಾಲೇಜಿನಿಂದ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿನಿಯರಿಬ್ಬರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿತ್ತು. ಈ ಇಬ್ಬರು ವಿದ್ಯಾರ್ಥಿನಿಯರಲ್ಲಿ 25 ವರ್ಷದ ಶ್ರೀನಿವಾಸ್, 22 ವರ್ಷದ ಸಂಜಯ್ ಹಾಗೂ 24 ವರ್ಷದ ಹರಿಕೃಷ್ಣಾ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದರೆ ಶ್ರೀನಿವಾಸ್ ಎಂಬ ಯುವಕನ ಪ್ರೇಮ ನಿವೇದನೆಯನ್ನು ವಿದ್ಯಾರ್ಥಿನಿ ತಿರಸ್ಕರಿಸಿದ್ದಳು.
ಈ ಘಟನೆ ನಡೆದು ಮೂರು ದಿನದ ನಂತರ ವಾರಂಗಲ್ ನ ಜನನಿಬಿಡ ಪ್ರದೇಶದಲ್ಲಿಯೇ ಇಬ್ಬರ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದರು. ಅಂದು ಆಂಧ್ರಪ್ರದೇಶ, ತೆಲಂಗಾಣದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು.
ತದನಂತರ ಮೂವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು. ಆರೋಪಿಗಳು ಮೊದಲು ನಮ್ಮ ಮೇಲೆ ದೇಶಿ ನಿರ್ಮಿತ ಪಿಸ್ತೂಲ್ ನಿಂದ ಹಲ್ಲೆ ದಾಳಿ ನಡೆಸಲು ಮುಂದಾದಾಗ ಪ್ರಾಣರಕ್ಷಣೆಗಾಗಿ ನಾವು ಎನ್ ಕೌಂಟರ್ ಮಾಡಬೇಕಾಯಿತು ಎಂದು ವಾರಂಗಲ್ ಪೊಲೀಸರು ಹೇಳಿಕೆ ನೀಡಿದ್ದರು.
ಒಂದು ದಶಕಗಳ ನಂತರ ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿಯೂ ನಾಲ್ವರು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು. ಈ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಂದ ಹಾಗೆ ಅಂದು ವಾರಂಗಲ್ ನಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಎನ್ ಕೌಂಟರ್ ಮಾಡಿದ್ದು ವಿಶ್ವನಾಥ್ ಸಜ್ಜನರ್ ಎಂದು ವರದಿ ತಿಳಿಸಿದೆ.