ರಫಾ: ಇಸ್ರೇಲ್ ದಾಳಿಗೆ 20,057 ಪ್ಯಾಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆಂದು ಗಾಜಾ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಇದು ಈ ಭಾಗದ ಯುದ್ಧಪೂರ್ವ ಜನಸಂಖ್ಯೆಯ ಶೇ.1ಕ್ಕೆ ಸಮ! ಇದಕ್ಕೂ ಮಿಗಿಲಾಗಿ ಯುದ್ಧದ ಕಾರಣ ಈ ಪ್ರದೇಶವನ್ನು ಶೇ.85 ಮಂದಿ ತೊರೆದಿದ್ದಾರೆ. ಮತ್ತೂಂದು ಕಡೆ ಇಸ್ರೇಲ್ ಇದೇ ತಿಂಗಳು 2000, ಒಟ್ಟಾರೆ 7000 ಹಮಾಸ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ. ಆದರೆ ಇದಕ್ಕೆ ಅದು ಯಾವುದೇ ಸಾಕ್ಷ್ಯವನ್ನು ನೀಡಿಲ್ಲ.
ಅ.7ರಂದು ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ 1,200 ಮಂದಿಯನ್ನು ಕೊಂದ ನಂತರ, ಇಸ್ರೇಲ್ ತೀವ್ರ ಪ್ರತಿದಾಳಿ ನಡೆಸಿದೆ. ವೈಮಾನಿಕ, ಭೂಮಿ, ಜಲಮಾರ್ಗದ ಮೂಲಕ ಆಕ್ರಮಣ ನಡೆಸಿರುವ ಇಸ್ರೇಲಿ ಯೋಧರು ಪ್ಯಾಲೆಸ್ತೀನ್‌ಗೆ ಮಾರಣಾಂತಿಕ ಹೊಡೆತ ನೀಡಿದೆ.
ಗಾಜಾ ನೀಡಿದ ಮಾಹಿತಿಯಲ್ಲಿ ನಾಗರಿಕರು ಮತ್ತು ಹಮಾಸ್ ಹೋರಾಟಗಾರರ ಬಗ್ಗೆ ಪ್ರತ್ಯೇಕ ವಿವರಗಳಿಲ್ಲ. ಈ ಹಿಂದೆ ಅದು ಕೊಲ್ಲಲ್ಪಟ್ಟ 3ರಲ್ಲಿ 2 ಪಟ್ಟು ಮಂದಿ ಮಹಿಳೆಯರು, ಅಪ್ರಾಪ್ತ ವಯಸ್ಕರು ಸೇರಿದ್ದಾರೆ, ಗಾಯಗೊಂಡವರ ಸಂಖ್ಯೆ 53,320 ಎಂದು ತಿಳಿಸಿತ್ತು.
11 ವಾರಗಳಿಂದ ಯುದ್ಧ: ಅ.7ರಂದು ಹಮಾಸ್ ಉಗ್ರರು ಇಸ್ರೇಲ್ ನೆಲಕ್ಕೆ ನುಗ್ಗಿ 1,200 ಮಂದಿಯನ್ನು ಕೊಂದು, 240 ಮಂದಿಯನ್ನು ಅಪಹರಣ ಮಾಡಿದರು. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ತೀನ್‌ನಲ್ಲಿ ಸಂಪೂರ್ಣವಾಗಿ ಹಮಾಸ್ ನೆಲೆಯನ್ನೇ ನಾಶಪಡಿಸುವುದಾಗಿ ಇಸ್ರೇಲ್ ಶಪಥ ಮಾಡಿದೆ. ಡಿ.1ಕ್ಕೆ ಒಂದು ವಾರದ ಕದನ ವಿರಾಮ ಮುಗಿದ ಮೇಲೆ ಮತ್ತೆ ದಾಳಿ ತೀವ್ರಗೊಳಿಸಿದ ಇಸ್ರೇಲ್, ಇದೇ ತಿಂಗಳಲ್ಲಿ 2000 ಉಗ್ರರನ್ನು ಕೊಂದಿದ್ದೇನೆಂದು ಹೇಳಿಕೊಂಡಿದೆ.