Advertisement

ಗೋಧ್ರಾ​​​​​​​: ಅಪರಾಧಿಗಳ ಗಲ್ಲು ಶಿಕ್ಷೆ ಜೀವಾವಧಿಗಿಳಿಕೆ

06:25 AM Oct 10, 2017 | |

ಅಹಮದಾಬಾದ್‌: 2002ರಲ್ಲಿ ದೇಶವನ್ನೇ ಬೆಚ್ಚಿಬೀಳಿ ಸಿದ್ದ ಗೋಧ್ರಾ ರೈಲು ದಹನ ಹಾಗೂ 59 ಕರಸೇವಕರ ಹತ್ಯೆ ಪ್ರಕರಣದ 11 ಅಪರಾಧಿಗಳಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಗುಜರಾತ್‌ ಹೈಕೋರ್ಟ್‌ ಜೀವಾವಧಿಗಿಳಿಸಿದೆ. ಅಲ್ಲದೆ, ಪ್ರಕರಣದ ಪ್ರಮುಖ ಸಂಚುಕೋರ ಮೌಲ್ವಿ ಉಮರ್‌ಜೀಯನ್ನು ಖುಲಾಸೆಗೊಳಿಸಿ ಎಸ್‌ಐಟಿ ಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.

Advertisement

ಪ್ರಕರಣ ಕುರಿತಂತೆ ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದ ನ್ಯಾ. ಅನಂತ್‌ ಎಸ್‌. ದವೆ ಹಾಗೂ ನ್ಯಾ. ಜಿ.ಆರ್‌. ಉಧ್ವಾನಿ ಅವರಿದ್ದ ಪೀಠ, “ಗೋಧ್ರಾ​​​​​​​ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಲೋಪವು ಎದ್ದು ಕಾಣುತ್ತಿದೆ’ ಎಂದು ಹೇಳಿತಲ್ಲದೆ, ಈ ಹಿಂದೆ ಇದೇ ಪ್ರಕರಣದಲ್ಲಿ ವಿಶೇಷ ತನಿಖಾ ದಳ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯ ಆದೇಶವನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ. ಆದರೆ, ಉಳಿದ 20 ಆರೋಪಿಗಳಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿದೆ. ಅಲ್ಲದೆ, ಸಾವಿಗೀಡಾದವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ. 

ಹೈಕೋರ್ಟ್‌ ತೀರ್ಪಿಗೆ ಕಾರಣವಾದ ಅಂಶಗಳು: ಗೋಧ್ರಾ​​​​​​​ ಹತ್ಯಾಕಾಂಡ ಘಟನೆಗೆ ಅಂದಿನ ರಾಜ್ಯ ಸರ್ಕಾರದ ಹದಗೆಟ್ಟ ಕಾನೂನು ವ್ಯವಸ್ಥೆಯ ಪರಿಸ್ಥಿತಿ ಕಾರಣವಾಗಿತ್ತು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಈ ಅಂಶವನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡು ದೋಷಿಗಳಿಗೆ ನೀಡಲಾಗಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿತು. 

ಇದೇ ವೇಳೆ, ಈ ಪ್ರಕರಣದಲ್ಲಿ ಈ ಹಿಂದೆ ತೀರ್ಪು ಪ್ರಕಟಿಸಿದ್ದ ಕೆಳ ಹಂತದ ನ್ಯಾಯಾಲಯವು ಘಟನೆಯಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ದುರ್ದೈವಿಗಳಿಗೆ ಯಾವುದೇ ಪರಿಹಾರ ನೀಡದಿರುವ ಅಂಶವನ್ನು ಪರಿಗಣಿಸಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಮುಂದಿನ 6 ವಾರಗಳೊಳಗೆ ಪರಿಹಾರ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿತು. 

“ಸುಪ್ರೀಂ’ಗೆ ಮೇಲ್ಮನವಿ ಸಲ್ಲಿಸಿ: ತೊಗಾಡಿಯಾ
ಅಪರಾಧಿಗಳ ಶಿಕ್ಷೆಯನ್ನು ಬದಲಿಸಿರುವ ಗುಜರಾತ್‌ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್‌ ಮುಖ್ಯಸ್ಥ ಪ್ರವೀಣ್‌ ತೊಗಾಡಿಯಾ ಅವರು ಗುಜರಾತ್‌ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತೀರ್ಪಿನ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ರಾಮ ಕರಸೇವಕರ ಬಲಿದಾನಕ್ಕೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

Advertisement

ಯಾವುದೀ ಪ್ರಕರಣ? 
2002ರ ಫೆಬ್ರವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಿಂದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕರಸೇವಕರಿದ್ದ ಎಸ್‌-6 ಬೋಗಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಗೋಧ್ರಾ​​​​​​​ ರೈಲು ನಿಲ್ದಾಣಕ್ಕೆ ರೈಲು ಆಗಮಿಸಿದಾಗ ಈ ಘಟನೆ ನಡೆದಿತ್ತು. ಅದರಲ್ಲಿ, 59 ಕರಸೇವಕರು ಸಜೀವ ದಹನವಾಗಿದ್ದರು. ಈ ಘಟನೆಯು ದೇಶಾದ್ಯಂತ  ಕೋಮು ಗಲಭೆಗೆ ನಾಂದಿ ಹಾಡಿತ್ತು. ವಿವಿಧೆಡೆ ನಡೆದ ಕೋಮು ಗಲಭೆಯಲ್ಲಿ ಸುಮಾರು 1,200 ಮಂದಿ ಮೃತರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next