ಆಳಂದ: ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಹಾಳಾದ ತೊಗರಿ ಸೇರಿ ಇನ್ನಿತರ ಬೆಳೆಗಳಿಗೆ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಅಖೀಲ ಭಾರತ ಕಿಸಾನಸಭಾ ಜಿಲ್ಲಾ ಘಟಕದ ಮುಖಂಡರು ಒತ್ತಾಯಿಸಿದರು.
ಈ ಕುರಿತು ಕಲಬುರಗಿಯಲ್ಲಿ ಇತ್ತೀಚೆಗೆ ಸಚಿವ ಮುರುಗೇಶ ನಿರಾಣಿಗೆ ಮನವಿ ಸಲ್ಲಿಸಿದ ಮುಖಂಡರು, ಮಳೆಯಿಂದ ತಾಲೂಕಿನಲ್ಲಿ ರಸ್ತೆಗಳು ಕೊಚ್ಚಿ ಹಾಳಾಗಿವೆ. ಕೂಡಲೇ ಕಾಮಗಾರಿ ಕೈಗೊಂಡು ರಸ್ತೆ ದುರಸ್ತಿ ಮಾಡಬೇಕು. ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಕೋರಿದರು.
ಪದೇ ಪದೇ ವಿದ್ಯುತ್ ಟ್ರಾನ್ಸಫಾರ್ಂ ಸುಟ್ಟು ಹಾಳಾಗಿದ್ದರಿಂದ ತೋಟಗಾರಿಕೆ ಬೆಳೆ ಬೆಳೆಯಲು ಸಾಧ್ಯವಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಪರಿವರ್ತಕಗಳನ್ನು ಹೆಚ್ಚಿಸಿ ಎಲ್ಲ ರೈತರ ಹೊಲಗಲಿಗೂ ವಿದ್ಯುತ ಸಂಪರ್ಕ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮುಖಂಡರಿಂದ ಮನವಿ ಸ್ವೀಕರಿಸಿದ ಸಚಿವರು, ಬೆಳೆ ಪರಿಹಾರ ನೀಡುವ ಕುರಿತು ಅಧಿವೇಶನದಲ್ಲಿ ಚರ್ಚಿಸಿ, ನಿರ್ಧಾರಕ್ಕೆ ಬರಲಾಗುವುದು. ವಿದ್ಯುತ್ ಪೂರೈಕೆ ಕುರಿತು ಜೆಸ್ಕಾಂ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ತಾಲೂಕು ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ, ಅಧ್ಯಕ್ಷ ಚಂದ್ರಕಾಂತ ಖೋಬ್ರೆ, ಭೀಮರಾಯ ಅರಳಗುಂಡಗಿ, ಮಲ್ಲಿಕಾರ್ಜುನ ಕೆಲ್ಲೂರ, ಶರಣಬಸಪ್ಪ ಗಣಜಲಖೇಡ ಮತ್ತಿತರರ ಮುಖಂಡರು ಈ ಸಂದರ್ಭದಲ್ಲಿ ಇದ್ದರು.