ಕಾಳಗಿ: ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ಬರಗಾಲದ ಹೊಡೆತಕ್ಕೆ ತತ್ತರಿಸಿರುವ ತಾಲೂಕಿನ ರೈತರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಪ್ರತಿ ಎಕರೆಗೆ 20 ಸಾವಿರ ರೂ. ಬರ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರೈತ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿದ ರೈತ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳಿಗೆ ರೈತ ಸಮುದಾಯದ ಕುರಿತಂತೆ ನಿಜವಾದ ಕಾಳಜಿ ಇಲ್ಲ. ರೈತರ ಸಮಸ್ಯೆಗಳ ಕುರಿತು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಕೇವಲ ಮೊಸಳೆ ಕಣ್ಣೀರು ಹಾಕುತ್ತ ರೈತ ಸಮುದಾಯವನ್ನು ಮರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬರೆದಿರುವ ಮನವಿ ಪತ್ರ ಓದಿದ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಈ ವರ್ಷ ಅನಾವೃಷ್ಟಿಯಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವ ತೊಗರಿ ಖರೀದಿಗಾಗಿ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದರು.
ಡಾ| ಎಂ.ಎಸ್. ಸ್ವಾಮಿನಾಥನ್ ಆಯೋಗ ವರದಿ ಪ್ರಕಾರ ತೊಗರಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು. ಆಮದು ಮಾಡಿಕೊಳ್ಳುವ ತೊಗರಿಗೆ ಕನಿಷ್ಠ ಶೇ.30 ತೆರಿಗೆ ವಿಧಿಸಬೇಕು. ರೈತರ ಸಾಲಮನ್ನಾ ಮಾಡಿ ಋಣಮುಕ್ತ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡರಾದ ಗುರುನಂದೇಶ ಕೋಣಿನ್, ಗೌರಿಶಂಕರ ಕಿಣ್ಣಿ, ನಾಗರಾಜ ಏರಿ, ಶಿವಾನಂದ ಪಾಟೀಲ, ವೀರಾರೆಡ್ಡಿ ಕಪ್ಪರಗಿ, ಮಲ್ಲು ಮರಗುತ್ತಿ, ಜಗನ್ನಾಥ ಕಾಳಗಿ, ಸಿದ್ದಪ್ಪ ಕಲಶೆಟ್ಟಿ, ರೇವಯ್ಯಸ್ವಾಮಿ ಸಾಲಿ, ಪರಮೆಶ್ವರ ಕಟ್ಟಿಮನಿ, ಮಲ್ಲಿಕಾರ್ಜುನ ಗಂವ್ಹಾರ ಮತ್ತಿತರರು ಇದ್ದರು.