ಮಂಡ್ಯ: ಕಾಂಗ್ರೆಸ್ ಸರಕಾರದ 2 ಸಾವಿರ ರೂ. ಬಸ್ ಉಚಿತ ಪ್ರಯಾಣಕ್ಕೆ ಮರುಳಾಗಬೇಡಿ. ಮಹಿಳೆಯರಿಗೆ ಎರಡು ಸಾವಿರ ಕೊಟ್ಟು, ಗಂಡಸರ ಜೇಬಿಗೆ ಕತ್ತರಿ ಹಾಕಿದೆ. ಇದೊಂದು ಪಿಕ್ ಪ್ಯಾಕೆಟ್ ಸರಕಾರ ಎಂದು ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಬಹಿರಂಗ ಪ್ರಚಾರದ ಕೊನೆಯ ದಿನ ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದ ಕುಮಾರಸ್ವಾಮಿ, ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಈ ಚುಣಾವಣೆ ಹಣ ಹಾಗೂ ಗುಣದ ನಡುವೆ ನಡೆಯುತ್ತಿದೆ. ರೈತರಿಗಾಗಿ ಸಾಲಮನ್ನಾ ಮಾಡಿದ್ದೇನೆ. ಕಾರ್ಖಾನೆ ಸ್ಥಾಪಿಸಲು ನೂರು ಕೋಟಿ ರೂ. ಮೀಸಲಿಟ್ಟೆ. ಆದರೆ, ನಮಗೆ ಕೆಲಸ ಮಾಡಲು ಬಿಡಲಿಲ್ಲ. ಕಾಂಗ್ರೆಸ್‌ನವರು ತೊಂದರೆ ಕೊಟ್ಟರು ಎಂದು ಆರೋಪಿಸಿದರು.
ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ 72 ಅಡಿ ನೀರಿದ್ದಾಗಲೂ ನಾಲೆಗಳಿಗೆ ನೀರು ಹರಿಸಿದ್ದೇವೆ. ಈಗ 98 ಅಡಿ ನೀರಿದ್ದರೂ ಬಿಡುತ್ತಿಲ್ಲ. ಭತ್ತ, ಕಬ್ಬು ಬೆಳೆಯದಂತೆ ಜಿಲ್ಲಾ ಉಸ್ತುವಾರಿ ಸಚಿವ ಹೇಳುತ್ತಾರೆ. ನಮ್ಮ ಕಾಲದಲ್ಲಿ ಎರಡು ಬೆಳೆಗೆ ನೀರು ಹರಿಸಿದ್ದೇವೆ ಎಂದರು.
ಮೇಕೆದಾಟು ಮಾಡುತ್ತೇವೆ ಎಂದು ಪಾದಯಾತ್ರೆ ಮಾಡಿದರು. ಅನುಮತಿ ಕೊಡಿಸಿ ಎಂದು ನಮ್ಮನ್ನು ಕೇಳುತ್ತಿದ್ದೀರಿ. ನೀವು ಮೊದಲು ಡಿಎಂಕೆ ಜೊತೆ ಮಾತನಾಡಿ ಒಪ್ಪಿಸಿ, ಕನ್ನಡಿಗರು, ರೈತರ ಬಗ್ಗೆ ಕಾಳಜಿ ಇದ್ದರೆ, ತಮಿಳುನಾಡು ಸಿಎಂ ಜೊತೆ ಮಾತನಾಡಿ, ಅವರು ಪ್ರಣಾಳಿಕೆಯಲ್ಲಿರುವುದನ್ನು ವಾಪಸ್ ತೆಗೆಸಿ, ನಾನು ಕೇಂದ್ರದಿಂದ ಅನುಮತಿ ಕೊಡಿಸಿ, ಅನುದಾನವನ್ನು ಬಿಡುಗಡೆ ಮಾಡಿಸಿಕೊಡುತ್ತೇನೆ ಎಂದು ಹೇಳಿದರು.