Advertisement

ಅರಣ್ಯ ಸಂಪತ್ತು ವೃದ್ಧಿಗೆ 2,000 ಬೀಜದುಂಡೆ ಸಿದ್ಧ

10:46 PM Jun 04, 2019 | mahesh |

ಪುತ್ತೂರು: ಹಸಿ ಮಣ್ಣನ್ನು ಚೆಂಡಿನಾಕೃತಿಯಲ್ಲಿ ಸಿದ್ಧಗೊಳಿಸಿ ಅದರ ಒಳಗೆ ಬೀಜವಿಟ್ಟು ಮಳೆಗಾಲದ ಆರಂಭದಲ್ಲಿ ಅರಣ್ಯದೊಳಗೆ ಎಸೆದು ಹಸಿರು ಸಂಪತ್ತು ಹೆಚ್ಚಿಸುವ ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗೆ ಈ ಬಾರಿ ಪುತ್ತೂರು ವ್ಯಾಪ್ತಿಯಲ್ಲಿ 2 ಸಾವಿರ ಬೀಜದುಂಡೆಗಳು ಸಿದ್ಧಗೊಂಡಿವೆ.

Advertisement

ನೀರಿಗಾಗಿ ಅರಣ್ಯ ಉಳಿಸಿ, ಅರಣ್ಯ ಬೆಳೆಸಲು ಬೀಜದುಂಡೆ ಬಳಸಿ ಧ್ಯೇಯ ವಾಕ್ಯದ ಅಭಿಯಾನವನ್ನು ಅರಣ್ಯ ಇಲಾಖೆ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದೆ. ಎಲ್ಲ ತಾಲೂಕುಗಳಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಈ ಅಭಿಯಾನವನ್ನು ಮುನ್ನಡೆಸುತ್ತಿದೆ.

ತಯಾರಿ ಹೀಗೆ…
ಹಸಿ ಮಣ್ಣು, ಸೆಗಣಿ, ಗಂಜಲ ಮಿಶ್ರಣದ ಉಂಡೆ ತಯಾರಿಸಲಾಗುತ್ತದೆ. ಅದರೊಳಗೆ ಬೀಜವನ್ನು ಇರಿಸಲಾಗುತ್ತದೆ. ಮಳೆ ಆರಂಭವಾದ ಕೂಡಲೇ ಸಾರ್ವಜನಿಕರ ಸಹಕಾರದೊಂದಿಗೆ ಅದನ್ನು ಅರಣ್ಯ ಪ್ರದೇಶಗಳಲ್ಲಿ ಎಸೆಯಲಾ ಗುತ್ತದೆ. ಈ ಬಾರಿ ವಿವಿಧ ವಿದ್ಯಾಸಂಸ್ಥೆಗಳ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ಸೇರಿಸಿಕೊಳ್ಳಲು ನಿರ್ದೇಶನ ಬಂದಿದೆ. ವನ ಸಂಪತ್ತು ಹೆಚ್ಚಳದಿಂದ ಮಳೆ ಸಕಾಲದಲ್ಲಿ ಸುರಿದು ನೀರಿನ ಅಭಾವವನ್ನು ತಪ್ಪಿಸುವ ಕಾಳಜಿ ಈ ಅಭಿಯಾನದಲ್ಲಿದೆ.

ಪುತ್ತೂರು ವಲಯ ವ್ಯಾಪ್ತಿಯ ಬಲ್ಲೇರಿ, ಆನೆಗುಂಡಿ, ಬಂಟಾಜೆ ಅರಣ್ಯ, ಕನ್ನಡ್ಕ, ಕಳೆಂಜಮಲೆ, ನರಿಮೊಗರು, ಕನಕ ಮಜಲು, ಕಣಿಯಾರು ಮಲೆಗಳಲ್ಲಿ ಈ ಬೀಜದುಂಡೆಗಳನ್ನು ಎಸೆಯಲು ನಿರ್ಧರಿಸಲಾಗಿದೆ. ಆದರೆ ಬೀಜ ದುಂಡೆ ಮೊಳಕೆ ಬರಲು ಒಂದಷ್ಟು ಮಳೆಯ ಆವಶ್ಯಕತೆಯೂ ಇದೆ. ಈ ಕಾರಣದಿಂದ ಬೀಜದುಂಡೆ ಎಸೆಯಲು ವಿಳಂಬವಾಗಬಹುದು.

ಬೀಜದುಂಡೆ ಸಿದ್ಧ
ಮುಕ್ವೆ ನರ್ಸರಿಯಲ್ಲಿ ಸಾಮಾಜಿಕ ಅರಣ್ಯ ವಲಯ ಹಾಗೂ ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಬೀಜದುಂಡೆ ತಯಾರಿಸುವ ಕಾರ್ಯ ನಡೆಸಲಾಗಿದೆ. ಹಲಸು, ಮಾವು, ಪೇರಳೆ, ಪುನರ್ಪುಳಿ, ಬೇಂಗ, ಈಂದ್‌, ರೆಂಜೆ, ರಾಮಫಲ ಹೀಗೆ 8 ಬಗೆಯ ಮರಗಳ ಸುಮಾರು 2,000 ಬೀಜದುಂಡೆಗಳನ್ನು ತಯಾರಿಸಲಾಗಿದೆ.

Advertisement

ಪುತ್ತೂರು ವಲಯ ಸಾಮಾಜಿಕ ಅರಣ್ಯ ಅರಣ್ಯಾಧಿಕಾರಿ ವಿದ್ಯಾರಾಣಿ ಪಿ.ಕೆ., ಜಿಲ್ಲಾ ಸಂಘಟಕ ಭರತ್‌ರಾಜ್‌ ಕೆ., ಪುತ್ತೂರು ಸ್ಥಳೀಯ ಸಂಸ್ಥೆಯ ಜತೆ ಕಾರ್ಯದರ್ಶಿ ಸುನೀತಾ, ಮುಕ್ವೆ ಸರಕಾರಿ ಹಿರಿಯ ಪ್ರಾ. ಶಾಲೆಯ ಮುಖ್ಯ ಗುರು ಚರಣ್‌ಕುಮಾರ್‌, ಗೈಡ್‌ ಶಿಕ್ಷಕಿ ವೇದಾವತಿ, ಮೇಬಲ್‌ ಡಿ’ಸೋಜಾ, ಸಂತ ಫಿಲೋಮಿನಾ ಕಾಲೇಜಿನ ರೋವರ್‌ ವಿದ್ಯಾರ್ಥಿ ಚಂದ್ರಾಕ್ಷ ಹಾಗೂ ರಾಮಕೃಷ್ಣ ಪ್ರೌಢ ಶಾಲೆ ಮತ್ತು ಮುಕ್ವೆ ಸ.ಉ.ಹಿ.ಪ್ರಾ. ಶಾಲೆಯ ಒಟ್ಟು 50 ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಭಾಗಿಯಾಗಿದ್ದಾರೆ. ಆದರೆ ಬೀಜ ದುಂಡೆ ಮೊಳಕೆ ಬರಲು ಒಂದಷ್ಟು ಮಳೆಯ ಆವಶ್ಯಕತೆಯೂ ಇದೆ. ಈ ಕಾರಣದಿಂದ ಬೀಜದುಂಡೆ ಎಸೆಯಲು ವಿಳಂಬವಾಗಬಹುದು.

ಮಳೆ ಬಂದ ಮೇಲೆ
ಪುತ್ತೂರು ವಲಯದಲ್ಲಿ ಸುಮಾರು 2 ಸಾವಿರ ಬೀಜದುಂಡೆ ಗಳನ್ನು ಮುಕ್ವೆ ನರ್ಸರಿಯಲ್ಲಿ ಸಿದ್ಧಪಡಿ ಸಲಾಗಿದೆ. ಪರಿಸರ ದಿನಾಚರಣೆಯ ಬಳಿಕ, ಒಂದಷ್ಟು ಮಳೆ ಸುರಿಯಲು ಆರಂಭಿಸಿದ ಮೇಲೆ ವಿದ್ಯಾರ್ಥಿಗಳನ್ನೂ ಬಳಸಿಕೊಂಡು ಅರಣ್ಯ ಪ್ರದೇಶ ಗಳಲ್ಲಿ ಬೀಜದುಂಡೆಗಳನ್ನು ಎಸೆಯಲಾಗುತ್ತದೆ.
– ವಿದ್ಯಾರಾಣಿ ಪಿ.ಕೆ. ಪುತ್ತೂರು ವಲಯ ಸಾಮಾಜಿಕ ಅರಣ್ಯ ಅರಣ್ಯಾಧಿಕಾರಿ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next