ಚಿಂತಾಮಣಿ: ನಮ್ಮ ಹತ್ತಿರ 2,000 ರೂ. ಮುಖ ಬೆಲೆಯ ನೋಟುಗಳು ಹೆಚ್ಚಾಗಿವೆ. ನೀವು 10 ಲಕ್ಷ ಕೊಟ್ಟರೆ ನಾವು ಹೆಚ್ಚುವರಿಯಾಗಿ 2.50 ಲಕ್ಷ ಸೇರಿ 12.50 ಲಕ್ಷ ರೂ. ಹಣ ನಿಮಗೆ ನೀಡುವುದಾಗಿ ನಂಬಿಸಿ ಆಂಧ್ರ ಮೂಲದ ಬಟ್ಟೆ ವ್ಯಾಪಾರಿಯಿಂದ 10 ಲಕ್ಷ ಪಡೆದು ವಂಚಿಸಿರುವ ಘಟನೆ ನಡೆದಿದೆ.
ಅಸಾಮಿಗಳಿಂದ ವಂಚನೆಗೆ ಒಳಗಾದ ಆಂಧ್ರದ ಚಿತ್ತೂರು ಜಿಲ್ಲೆಯ ಪುಗಂನೂರು ಪಟ್ಟಣದ ಪಿರ್ದೋಸ್ ಅಹಮ್ಮದ್ ಬಿನ್ ಲೇಟ್ ಅಬ್ದುಲ್ ಕರೀಂ (36) ಎಂದು ಗುರುತಿಸಲಾಗಿದ್ದು, ಮೋಸ ಮಾಡಿದ ವ್ಯಕಿಗಳನ್ನು ಪಿರ್ಧೋಸ್ ಜೊತೆಗೆ ಬಟ್ಟೆ ವ್ಯಾಪಾರ ನಡೆಸುವ ಸ್ನೇಹಿತರಾದ ರಫೀಕ್, ಸಲೀಂ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಿವಾಸಿ ಬಿಲಾಲ್ ಪಾಷ, ಶಬ್ಬೀರ್ ಹಾಗೂ ಚಿಂತಾಮಣಿಯ ನರಸಿಂಹ ಎಂದು ಗುರುತಿಸಲಾಗಿದೆ.
ಆಗಿದ್ದೇನು?: ಸೆಪ್ಪೆಂಬರ್ ತಿಂಗಳಿಂದ 2000 ನೋಟ್ ಬ್ಯಾನ್ ಆಗಲಿದ್ದು ಹೊಸಕೋಟೆ ಬಿಲಾಲ್‌ಪಾಷ ಎಂಬುವರ ಬಳಿ 2,000 ಮುಖ ಬೆಲೆ ನೋಟುಗಳು ಹೆಚ್ಚಿವೆ, ಅವರಿಗೆ 10 ಲಕ್ಷ ಕೊಟ್ಟರೆ ಅದಕ್ಕೆ 2.50 ಲಕ್ಷ ಸೇರಿಸಿ ನಿಮಗೆ 12.50 ಲಕ್ಷ ಕೊಡುತಾರೆಂದು ನಂಬಿಸಿ ಪಿರ್ಧೋಸ್ ಜೊತೆ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ ಸಲೀಂ ಹಾಗೂ ರಫೀಕ್ ಎಂಬುವರು ನಂಬಿಸಿ ಹಣದ ಸಮೇತ ಪಿರ್ದೋಸ್‌ರನ್ನು ಚಿಂತಾಮಣಿಗೆ ಕರೆಸಿ ಅಲ್ಲಿಂದ ಕೈವಾರಕ್ಕೆ ಕಾರಿನಲ್ಲಿ ಹೋಗಿದ್ದಾಗ ಪಿರ್ಧೋಸ್ ಬಳಿ ಇದ್ದ 10 ಲಕ್ಷ ರೂ. ನಗದನ್ನು ನರಸಿಂಹ ಎಂಬುವರು ಪಡೆದು ಅವರಿಗೆ ಮತ್ತೂಂದು ಬ್ಯಾಗ್ ನೀಡಿದ್ದಾರೆ. ಪಿರ್ಧೋಸ್ ಬಳಿ 10 ಲಕ್ಷ ರು ಪಡೆದ ನರಸಿಂಹ ಅಲ್ಲಿಂದ ತಕ್ಷಣ ಹೊರಟ ಕೂಡಲೇ ಪಿರ್ಧೋಸ್ ತನಗೆ ಕೊಟ್ಟ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಕೇವಲ 2,000 ನೋಟುಗಳು 5 ಇದ್ದು ಅದರ ಕೆಳಗೆ ಬರೀ ಬ್ಯಾಸ್‌ಪೇಪರ್ ಹಾಗೂ ದೇವರ ಪೋಟಗಳು ಇರುವುದು ಕಂಡು ಬಂದಿದೆ.
ಪೊಲೀಸರಿಗೆ ದೂರು:
ಆಂಧ್ರದ ಪುಂಗನೂರಿನ ಪಿರ್ಧೋಸ್ ತನಗೆ ಆದ ಮೋಸದ ಬಗ್ಗೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ ತನ್ನ ಸ್ನೇಹಿತರಾದ ರಫೀಕ್, ಸಲೀಂ, ಹೊಸಕೋಟೆಯ ಬಿಲಾಲ್ ಪಾಷ ಹಾಗೂ ಶಬ್ಬೀರ್, ನರಸಿಂಹ ಸೇರಿ 5 ಮಂದಿ ವಿರುದ್ಧ ದೂರು ನೀಡಿದ್ದಾರೆ.