ಮೀರತ್(ಯುಪಿ):ಉತ್ತರಪ್ರದೇಶ ಬಿಜ್ನೋರ್ ನಲ್ಲಿರುವ ಸುಮಾರು 2 ಸಾವಿರ ಮದರಸಾ ಮತ್ತು ಮಸೀದಿಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿರುವುದಾಗಿ ವರದಿ ಮಾಡಿದೆ.
ಇದಕ್ಕೆ ಕಾರಣ ದೆಹಲಿ ಮತ್ತು ಉತ್ತರಪ್ರದೇಶವನ್ನು ಗುರಿಯಾಗಿರಿಸಿಕೊಂಡು ಸಂಚು ನಡೆಸಿದ್ದ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಒಬ್ಬ ಸ್ಥಳೀಯ ಮಸೀದಿಯ ಇಮಾಮ್ ಆಗಿದ್ದ. ಉಳಿದವರನ್ನು ವಿಚಾರಣೆ ನಡೆಸಿ ಪೊಲೀಸರು ಶುಕ್ರವಾರ ಬಿಡುಗಡೆ ಮಾಡಿದ್ದರು.
ಇತ್ತೀಚೆಗೆ ಬಂಧಿಸಲ್ಪಟ್ಟವರಲ್ಲಿ ಬಹುತೇಕರು ವಿವಿಧ ಮದರಸಾಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಉತ್ತರಪ್ರದೇಶದಲ್ಲಿ ಇರುವ ಮದರಸಾ ಮತ್ತು ಮಸೀದಿಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ನಿರ್ಧರಿಸಿರುವುದಾಗಿ ವರದಿ ವಿವರಿಸಿದೆ.
ಅಲ್ಪಸಂಖ್ಯಾತ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ 500 ಮದರಸಾಗಳಲ್ಲಿ 15 ಪದವಿ ಹಂತದವರೆಗೆ ಇದ್ದು, 55 ಹೈಸ್ಕೂಲ್ ವರೆಗಿನ ಶಿಕ್ಷಣ ನೀಡುತ್ತಿದೆ. ಏತನ್ಮಧ್ಯೆ ಸುಮಾರು 1500 ಮಸೀದಿಗಳು ಪೊಲೀಸರ ಕಣ್ಗಾವಲಿನಲ್ಲಿ ಇಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಜ್ನೋರ್ ಹಾಗೂ ನೆರೆಯ ಪ್ರದೇಶಗಳ ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸ್ ಹಾಗೂ ಭದ್ರತಾ ಏಜೆನ್ಸಿಗಳು ಬಿಗಿ ಪಹರೆ ನಡೆಸುತ್ತಿರುವುದಾಗಿ ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಹಾನಿ ತಿಳಿಸಿದ್ದಾರೆ.