Advertisement

ಲುಂಗಿ ಧರಿಸಿ ಟ್ರಕ್‌ ಚಲಾಯಿಸಿದರೆ 2,000 ರೂ. ದಂಡ!

09:26 AM Sep 12, 2019 | Team Udayavani |

ಲಕ್ನೋ/ಗಾಂಧಿನಗರ: ಹೊಸ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ ಜಾರಿಯಾದ ಬಳಿಕ ವಾಹನ ಸವಾರರು ಭಾರೀ ಮೊತ್ತದ ದಂಡ ತೆರುತ್ತಿರುವಂಥ ಸುದ್ದಿಯನ್ನು ಪ್ರತೀ ದಿನ ಓದುತ್ತಿದ್ದೀರಿ. ಈಗ ಇದಕ್ಕೆ ‘ಲುಂಗಿ’ಯೂ ಸೇರ್ಪಡೆಯಾಗಿದೆ.

Advertisement

ಹೊಸ ಕಾನೂನಿನ ಪ್ರಕಾರ ಉತ್ತರಪ್ರದೇಶದಲ್ಲಿ ಲುಂಗಿ (ಪಂಚೆ) ಧರಿಸಿಕೊಂಡು ವಾಹನ ಚಲಾಯಿಸಿದರೆ ಬರೋಬ್ಬರಿ 2 ಸಾವಿರ ರೂ. ದಂಡ ತೆರಬೇಕಾಗುತ್ತದೆ.

ಲುಂಗಿ-ಬನಿಯನ್‌ಗೆ ಬ್ರೇಕ್‌

ಲುಂಗಿ ಅಥವಾ ಬನಿಯನ್‌ ಧರಿಸಿ ಟ್ರಕ್‌ ಚಲಾಯಿಸುವಂಥ ಚಾಲಕರಿಗೆ ಉ.ಪ್ರ. ಪೊಲೀಸರು 2,000 ರೂ. ದಂಡ ವಿಧಿಸಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲ, ಸ್ಲಿಪ್ಪರ್‌ ಮಾದರಿಯ ಚಪ್ಪಲಿಗಳನ್ನು ಧರಿಸಿ ಗೇರ್‌ನ ದ್ವಿಚಕ್ರ ವಾಹನ ಚಲಾಯಿಸುವವರಿಗೂ ಹೊಸ ನಿಯಮದಂತೆ 1,000 ರೂ. ದಂಡ ವಿಧಿಸಲಾಗುತ್ತಿದೆ.

ಹೊಸದೇನೂ ಅಲ್ಲ

Advertisement

ಲುಂಗಿ ಧರಿಸುವುದು ತಪ್ಪು ಎನ್ನುವುದು ಹೊಸದಾಗಿ ಬಂದ ನಿಯಮವಲ್ಲ. ಹಲವು ದಶಕಗಳಿಂದ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆಯಲ್ಲಿಯೇ ಈ ಅಂಶವಿದೆ. ಆದರೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಲ್ಲದೆ, ಅದಕ್ಕೆ ಅಂಥ ಭಾರೀ ದಂಡವೂ ಇರಲಿಲ್ಲ. ಆದರೆ ಈಗ ಹೊಸ ಟ್ರಾಫಿಕ್‌ ನಿಯಮ ಜಾರಿಯಾದ ಬಳಿಕ ವಸ್ತ್ರಸಂಹಿತೆಯನ್ನು ಶಿಸ್ತುಬದ್ಧವಾಗಿ ಜಾರಿ ಮಾಡಲು ನಿರ್ಧರಿಸಲಾಗಿದ್ದು, ದಂಡದ ಮೊತ್ತವನ್ನೂ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊತ್ತ ಇಳಿಸಿದ ಗುಜರಾತ್‌ ಸರಕಾರ

ಇನ್ನೊಂದೆಡೆ, ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ ಸರಕಾರವು ಮೋಟಾರು ವಾಹನ ಕಾಯ್ದೆಯನ್ವಯ ವಿಧಿಸುವ ದಂಡದ ಮೊತ್ತದಲ್ಲಿ ಗಣನೀಯ ಇಳಿಕೆ ಮಾಡಿದೆ. ಕೆಲವು ಪ್ರಕರಣಗಳಲ್ಲಿ 10 ಸಾವಿರ ರೂ.ಗಳಿದ್ದ ದಂಡದ ಮೊತ್ತವನ್ನು 1 ಸಾವಿರ ರೂ.ಗೆ ಇಳಿಸಲಾಗಿದೆ. ಹೆಲ್ಮೆಟ್ ಇಲ್ಲದ ಚಾಲನೆ, ಸೀಟ್ಬೆಲ್r ರಹಿತ ಚಾಲನೆಗಿರುವ ದಂಡವನ್ನು 1,000 ರೂ.ಗಳಿಂದ 500 ರೂ.ಗೆ ಇಳಿಸಲಾಗಿದೆ.

ಉದ್ದನೆಯ ಪ್ಯಾಂಟ್ ಧರಿಸಿ
ದಂಡ ಬೀಳಬಾರದು ಎಂದರೆ ಉತ್ತರಪ್ರದೇಶದ ಟ್ರಕ್‌ ಚಾಲಕರು ಅಂಗಿ ಅಥವಾ ಟಿ-ಶರ್ಟುಗಳನ್ನು ಧರಿಸಿ, ಉದ್ದನೆಯ ಪ್ಯಾಂಟುಗಳನ್ನೇ ತೊಡಬೇಕು. ಅಲ್ಲದೆ ವಾಹನ ಚಾಲನೆ ಮಾಡುವ ಎಲ್ಲರೂ ಶೂಗಳನ್ನೇ ಧರಿಸಬೇಕು. ಈ ಹೊಸ ನಿಯಮವು ರಾಜ್ಯದ ಎಲ್ಲ ಶಾಲಾ ವಾಹನಗಳ ಚಾಲಕರ ಸಮವಸ್ತ್ರಕ್ಕೂ ಅನ್ವಯವಾಗುತ್ತದೆ.

ಮೋಟಾರು ವಾಹನ ಕಾಯ್ದೆ 2019ರ ಸೆಕ್ಷನ್‌ 179ರ ಅನ್ವಯ, ವಸ್ತ್ರಸಂಹಿತೆ ನಿಯಮ ಉಲ್ಲಂಘನೆಗೆ 2,000 ರೂ. ದಂಡ ವಿಧಿಸಲಾಗುತ್ತದೆ. ವಸ್ತ್ರಸಂಹಿತೆ ಎನ್ನುವುದು 1939ರಿಂದಲೇ ಮೋಟಾರು ವಾಹನ ಕಾಯ್ದೆಯ ಭಾಗವಾಗಿತ್ತು ಎನ್ನುತ್ತಾರೆ ಟ್ರಾಫಿಕ್‌ ಎಎಸ್‌ಪಿ ಪೂರ್ಣೇಂದು ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next