ಕಾಪು: ಕಂಡ ಕಂಡಲ್ಲಿ ಕಸ ಎಸೆಯುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಬೆಳಪು ಗ್ರಾ.ಪಂ. ಮುಂದಾಗಿದ್ದು ಅದರಂತೆ ತ್ಯಾಜ್ಯ ಎಸೆಯಲು ಬಂದ ವಾಹನಕ್ಕೆ 2 ಸಾವಿರ ರೂ. ದಂಡ ವಿಧಿಸಲಾಗಿದೆ.
ಬೇಕಾಬಿಟ್ಟಿ ಕಸ ಎಸೆಯುವ ಪ್ರವೃತ್ತಿ ಹೆಚ್ಚಿದ ಹಿನ್ನೆಲೆಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಎಸೆದರೆ 2 ಸಾವಿರ ದಂಡ ಮತ್ತು ಮಾಹಿತಿದಾರರಿಗೆ 1 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಇದರೊಂದಿಗೆ ಗ್ರಾಮದಲ್ಲಿ ಗಸ್ತು, ಸಿಸಿಟೀವಿ ಜೋಡಿಸಲಾಗಿದೆ. ವಾರಕ್ಕೆ 3 ದಿನ ಮನೆಗಳಿಂದ ಕಸ ಸಂಗ್ರಹಣೆಗೆ ವ್ಯವಸ್ಥೆಯನ್ನೂ ಮಾಡಲಾಗಿತ್ತು
Advertisement
ರಿಕ್ಷಾ ಟೆಂಪೋದಲ್ಲಿ ಕಸವನ್ನು ತಂದು ಎಸೆಯುತ್ತಿದ್ದಾಗ ಮಾಹಿತಿದಾರರ ಮಾಹಿತಿ ಮೇರೆಗೆ ಪಿಡಿಒ ಸ್ಥಳಕ್ಕೆ ತೆರಳಿ ಟೆಂಪೋ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬಳಿಕ ಮುಚ್ಚಳಿಕೆ ಬರೆಸಿಕೊಂಡು 2 ಸಾವಿರ ರೂ. ದಂಡ ವಿಧಿಸಿದ್ದಾರೆ. ಮಾಹಿತಿದಾರರಿಗೆ 1 ಸಾವಿರ ರೂ. ಬಹುಮಾನವನ್ನು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನೀಡಲಾಗಿದೆ.
ಸ್ವಚ್ಛತೆ ವಿಚಾರದಲ್ಲಿ ರಾಜಿ ಇಲ್ಲ
ಗ್ರಾಮದಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ರಸ್ತೆಯಲ್ಲಿ ಕಸ ಎಸೆಯುವುದನ್ನು ಪಂಚಾಯತ್ ಗಂಭೀರ ಅಪರಾಧವೆಂದು ಪರಿಗಣಿಸಿದ್ದು, ಮೊದಲು ದಂಡ, ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು, ತಪ್ಪಿದಲ್ಲಿ ಪಂಚಾಯತ್ ಸವಲತ್ತುಗಳನ್ನು ನಿಲ್ಲಿಸಲಾಗುವುದು.
-ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾ.ಪಂ.