ಹಾನಗಲ್ಲ: ಮಧ್ಯವರ್ತಿಗಳ ಹಾವಳಿಯಿಂದ ಲೂಟಿಯಾಗುತ್ತಿರುವ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವಂತೆ ಮಾಡಿದ್ದರ ಫಲವಾಗಿ ದೇಶದ 1.15 ಲಕ್ಷ ಕೋಟಿ ರೂ.ಗೂ ಅಧಿಕ ಹಣ ಸದ್ಬಳಕೆಯಾಗುವಂತೆ ಮಾಡಿರುವ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಮುಖ್ಯಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ ಸಿಮೆಂಟ್ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ, 5 ಲಕ್ಷ ರೂ. ವೆಚ್ಚದಲ್ಲಿ ರಾಮಲಿಂಗೇಶ್ವರ ದೇವಸ್ಥಾನದ ಜೀಣೊìದ್ಧಾರ ಕಾಮಗಾರಿಗೆ, ನಿಟಗಿನಕೊಪ್ಪದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ಹಸಿಮೆಣಸು ಹಾಗೂ ಮಾವಿಗೆ 1759 ರೈತರಿಗೆ 8.18 ಕೋಟಿ ರೂ. ವಿಮಾ ಪರಿಹಾರ ಬಂದಿದೆ. ಇದರೊಂದಿಗೆ 16 ಸಾವಿರ ರೈತರಿಗೆ 15.11 ಕೋಟಿ ರೂ. ಅತಿವೃಷ್ಟಿ ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಮೇಲೆ ತಾಲೂಕಿಗೆ ಸುಮಾರು 700 ಕೋಟಿ ರೂ. ಅನುದಾನ ನೀರಾವರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹರಿದು ಬಂದಿದೆ. ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 75 ದಿನಗಳಲ್ಲಿ 1200 ಕೋಟಿ ರೂ. ಸೇರಿದಂತೆ ಈ ವರೆಗೆ 2000 ಕೋಟಿ ರೂ. ಅನುದಾನ ಬಂದಿದೆ ಎಂದರು.
ಹಾನಗಲ್ಲ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ 96 ಕೋಟಿ ರೂ. ಹಣ ಖರ್ಚು ಮಾಡಿ ವಿದ್ಯಾರ್ಥಿ ನಿಲಯ, ಕಾಂಕ್ರಿಟ್ ರಸ್ತೆ, ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ ನಿರ್ಮಾಣ ಮಾಡಲಾಗುವುದು. ಅಲ್ಪಸಂಖ್ಯಾತ ಜನಾಂಗಗಳು ಹೆಚ್ಚಾಗಿರುವ ಬಡಾವಣೆಗಳ ಮೂಲಭೂತ ಅಭಿವೃದ್ಧಿಗೆ 8.67 ಕೋಟಿ ರೂ. ಬಿಡುಗಡೆಯಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಬಡವರಿಗೆ ಕೊಡುವಂತಹ ದೊಡ್ಡ ಪ್ರಮಾಣದ ಪ್ರೋತ್ಸಾಹ ಧನ ಹಿಂದಿನ ಸರ್ಕಾರಗಳು ನೀಡಲು ಸಾಧ್ಯವಾಗಿಲ್ಲ. ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಜನಪ್ರತಿನಿ ಧಿಗಳು ಇದ್ದಾಗ ಮಾತ್ರ ಇವೆಲ್ಲ ಸಾಧ್ಯವಾಗುತ್ತವೆ ಎಂದು ಸಂಸದ ಉದಾಸಿ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ ಮಾತನಾಡಿ, ಅತಿವೃಷ್ಟಿಯಿಂದ ಸಂಪೂರ್ಣ ಬೆಳೆ ಹಾನಿಗೊಳಗಾಗಿ ಕೃಷಿಕ ಸಮಾಜ ಕೆಟ್ಟ ಪರಿಸ್ಥಿತಿ ಅನುಭವಿಸುವಂತಾಗಿತ್ತು. ಆದರೆ ಬಿ.ಎಸ್ .ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ರೈತ ಸಮುದಾಯಕ್ಕೆ ಆಸರೆಯಾಗಿ ಹೊಸ ಬೆಳೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಕೇಂದ್ರ ಸರಕಾರದ 6 ಸಾವಿರ ರೂ. ಹಾಗೂ ರಾಜ್ಯ ಸರಕಾರದ 4 ಸಾವಿರ ರೂ.ಗಳ ಸಹಾಯಧನ ನೀಡಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಮುಖಂಡರಾದ ಹನುಮಂತಪ್ಪ ಗೊಂದಿ, ಲೋಕೇಶ ಹೊಳಲದ, ಸಿದ್ದನಗೌಡ ಪಾಟೀಲ, ಮಾನಿಂಗಪ್ಪ ಮನ್ನಂಗಿ, ಪಿ.ಟಿ.ಮಂತಗಿ, ಎಸ್. ಎಸ್.ಮನ್ನಂಗಿ, ಎಸ್.ಆರ್.ಕ್ಯಾಸನಕೇರಿ, ಕೃಷ್ಣ ಡೊಳ್ಳೇಶ್ವರ, ರತನ, ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.