Advertisement

200 ರೂ. ಆಸುಪಾಸಿನಲ್ಲಿ ಕೆಜಿ ರಬ್ಬರ್‌ ಬೆಲೆ; ನಿರುತ್ಸಾಹ ತೋರಿದ್ದ ರೈತರಲ್ಲಿ ಮೂಡಿದ ಭರವಸೆ

12:16 AM Apr 09, 2024 | Team Udayavani |

ಬೆಳ್ತಂಗಡಿ: ವಿದೇಶದಿಂದ ಕಡಿಮೆ ದರಕ್ಕೆ ರಬ್ಬರ್‌ ಆಮದು ಆಗುತ್ತಿದ್ದ ಪರಿಣಾಮ ದೇಶದಲ್ಲಿ ರಬ್ಬರ್‌ ಬೆಳೆ ಧಾರಣೆ ದಿನದಿಂದ ದಿನಕ್ಕೆ ಕುಸಿಯತೊಡಗಿತ್ತು. ಪರಿಣಾಮ ಹಲವೆಡೆ ರಬ್ಬರ್‌ಗೆ ಪರ್ಯಾಯ ಅಡಿಕೆ ಬೆಳೆಯತ್ತ ರೈತರು ಒಲವು ತೋರಿದ್ದರು. ಆದರೆ ಅಚ್ಚರಿ ಎಂಬಂತೆ ರಬ್ಬರ್‌ ಬೆಲೆ ಎಪ್ರಿಲ್‌ ಅಂತ್ಯಕ್ಕೆ ಕೆ.ಜಿ.ಗೆ 200 ರೂ. ತಲುಪುವ ಸಾಧ್ಯತೆ ಕಂಡುಬಂದಿದೆ.

Advertisement

ಒಂದು ತಿಂಗಳಿನಿಂದ ರಬ್ಬರ್‌ ದರ ಸರಾಸರಿ ಏರಿಕೆ ಕಂಡಿದ್ದು, ಸೋಮವಾರ ಕೆ.ಜಿ. ಒಂದಕ್ಕೆ (1ಎಕ್ಸ್‌ ಗ್ರೇಡ್‌) 195 ರೂ.ಗೆ ತಲುಪಿದೆ. ಪ್ರಸಕ್ತ ದ.ಕ., ಉಡುಪಿ ಜಿಲ್ಲೆಯಲ್ಲಿ 11,504 ಹೆಕ್ಟೇರ್‌ ರಬ್ಬರ್‌ ಬೆಳೆಯಿದೆ. ಭಾರತದಲ್ಲಿ 8.5 ಲಕ್ಷ ಹೆಕ್ಟೇರ್‌ ರಬ್ಬರ್‌ ಕೃಷಿ ಹೊಂದಿದ್ದು, ಬಹುಪಾಲು ಕೇರಳ, ತಮಿಳುನಾಡು, ತ್ರಿಪುರ, ಅಸ್ಸಾಂನದ್ದಾಗಿದೆ. ಆದರೆ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತವಾಗಿರುವ ಪರಿಣಾಮ ಜಾಗತಿಕವಾಗಿ ರಬ್ಬರ್‌ಗೆ ಬೇಡಿಕೆ ಉಂಟಾಗಿದೆ. ಇವೆಲ್ಲದರ ಪರಿಣಾಮ ಬೆಲೆ 200 ರೂ. ಗಡಿ ದಾಟುವ ಸಾಧ್ಯತೆ ಕಂಡುಬಂದಿದೆ.
ಹಿಂದೆ ಅಡಿಕೆಗೆ ಬೆಲೆ ಇಲ್ಲದಿದ್ದಾಗ ರಬ್ಬರ್‌ ಬೆಲೆ 250 ರೂ. ಆಸುಪಾಸಿತ್ತು. ಹಾಗಾಗಿ ಅಡಿಕೆ ಮರಗಳನ್ನು ತೆರವು ಗೊಳಿಸಿ ರಬ್ಬರ್‌ ಕೃಷಿಯತ್ತ ಮುಖ ಮಾಡಿದ್ದರು. 2021-22ರಲ್ಲಿ ರಬ್ಬರ್‌ನ ಕನಿಷ್ಠ ಧಾರಣೆ 120 ರೂ.ಗೆ ಇಳಿದಿತ್ತು. ಅಷ್ಟರಲ್ಲಿ ಅಡಿಕೆಗೆ ಏರಿದ ಪರಿಣಾಮ ಮತ್ತೆ ಅಡಿಕೆ ಕೃಷಿಯತ್ತ ವಾಲಿದ ಕೃಷಿಕರೇ ಹೆಚ್ಚು. ಕಾರಣ ರಬ್ಬರ್‌ ದರ ನೆಲಕಚ್ಚಿ ಉತ್ಪಾದನ ವೆಚ್ಚವು ಸಿಗದ ಕಾರಣ ರಬ್ಬರ್‌ ಕೃಷಿಕರು ಸಂಪೂರ್ಣ ಕಂಗಾಲಾಗಿದ್ದರು. ಪ್ರಸ್ತುತ ದರ ಏರಿಕೆ ರಬ್ಬರ್‌ ಕೃಷಿಕರಲ್ಲಿ ಕೊಂಚ ಉತ್ಸಾಹವನ್ನು ಮೂಡಿಸಿದೆ.

ರಬ್ಬರ್‌ಗೆ ಕೆ.ಜಿ. ಒಂದರ 195 ರೂ. ಉತ್ಪಾದನ ವೆಚ್ಚ ಬೇಕಾಗುತ್ತದೆ ಎಂದು ಸರಕಾರವೇ ಪರಿಗಣಿಸಿದೆ. ಆದರೆ ಕೆಲವು ವಷ‌ìಗಳಿಂದ 150 ರೂ. ಆಸುಪಾಸಿನಲ್ಲಿ ಇದ್ದು ಕೃಷಿಕರಿಗೆ ನಷ್ಟದಾಯಕವಾಗಿತ್ತು. ದರ ಕುಸಿತ, ಟ್ಯಾಪಿಂಗ್‌ ಕಾರ್ಮಿಕರ ಕೊರತೆಯಿಂದ ಕೆಲವು ತೋಟಗಳಲ್ಲಿ ಟ್ಯಾಪಿಂಗ್‌ ಕೂಡ ನಿಲ್ಲಿಸಲಾಗಿತ್ತು. ಈ ಅವಧಿಯಲ್ಲಿ ಮಲೇಶಿಯಾ, ವಿಯೆಟ್ನಾಮ್‌ ಸೇರಿದಂತೆ ವಿದೇಶಗಳಿಂದ ಆಮದು ಆಗುತ್ತಿತ್ತು. ಪ್ರಸಕ್ತ ಬೇಡಿಕೆಯಷ್ಟು ಇಳುವರಿ ಕಾಣದೇ ಇರುವುದರಿಂದ ಜಾಗತಿಕವಾಗಿ ರಬ್ಬರ್‌ ಧಾರಣೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಟ್ಟ
ದಲ್ಲೂ ರಬ್ಬರ್‌ ಉತ್ಪಾದನೆ ಕುಸಿದಿದೆ. ಆದರೆ ಬೇಡಿಕೆ ಯಥಾ ಸ್ಥಿತಿಯಲ್ಲಿರುವ ಕಾರಣ ದರ ಏರಿಕೆಯಾಗಿದೆ. ಭಾರತದಲ್ಲಿ ವಾರ್ಷಿಕ 12 ಲಕ್ಷ ಟನ್‌ ಬೇಡಿಕೆ ಇದೆ. ಈ ಹಿಂದೆ 8 ಲಕ್ಷ ಟನ್‌ ಇದ್ದ ಉತ್ಪಾದನೆ ಪ್ರಸ್ತುತ 6 ಲಕ್ಷ ಟನ್‌ಗೆ ಕುಸಿದಿದೆ. ಎಪ್ರಿಲ್‌ ಅಂತ್ಯಕ್ಕೆ 200 ರೂ. ತಲುಪಲಿದ್ದು, ಹೀಗೆ ಬೇಡಿಕೆ ಮುಂದುವರಿದರೆ ವರ್ಷಾಂತ್ಯಕ್ಕೆ 300 ರೂ.ಗೆ ತಲುಪಿದರೂ ಅಚ್ಚರಿಯಿಲ್ಲ.
– ಶ್ರೀಜಾ, ಸಹಾಯಕ ಆಯುಕ್ತರು, ರಬ್ಬರ್‌ ಬೋರ್ಡ್‌ ಪ್ರಾದೇಶಿಕ ಕಚೇರಿ, ದ.ಕ.

ಎ. 9ರ ರಬ್ಬರ್‌ ದರ ಕೆ.ಜಿ.ಗೆ
1ಎಕ್ಸ್‌-195 ರೂ.
3-181.50 ರೂ.
4-181 ರೂ.
5-174.50 ರೂ.
ಲೋಟ್‌-164.50 ರೂ.
ಸ್ಕ್ರಪ್1-111 ರೂ.
ಸ್ಕ್ರಪ್ 2-103 ರೂ.

Advertisement

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next