Advertisement
ಗುಬ್ಬಿ ತಾಲೂಕಿನ ತಿಪ್ಪೂರಿನ ಕೋಡಿಕೆಂಪಮ್ಮ ದೇವಾಲಯದ ಅರ್ಚಕ ವೃತ್ತಿ ಮಾಡುವ ಕುಟುಂಬ ಇನಾಮಿ ಜಮೀನಿನಲ್ಲಿ ಬೆಳೆದಿದ್ದ 200 ಅಡಕೆ ಗಿಡ ಮತ್ತು 50 ತೆಂಗಿನ ಮರಗಳನ್ನು ಅಧಿಕಾರಿಗಳು ಮನುಷ್ಯತ್ವ ಮರೆತು ಮಾ.6ರಂದು ಧರೆಗುರುಳಿಸಿದ್ದು, ಇದರಿಂದ ಕುಟುಂಬ ಬೀದಿಗೆ ಬೀಳುವಂತಾಗಿದೆ. ತಾಲೂಕು ಆಡಳಿತ ನೇರ ಹೊಣೆ ಎಂದು ಪ್ರತಿಭಟನಾಕಾರರು ದೂರಿದರು.
Related Articles
Advertisement
ವಿವಾದಿತ ಜಮೀನು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ ನಂತರ ಜಿಲ್ಲಾಧಿಕಾರಿ ಕೋರ್ಟ್‌ನಲ್ಲಿದ್ದು, ಯಥಾಸ್ಥಿತಿ ಮುಂದುವರಿಸುವಂತೆ ಹೇಳಿದ್ದರೂ, ಎರಡು ಕುಟುಂಬಕ್ಕೆ ಆಧಾರವಾಗಿದ್ದ ತೆಂಗು ಮತ್ತು ಅಡಕೆ ಮರ ಧರೆಗುರುಳಿಸಿದ್ದಾರೆ. ತಹಶೀಲ್ದಾರ್, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರನ್ನು ಅಮಾನತು ಮಾಡಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಯಾವ ಅಧಿಕಾರಿ ಆಗಮಿಸದ್ದಕ್ಕೆ ಅಸಮಾಧಾನಗೊಂಡ ಪ್ರತಿಭಟನಾಕಾರರು ಕಚೇರಿಗೆ ಬೀಗ ಜಡಿಯಲು ಮುಂದಾದರು. ಪೊಲೀಸರು ಧರಣಿ ನಿರತರನ್ನು ಸಮಾಧಾನ ಪಡಿಸಿದರು. ಸಂಜೆ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ದಾಖಲೆ ಮತ್ತು ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಮುಖಂಡರಾದ ಸಾಕಸಂದ್ರ ದೇವರಾಜು, ಎ.ನರಸಿಂಹಮೂರ್ತಿ, ಎನ್.ಲಕ್ಷಿರಂಗಯ್ಯ, ಹೇರೂರು ನಾಗಣ್ಣ, ಜಿ.ಎನ್.ಎಚ್.ಡಿ.ಯಲ್ಲಪ್ಪ, ಕೃಷ್ಣಮೂರ್ತಿ, ಡಿ.ದೇವರಾಜು, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅರುಣ್, ವಿನಯ್, ರೈತಸಂಘದ ಕೆ.ಎನ್.ವೆಂಕಟೇಗೌಡ, ದಲಿತ ಮುಖಂಡ ಮಾರನಹಳ್ಳಿ ಶಿವಯ್ಯ ಇತರರಿದ್ದರು.
ಅಸ್ವಸ್ಥಗೊಂಡ ಮಹಿಳೆ: ಸೋಮವಾರ ಬೆಳಗ್ಗೆಯಿಂದಲೇ ಆರಂಭವಾದ ಉಪವಾಸ ಸತ್ಯಾಗ್ರಹ ಸಂಜೆ ವೇಳೆಗೆ ಆಕ್ರೋಶ ಕಟ್ಟೆ ಒಡೆಯಿತು. ಆಹಾರ ಸೇವಿಸದ ಸಂತ್ರಸ್ತ ಮಹಿಳೆ ಸಿದ್ದಮ್ಮ ತೀವ್ರ ಅಸ್ವಸ್ಥಗೊಂಡರು. ಸ್ಥಳಕ್ಕೆ ಆಗಮಿಸಿದ ವೈದ್ಯರು ತುರ್ತು ಚಿಕಿತ್ಸೆ ಆಗತ್ಯವಿದೆ, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಬೇಕೆಂದು ಹೇಳಿದ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಯಿತು. ಸುಮಾರು 7 ತಾಸು ಧರಣಿ ನಡೆದರೂ ಅಹವಾಲು ಸ್ವೀಕರಿಸದೆ ಕಿಂಚಿತ್ತೂ ಕಾಳಜಿ ತೋರದ ತಹಶೀಲ್ದಾರ್ ಮಮತ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲಿನ ಅಧಿಕಾರಿಗಳ ದರ್ಪ ಸರಿಯಲ್ಲ. ಬಡ ಕುಟುಂಬಕ್ಕೆ ಆಸರೆಯಾಗಿದ್ದ ತೆಂಗು ಮತ್ತು ಅಡಕೆ ಮರಗಳು ಕಡಿಯಲು ಅಧಿಕಾರಿಗಳಿಗೆ ಹಕ್ಕಿಲ್ಲ. ಜಮೀನು ಒತ್ತುವರಿ ಬಗ್ಗೆ ನೊಟೀಸ್ ನೀಡದೆ ಏಕಾಏಕಿ ಮರ ಕಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಜಿಲ್ಲಾಧಿಕಾರಿ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕಿತ್ತು. ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ದರ್ಪ ಮೆರೆದಿರುವುದು ರೈತರಿಗೆ ಆದ ಅನ್ಯಾಯವಾಗಿದೆ. ಮೇಲಾಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕು.-ಎ.ಗೋವಿಂದರಾಜು, ರೈತಸಂಘದ ಜಿಲ್ಲಾಧ್ಯಕ್ಷ