ಉಡುಪಿ: ಲಾಕ್‌ಡೌನ್ ಸಡಿಲಿಕೆ ಬಳಿಕ ಜಿಲ್ಲಾಡಳಿತ ನಗರದೊಳಗೆ ಸಿಲುಕಿಕೊಂಡಿರುವ ಹೊರ ಜಿಲ್ಲೆಗಳ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡುತ್ತಿದ್ದು, ಶನಿವಾರ 8 ಬಸ್‌ಗಳಲ್ಲಿ 200 ಮಂದಿ ವಲಸಿಗರು ಜಿಲ್ಲೆಯಿಂದ ಪ್ರಯಾಣ ಬೆಳೆಸಿದ್ದಾರೆ.
ಸಾರಿಗೆ ಸಂಸ್ಥೆಯ ಎಂಟು ಬಸ್‌ಗಳಲ್ಲಿ ವಲಸೆ ಕಾರ್ಮಿಕರನ್ನು ಬೆಳಗಾವಿ, ಬಿಜಾಪುರ, ಅಥಣಿ, ಕುಷ್ಟಗಿ, ಗದಗ ಸಹಿತ ವಿವಿಧ ಜಿಲ್ಲೆಗಳಿಗೆ ಕಾರ್ಮಿಕರನ್ನು ಕಳುಹಿಸಿಕೊಡಲಾಗಿದೆ. ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ತೊಂದರೆ ಆಗದ ರೀತಿಯಲ್ಲಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲಾಗುತ್ತಿದೆ.
ಜಿಲ್ಲೆಗೆ ಉದ್ಯೋಗ ಅರಸಿ ಬಂದಿದ್ದ ಹಲವಾರು ಕಾರ್ಮಿಕರು ಇಲ್ಲಿ ವಾಸವಾಗಿದ್ದರು. ಕಟ್ಟಡ ಸಹಿತ ಹಲವಾರು ಕಾಮಗಾರಿಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಸೇರಿಕೊಂಡಿದ್ದರು. ಲಾಕ್‌ಡೌನ್‌ನಿಂದ ಅವರೆಲ್ಲ ತೊಂದರೆಗೆ ಒಳಗಾಗಿದ್ದರು. ಊರಿಗೆ ಹೋಗಲು ಬಸ್, ರೈಲು ವ್ಯವಸ್ಥೆಗಳಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ರಾಜ್ಯ ಸರಕಾರ ಹೊರ ಜಿಲ್ಲೆಗಳಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರಿಂದ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆಯನ್ನು ಮಾಡಿತ್ತು. ಇದಕ್ಕೂ ಮೊದಲು, ಹಿಂದಿನ ದಿನ ಜಿಲ್ಲಾಡಳಿತ ಸುಮಾರು 500 ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಟ್ಟಿದೆ.
ಲಾಕ್‌ಡೌನ್ ವೇಳೆ ಕಾಲ್ನಡಿಗೆಯಲ್ಲಿ ಊರಿಗೆ ಹೊರಟವರನ್ನು ಗಡಿಗಳಲ್ಲಿ ತಡೆದು ಶಿಬಿರಗಳಲ್ಲಿ ತಂಗಲು ಸೂಚಿಸಲಾಗಿತ್ತು. ಸದ್ಯ 25 ಸರಕಾರಿ ಬಸ್‌ಗಳಿಗೆ ರೂಟ್ ಫಿಕ್ಸ್ ಮಾಡಿ ಕಳುಹಿಸಿಕೊಡಲಾಗಿದೆ.
ಇನ್ನುಳಿದವಲರಿಗೆ ಹೆಸರು ನೊಂದಾಯಿಸಲು ಸೂಚನೆ ನೀಡಲಾಗಿದೆ. ಕಾರ್ಮಿಕರ ಬೇಡಿಕೆ ಅನುಸಾರ ರಾಜ್ಯ ಸಾರಿಗೆ ಬಸ್ ಒದಗಿಸಲಾಗುವುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ: ಜಿಲ್ಲಾಡಳಿತ ವಲಸೆ ಕಾರ್ಮಿಕರು ಊರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದ್ದು, ಬೀಡಿನಗುಡ್ಡೆ ಮೈದಾನದಲ್ಲಿ ತಮ್ಮ ಊರಿನ ಬಸ್‌ಗಾಗಿ ಮಹಿಳಾ ಕಾರ್ಮಿಕರೊಬ್ಬರು ಕಾಯುತ್ತಿರುವ ದೃಶ್ಯ.
ಚಿತ್ರ: ಆಸ್ಟ್ರೋ ಮೋಹನ್