Advertisement

200 ಮೀ. ಕಡಲ ತಡಿಯಲ್ಲಿ 12 ಸಾವಿರ ಕೆ.ಜಿ. ಚಪ್ಪಲಿಗಳು!

12:01 AM Jun 12, 2020 | Sriram |

ಕುಂದಾಪುರ: ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನವರು ಸುಮಾರು 60 ವಾರಗಳ ಕಾಲ ಕುಂದಾಪುರದ ಕಡಲ ತಡಿಯನ್ನು ಸ್ವಚ್ಛ ಗೊಳಿಸಿದ್ದು , ಕೇವಲ ಏಳು ವಾರಗಳ ಅವಧಿ ಸ್ವಚ್ಛತೆ ಸಂದರ್ಭ 200 ಮೀ. ಸಮುದ್ರ ತೀರದಲ್ಲಿ ಒಟ್ಟು 12 ಸಾವಿರ ಕೆ.ಜಿ. ಚಪ್ಪಲಿಗಳು ದೊರೆತಿವೆ ಎಂಬ ಆಘಾತಕಾರಿ ಅಂಶ ಗೊತ್ತಾಗಿದೆ.

Advertisement

3.5 ಕಿ.ಮೀ. ವ್ಯಾಪ್ತಿಯ ಕೋಡಿ ಬೀಚ್‌ ನಲ್ಲಿ ಈವರೆಗೆ ಸಂಗ್ರಹಿಸಿದ ಒಟ್ಟು ತ್ಯಾಜ್ಯದ ಪೈಕಿ ರಬ್ಬರ್‌ ಹಾಗೂ ಪ್ಲಾಸ್ಟಿಕ್‌ನ ಚಪ್ಪಲಿ ಗಳೇ ಅಧಿಕವಿದ್ದು ಸರಿಸುಮಾರು 12 ಸಾವಿರ ಕೆಜಿಯಷ್ಟಾಗಿದೆ. ರೀಫ್ ವಾಚ್‌ ಮರೀನ್‌ ಕನ್ಸರ್ವೇಶನ್‌ ಸಂಸ್ಥೆ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸಹಯೋಗದಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದ್ದು ಕಳೆದ ವರ್ಷ ನವೆಂಬರ್‌ನಿಂದ ಡಿಸೆಂಬರ್‌ ನಡುವಿನ ಸ್ವಚ್ಛತಾ ಕಾರ್ಯದ ಅವಧಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ. 11 ಕೆಜಿ ಮೀನುಗಾರಿಕೆಗೆ ಬಳಸುವ ಫೈಬರ್‌ ಉತ್ಪನ್ನಗಳು, 540 ಕೆ.ಜಿ .ಗಾಜಿನ ಬಾಟಲಿಗಳು, 167 ಕೆ.ಜಿ. ಪ್ಲಾಸ್ಟಿಕ್‌ ತ್ಯಾಜ್ಯ, 60 ಕೆ.ಜಿ.ಯಷ್ಟು ಥರ್ಮೋಕೂಲ್‌, 185 ಕೆ.ಜಿ. ವೈದ್ಯಕೀಯ ತ್ಯಾಜ್ಯ, 13 ಕೆ.ಜಿ. ಇಲೆಕ್ಟ್ರಾನಿಕ್‌ ತ್ಯಾಜ್ಯ ದೊರೆತಿವೆ.

ತ್ಯಾಜ್ಯ ರಾಶಿಯಿಂದ ಸಮುದ್ರಕ್ಕೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿರುವುದನ್ನು ಮನಗಂಡು ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ನವರು ಸಮುದ್ರ ತೀರದಲ್ಲಿ ಪ್ರತಿ ವಾರ ಸ್ವಚ್ಛತೆ ನಡೆಸುತ್ತಿದ್ದರು. ಸ್ವಚ್ಛತೆ ಸಂದರ್ಭ ಚಪ್ಪಲಿಗಳಷ್ಟೇ ಅಲ್ಲ; ಮದ್ಯದ, ನೀರಿನ ಬಾಟಲಿ, ಔಷಧದ ಬಾಟಲ್‌ಗ‌ಳು ಕೂಡಾ ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿವೆ.

ಕೋವಿಡ್‌ -19 ಲಾಕ್‌ಡೌನ್‌ ಘೋಷಣೆ ಯಾಗುವವರೆಗೂ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿತ್ತು. ವೈದ್ಯರು, ಟೆಕ್ಕಿಗಳು, ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಎಂಬ ಭೇದವಿಲ್ಲದೆ ಎಷ್ಟೇ ಕಡಿಮೆ ಅಥವಾ ಹೆಚ್ಚು ಜನರಿದ್ದರೂ ಸ್ವಚ್ಛತಾ ಕಾರ್ಯ ಮಾತ್ರ ಅನೂಚಾನವಾಗಿ ನಡೆಸಲಾಗಿತ್ತು.

ಮಾಸ್ಕ್ ಎಲ್ಲೆಂದರಲ್ಲಿ ಎಸೆಯುವ ಆತಂಕ
ಲಾಕ್‌ಡೌನ್‌ನಿಂದಾಗಿ ಪರಿಸರವೇನೋ ಸ್ವತ್ಛವಾಗಿದೆ. ಆದರೆ ಪ್ರತಿಯೊಬ್ಬರೂ ಮಾಸ್ಕ್ ಬಳಸುತ್ತಿದ್ದು ಅದನ್ನು ಎಲ್ಲೆಂದರಲ್ಲಿ ಎಸೆದರೆ, ಸರಿಯಾಗಿ ವಿಲೇವಾರಿ ಮಾಡದೆ ಇದ್ದರೆ ಅದೇ ದೊಡ್ಡ ತ್ಯಾಜ್ಯರಾಶಿಯಾಗಿ ಕಂಟಕ ಉಂಟಾಗಲಿದೆ. ಈ ನಿಟ್ಟಿನಲ್ಲಿ ಎಷ್ಟು ಚಿಂತಿಸಿದರೂ ಕಡಿಮೆಯೇ.
-ಭರತ್‌ ಬಂಗೇರ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next